ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Critical speed

ನಿರ್ಧಾರಕ ವೇಗ – ದ್ರವಗಳ ಹರಿವಿನಲ್ಲಿ ಶಾಂತ ಹರಿವಿನಿಂದ ಪ್ರಕ್ಷುಬ್ಧ ಹರಿವಿಗೆ ಆ ದ್ರವವು ಬದಲಾಗುವಂತಹ ವೇಗ.

Crown glass

ಮಸೂರ ತಯಾರಿಕಾ ಗಾಜು ಅಥವಾ ದೃಶ್ಯೋಪಕರಣ ತಯಾರಿಕಾ ಗಾಜು – ಸಾಕಷ್ಟು ಗಟ್ಟಿಯಾಗಿದ್ದರೂ ಸುಲಭವಾಗಿ ಉಜ್ಜಿ ಹೊಳಪು ನೀಡಲು ಸಾಧ್ಯವುಳ್ಳ ಗಾಜು. ಇದು ತುಂಬಾ ಪಾರದರ್ಶಕವಾಗಿರುತ್ತದೆ.

Cryogenics

ಶೀತ ಭೌತಶಾಸ್ತ್ರ – ಬಹಳವೇ ಕಡಿಮೆ ತಾಪಮಾನಕ್ಕೆ ಸಂಬಂಧಿಸಿದ ಭೌತಶಾಸ್ತ್ರ.

Crystal

ಹರಳು – ಸಮಕಟ್ಟಾದ ಮೇಲ್ಮೈಗಳುಳ್ಳ ಒಂದು ಘನವಸ್ತು‌. ಇಲ್ಲಿ ಒಂದೇ ವಸ್ತುವಿನ ಹರಳುಗಳು ಹೇಗೆ ಬೆಳೆಯುತ್ತವೆ ಅಂದರೆ ಅವುಗಳ ಮೇಲ್ಮೈಗಳ ನಡುವಿನ ಕೋನವು ಒಂದೇ ಆಗಿರುತ್ತದೆ.

Crystal habit

ಹರಳು ನಿವಾಸ – ಹರಳಿನ ಬಾಹ್ಯ ರೂಪವನ್ನು ಹರಳು ನಿವಾಸ ಅನ್ನುತ್ತಾರೆ.

Crystallography

ಹರಳು ಅಧ್ಯಯನ – ಹರಳುಗಳ ರಚನೆಯನ್ನು ಅಧ್ಯಯನ ಮಾಡಲು ಬಳಸುವಂತಹ ವಿಧಾನ.

Curie

ಕ್ಯೂರಿ – ವಿಜ್ಞಾನಿ ಮೇಡಂ ಕ್ಯೂರಿಯವರ ನೆನಪಿನಲ್ಲಿ ಇಡಲಾಗಿರುವ ಒಂದು  ಮೂಲಮಾನ. ಒಂದು ವಸ್ತುವಿನ ವಿಕಿರಣ ಚಟುವಟಿಕೆಯನ್ನು(Radio activity) ಅಳೆಯುವ ಮೂಲಮಾನವಿದು.

Curie point

ಕ್ಯೂರಿ ಬಿಂದು‌ ಅಥವಾ ಕ್ಯೂರಿ ಉಷ್ಣತೆ – ಯಾವ ಉಷ್ಣತೆಯ ಮೇಲ್ಪಟ್ಟು ಸಹಜ ಅಯಸ್ಕಾಂತೀಯ ವಸ್ತುಗಳು ದುರ್ಬಲ ಅಯಸ್ಕಾಂತೀಯ ವಸ್ತುಗಳಂತೆ ವರ್ತಿಸುತ್ತವೋ ಆ ಉಷ್ಣತೆ.

Current

ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹವಿದು. ವಿದ್ಯುತ್ ಚಾಲಕ‌ ಶಕ್ತಿಯ ಪ್ರಭಾವದಿಂದಾಗಿ ಎಲೆಕ್ಟ್ರಾನುಗಳು ಅಥವಾ ವಿದ್ಯುದಣುಗಳು (ಅಯಾನುಗಳು) ಚಲಿಸುವುದರ ಫಲವೇ ವಿದ್ಯುತ್ಪ್ರವಾಹ.

Cycle 

ಆವರ್ತನ / ಸುತ್ತು – ಒಂದು‌ ವ್ಯವಸ್ಥೆಯು‌ ಒಳಗಾಗುವಂತಹ ಬದಲಾವಣೆಗಳ ಅಥವಾ ಕಾರ್ಯಾಚರಣೆಗಳ  ಒಂದು ಸರಣಿ ಅಥವಾ ಒಂದು‌ ಕಟ್ಟು. ಇವು ಮುಗಿಯುತ್ತಿದ್ದಂತೆ ವ್ಯವಸ್ಥೆಯು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ. 

Page 25 of 80

Kannada Sethu. All rights reserved.