ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Field coil

ಫೀಲ್ಡ್ ಕಾಯಿಲ್ – ಕಾಂತಕ್ಷೇತ್ರ ಸುರುಳಿ – ಒಂದು ವಿದ್ಯುತ್ ಉತ್ಪಾದಕ ಯಂತ್ರ ಅಥವಾ ಒಂದು ವಿದ್ಯುತ್ ಜನಕ ಯಂತ್ರದಲ್ಲಿನ ಕಾಂತಕ್ಷೇತ್ರವನ್ನು ಉತ್ಪಾದಿಸುವ ಸುರುಳಿ‌.

Field effect transistor( FET)

ಫೀಲ್ಡ್ ಎಫೆಕ್ಟ್ ಟ್ರ್ಯಾನ್ಸಿಸ್ಟರ್ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರು – ಇದು ಒಂದು ರೀತಿಯ   ಕಾಂತೀಯ  ಟ್ರ್ಯಾನ್ಸಿಸ್ಟರು. ಇದು ಅರೆವಾಹಕದಲ್ಲಿನ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ವಿದ್ಯುತ್ ಕ್ಷೇತ್ರವನ್ನು ಬಳಸುತ್ತದೆ.

Field emission

ಫೀಲ್ಡ್ ಎಮಿಷನ್ – ಕ್ಷೇತ್ರೀಯ ಹೊರಸೂಸುವಿಕೆ – ಕಾಯಿಸಿದರೂ ತನ್ನ ತಾಪಮಾನವು ಹೆಚ್ಚಾಗದಿರುವ ಮೇಲ್ಮೈ ಯೊಂದರಿಂದ, ತನ್ನಲ್ಲಿರುವ ಪ್ರಬಲ ವಿದ್ಯುತ್ ಕ್ಷೇತ್ರದಿಂದಾಗಿ ಎಲೆಕ್ಟ್ರಾನುಗಳು ಹೊರಸೂಸುವುದು‌.

Field emission microscope 

ಫೀಲ್ಡ್ ಎಮಿಷನ್ ಮೈಕ್ರೋಸ್ಕೋಪ್ – ಕ್ಷೇತ್ರೀಯ ಹೊರಸೂಸುವಿಕೆಯುಳ್ಳ ಸೂಕ್ಷ್ಮದರ್ಶಕ – ಇದು ಒಂದು ರೀತಿಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ. ಇದರಲ್ಲಿ ನಿರ್ವಾತದಲ್ಲಿರುವ ಲೋಹದ ಚೂಪುತುದಿಯೊಂದಕ್ಕೆ ಹೆಚ್ಚಿನ ವಿದ್ಯುತ್ ಸಾಮರ್ಥ್ಯವ್ಯತ್ಯಾಸವನ್ನು‌‌‌ ನೀಡಿ, ಎಲೆಕ್ಟ್ರಾನುಗಳು ಹೊರಸೂಸುವಂತೆ ಮಾಡಲಾಗುತ್ತದೆ.

Field ionisation microscope

ಫೀಲ್ಡ್ ಐಯೋನೈಸೇಷನ್ ಮೈಕ್ರೋಸ್ಕೋಪ್ – ಇದು ಕ್ಷೇತ್ರೀಯ ಹೊರಸೂಸುವಿಕೆಯುಳ್ಳ  ಸೂಕ್ಷ್ಮದರ್ಶಕದಂತೆಯೇ ಕೆಲಸ ಮಾಡುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ, ಲೋಹದ ಚೂಪುತುದಿಯನ್ನು ನಿರ್ವಾತದಲ್ಲಿಡುವ ಬದಲು ಕಡಿಮೆ ಒತ್ತಡವುಳ್ಳ ಅನಿಲವೊಂದರಲ್ಲಿ ( ಉದಾಹರಣೆಗೆ ಹೀಲಿಯಂ) ಇಟ್ಟಿರುತ್ತಾರೆ.

Field lens 

ಫೀಲ್ಡ್ ಲೆನ್ಸ್ – ಕ್ಷೇತ್ರ ಮಸೂರ – ಬೆಳಕುವಿಜ್ಞಾನದ ಒಂದು ಉಪಕರಣದಲ್ಲಿನ ಮಸೂರಸಂಯೋಜನೆಗಳಲ್ಲಿ, ಕಣ್ಣಿನಿಂದ ಗರಿಷ್ಠ ದೂರದಲ್ಲಿರುವ ‌ಮಸೂರ.

Field magnet

ಫೀಲ್ಡ್ ಮ್ಯಾಗ್ನೆಟ್ – ಕ್ಷೇತ್ರ ಅಯಸ್ಕಾಂತ – ಒಂದು ವಿದ್ಯುತ್ ಉಪಕರಣದಲ್ಲಿ ಕಾಂತಕ್ಷೇತ್ರವನ್ನು ನೀಡುವಂತಹ ಅಯಸ್ಕಾಂತ. ಕೆಲವು‌ ಚಿಕ್ಕ ವಿದ್ಯುಜ್ಜನಕ ಅಥವಾ ವಿದ್ಯುದುತ್ಪಾದಕ ಯಂತ್ರಗಳಲ್ಲಿ ಇದು ಶಾಶ್ವತ ಅಯಸ್ಕಾಂತವಾಗಿರುತ್ತದೆ‌, ಆದರೆ ಬಹುತೇಕ ಯಂತ್ರಗಳಲ್ಲಿ ಇದೊಂದು ವಿದ್ಯುತ್ ಕಾಂತವಾಗಿರುತ್ತದೆ.

Filament

ಫಿಲಮೆಂಟ್ – ತಂತು (ದಾರದಂತಿರುವ ತಂತಿ) – ತುಂಬ ಹೆಚ್ಚಿನ ಕುದಿಬಿಂದು ಹೊಂದಿರುವ ‌ಟಂಗ್ ಸ್ಟನ್ ಅಥವಾ ಬೇರೆ ಲೋಹದ, ದಾರದಷ್ಟು ತೆಳುವಾಗಿರುವ ತಂತಿ.‌ ಇದನ್ನು ಪ್ರಕಾಶ ಬೀರುವಂತಹ ವಿದ್ಯುತ್ ದೀಪಗಳಲ್ಲಿ ಮತ್ತು ಉಷ್ಣಅಯಾನು ಕವಾಟಗಳಲ್ಲಿ ಬಳಸುತ್ತಾರೆ.

Filter

ಫಿಲ್ಟರ್- ಸೋಸುಕ – ಇದು ಒಂದು ಉಪಕರಣ ಅಥವಾ ವಿದ್ಯುನ್ಮಂಡಲ‌ ; ಇದು ಕೆಲವು ನಿರ್ದಿಷ್ಟ ಆವರ್ತನಗಳನ್ನು ಮಾತ್ರ ಒಳಗೆ ಸರಿಯಲು ಬಿಟ್ಟು ಇನ್ನುಳಿದ ಆವರ್ತನಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.

Fine structure

ಫೈನ್ ಸ್ಟ್ರಕ್ಚರ್ – ವರ್ಣಪಟಲವೊಂದರ ಗೆರೆ ಅಥವಾ ಪಟ್ಟಿಯಲ್ಲಿರುವಂತಹ, ಹೆಚ್ಚಿನ ವಿಂಗಡಿಸುವಿಕೆಯಲ್ಲಿ‌ ಗೋಚರವಾಗುವ, ತುಂಬ ಹತ್ತಿರ ಹತ್ತಿರ ಇರುವ ಗೆರೆಗಳು. ಎಲೆಕ್ಟ್ರಾನು ಗಿರಕಿ ಅಥವಾ ಅಣುಗಳ ಕಂಪನಯುತ ಚಲನೆಯಿಂದಾಗಿ ಇಂತಹ ನಾಜೂಕು ರಚನೆಗಳು ಉಂಟಾಗುತ್ತವೆ‌.

Page 47 of 76

Kannada Sethu. All rights reserved.