ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Focal plane

 ಫೋಕಲ್ ಪ್ಲೇನ್ – ಸಂಗಮ‌ ಮೇಲ್ಮೈ –  ಒಂದು ಮಸೂರ ಅಥವಾ ಕನ್ನಡಿಯ ಅಕ್ಷಕ್ಕೆ ಲಂಬವಾಗಿರುವ ಹಾಗೂ ಅದರ ಸಂಗಮ ಬಿಂದುವಿನ ಮೂಲಕ ಹಾಯ್ದುಹೋಗುವ ಮೇಲ್ಮೈ.

Foot 

ಫುಟ್ – ಅಡಿ  :  ಫುಟ್- ಪೌಂಡ್- ಸೆಕೆಂಡ್ ( ಎಫ್. ಪಿ. ಎಸ್) ಮೂಲಮಾನ ವ್ಯವಸ್ಥೆಯಲ್ಲಿನ  ಉದ್ದದ ಮೂಲಮಾನ.‌ ಒಂದು ಗಜದ ( ಯಾರ್ಡ್ )  ಮೂರನೇ ಒಂದು ಭಾಗ. 

Forbidden band 

ಫೊರ್ಬಿಡನ್ ಬ್ಯಾಂಡ್ – ನಿಷಿದ್ಧ ಪಟ್ಟಿ – ಒಂದು ಘನವಸ್ತುವಿನ ಹರಳಿನಲ್ಲಿ ಯಾವ ಎಲೆಕ್ಟ್ರಾನು ಸಹ ಪ್ರವೇಶಿಸದ/ತನ್ನದಾಗಿಸದ ಶಕ್ತಿ ಪಟ್ಟಿ ಇದು‌. ಶಕ್ತಿಪಟ್ಟಿಗಳ ಚಿತ್ರಗಳಲ್ಲಿ ಇವು ಖಾಲಿಜಾಗಗಳಾಗಿ ಕಂಡು ಬರುತ್ತವೆ.

Force 

ಫೋರ್ಸ್‌ – ಬಲ – ನಿಷ್ಕ್ರಿಯ ವಸ್ತುವೊಂದರ ದ್ರವ್ಯವೇಗವನ್ನು ( ಮೊಮೆಂಟಮ್ ಅನ್ನು) ಬದಲಾಯಿಸುವ ಮಾಡುಗ ಇದು‌. ಬಲವು ದ್ರವ್ಯವೇಗದ ಹೆಚ್ಚುವಿಕೆಯ ಗತಿಗೆ ಸಮಾನುಪಾತದಲ್ಲಿರುತ್ತದೆ.

Force ratio

ಫೋರ್ಸ್ ರೇಷ್ಯೋ‌ – ಬಲದ ಅನುಪಾತ – ಯಂತ್ರವೊಂದಕ್ಕೆ ಸಂಬಂಧಿಸಿದಂತೆ ಅದಕ್ಕೆ ಕೊಡುವ ಬಲ( ಎಫರ್ಟ್) ಕ್ಕೂ ಅದು ಕೊಡುವ ಬಲಕ್ಕೂ ( ಲೋಡ್) ಇರುವ ಅನುಪಾತ. ಇದಕ್ಕೆ ಯಾವುದೇ ಮೂಲಮಾನವಿಲ್ಲ, ಆದರೆ ಇದನ್ನು ಶೇಕಡಾವಾರು ಲೆಕ್ಕದಲ್ಲಿ ನಿರೂಪಿಸುತ್ತಾರೆ.  ಕಡಿಮೆ ಬಲ ಕೊಟ್ಟು ಹೆಚ್ಚು ಬಲ ಪಡೆಯುವಂತೆ ಯಂತ್ರಗಳನ್ನು ರೂಪಿಸಲು  ಯಾವಾಗಲೂ  ಪ್ರಯತ್ನಿಸುತ್ತಾರೆ.

Forced convection

ಫೋರ್ಸ್ಡ್ ಕನ್ವೆಕ್ಷನ್ – ಬಲವಂತದ ಉಷ್ಣವರ್ಗಾವಣೆ – ಬಿಸಿಯಾಗಿರುವ ದ್ರವವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ರೇಚಕ ( ಪಂಪು) ಅಥವಾ ಪಂಖಾದಿಂದ ತಳ್ಳಿ ಬಲವಂತವಾಗಿ ವರ್ಗಾಯಿಸುವ ಕ್ರಿಯೆ.

Forced oscillation

ಫೋರ್ಸ್ಡ್ ಆಸ್ಸಿಲೇಷನ್ – ಬಲವಂತದ ಆಂದೋಲನ – ಒಂದು ವಸ್ತು ಅಥವಾ ವ್ಯವಸ್ಥೆಯ ಸಹಜ ಆವರ್ತನದ್ದಲ್ಲದ ಆಂದೋಲನ. ಬಲವಂತದ ಆಂದೋಲನವನ್ನು ನಿಯತವಾದ ಬಾಹ್ಯ ಬಲದಿಂದ ಪ್ರೇರಿಸಬೇಕಾಗುತ್ತದೆ.

Formula 

ಫಾರ್ಮುಲಾ – ಸೂತ್ರ –  (ಅ)ರಸಾಯನ ಶಾಸ್ತ್ರದಲ್ಲಿ ಒಂದು ಸಂಯುಕ್ತವಸ್ತುವನ್ನು ಅಕ್ಷರ ರೂಪದಲ್ಲಿ ನಿರೂಪಿಸುವುದು. ‌ಆ ವಸ್ತುವಿನಲ್ಲಿರುವ ಪರಮಾಣುಗಳಿಗೆ ಸಂಕೇತವನ್ನು ನೀಡುವ ಮೂಲಕ ಅದರ ಸೂತ್ರವನ್ನು ಬರೆಯುತ್ತಾರೆ.

(ಆ). ಗಣಿತ ಮತ್ತು ಭೌತಶಾಸ್ತ್ರದಲ್ಲಿ ಒಂದು ನಿಯಮ ಅಥವಾ ಸಿದ್ಧಾಂತವನ್ನು ಬೀಜಗಣಿತದ ಸಂಕೇತಗಳಿಂದ ಸೂಚಿಸುವುದು. 

Fossil fuel

ಫಾಸಿಲ್ ಫ್ಯುಯೆಲ್ – ಪಳೆಯುಳಿಕೆ ಇಂಧನ – ಜನರು ಶಕ್ತಿಯ ಆಕರವಾಗಿ ಬಳಸುವ ಕಲ್ಲಿದ್ದಲು, ತೈಲ ಅಥವಾ ಜೈವಿಕ ( ಸಹಜ) ಅನಿಲದಂತಹ ಇಂಧನಗಳು.‌ ಇವುಗಳು ಜೀವಿಗಳ ಅವಶೇಷಗಳಿಂದ ರೂಪುಗೊಂಡಿರುತ್ತವೆ.  ಇವುಗಳಲ್ಲಿ ಅಧಿಕ ಪ್ರಮಾಣದ ಜಲಜನಕ ಅಥವಾ ಇಂಗಾಲ ಇರುತ್ತದೆ‌.

Foucault pendulum

ಫ್ಯೂಕೋ ಪೆಂಡ್ಯುಲಮ್  –  ಫ್ಯೂಕೋರ ಲೋಲಕ –  

ಭೂಮಿಯ ಸುತ್ತುವಿಕೆಯಿಂದಾಗಿ ನಿಧಾನವಾಗಿ ತಿರುಗುವ ಮೇಲ್ಮೈ ಹೊಂದಿರುವ ಒಂದು ಸರಳ ಲೋಲಕ ಇದು‌‌. 1851 ರಲ್ಲಿ ಫ್ರೆಂಚ್ ಭೌತವಿಜ್ಞಾನಿಯಾದ  ಜೀನ್ ಬರ್ನಾರ್ಡ್ ಲಿಯೋನ್ ಫ್ಯೂಕೋರು  ಇದನ್ನು ಕಂಡುಹಿಡಿದರು. ‌ಭೂಮಿಯ ಸುತ್ತುವಿಕೆಗೆ ಮೊದಲ ನೇರ ಸಾಕ್ಷಿ ಕೊಟ್ಟದ್ದು ಈ ಲೋಲಕ.

Page 50 of 76

Kannada Sethu. All rights reserved.