ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Gregorian telescope

ಗ್ರೆಗೋರಿಯನ್ ಟೆಲಿಸ್ಕೋಪ್ – ಗ್ರೆಗೋರಿ ದೂರದರ್ಶಕ‌ – ಹಿಂದಿನ‌ ಕಾಲದ ( 17 ನೇ ಶತಮಾನದ) ಒಂದು ದೂರದರ್ಶಕ‌ ಇದು. ಸ್ಕಾಟ್ಲೆಂಡ್ ನಲ್ಲಿ ತಯಾರಾದದ್ದು. ತಗ್ಗುಗಾಜಿನ ಕನ್ನಡಿ ಮತ್ತು ಉಬ್ಬುಗಾಜಿನ ಕನ್ನಡಿಗಳನ್ನು, ಬೆಳಕು ತನ್ನ ಮೇಲೆಯೇ ಮಡಿಸಿಕೊಳ್ಳುವಂತೆ ಇಟ್ಟು ರೂಪಿಸಿದ ಒಂದು ವ್ಯವಸ್ಥೆ. 

Grenz ray

ಗ್ರೆಂಝ್ ರೇ – ಗ್ರೆಂಝ್ ಅಥವಾ ಅಂಚಿನ ಕಿರಣ – ಕ್ಷ-ಕಿರಣಗಳ ಉದ್ದ ತರಂಗಾಂತರ ಪ್ರದೇಶದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ಕಿರಣಗಳಿವು. 1 ರಿಂದ 10 ಆಂಗ್ ಸ್ಟ್ರಾಮ್ ತರಂಗಾಂತರವನ್ನು ಹೊಂದಿರುತ್ತವೆ. ಇವುಗಳ ಜೀವಶಾಸ್ತ್ರೀಯ ಪರಿಣಾಮವು ಅತಿನೇರಳೆ ಕಿರಣಗಳು ಹಾಗೂ ಸಾಂಪ್ರದಾಯಿಕ ಕ್ಷ-ಕಿರಣಗಳು – ಈ ಎರಡರ ನಡುವಿನ ಪ್ರದೇಶದ ಗುಣಗಳನ್ನು ಹೊಂದಿದ್ದರಿಂದ ಇವುಗಳನ್ನು ಗ್ರೆಂಝ್ (ಜರ್ಮನ್ ಭಾಷೆಯಲ್ಲಿ ಗ್ರೆಂಝ್ ಎಂದರೆ ಅಂಚು ಎಂದು ಅರ್ಥ) ಕಿರಣ ಅಥವಾ ಅಂಚಿನ ಕಿರಣ ಎಂದು ಕರೆಯುತ್ತಾರೆ. ಗುಸ್ತಾವ್ ಪೀಟರ್ ಬಕ್ಕಿ (1880-1963) ಎಂಬ ಜರ್ಮನ್- ಅಮೇರಿಕಾ ಕ್ಷ-ಕಿರಣ ತಜ್ಞರು ಇವುಗಳನ್ನು ಕಂಡುಹಿಡಿದ ಕಾರಣ ಇವುಗಳನ್ನು ಬಕ್ಕಿ ಕಿರಣಗಳು ಎಂದು ಸಹ ಕರೆಯುತ್ತಾರೆ.

Grid

ಗ್ರಿಡ್ – ಜಾಲ, ಹೆಣಿಗೆ, ಸರಳು ತಡೆ – 

ಅ. ಉಷ್ಣ ವಿದ್ಯುದಂಶ ಕವಾಟದಲ್ಲಿ ಧನ ವಿದ್ಯುದ್ವಾರ ಮತ್ತು ಋಣ ವಿದ್ಯುದ್ವಾರಗಳ ನಡುವೆ ಇಡಲ್ಪಟ್ಟ ಒಂದು‌ ತಂತಿಜಾಲ ಇದು‌. ಇದನ್ನು ಬಳಸುವ ಉದ್ದೇಶ ಅಂದರೆ ಮುಖ್ಯವಾಗಿ ವಿದ್ಯುತ್ತಿನ ಬಲವನ್ನು ಹೆಚ್ಚಿಸುವುದು ಅಥವಾ ಅದನ್ನು  ಮಾರ್ಪಡಿಸುವುದು.

ಆ. ತುಂಬ ಹೆಚ್ಚಿನ ವಿದ್ಯುತ್ ಸಾಮರ್ಥ್ಯ (400 kV ತನಕ) ವನ್ನು ರಾಷ್ಟ್ರಮಟ್ಟದಲ್ಲಿ ವಿತರಣೆ ಮಾಡುವ ವ್ಯವಸ್ಥೆ.

Grid bias

ಗ್ರಿಡ್ ಬಯಾಸ್ – ತಂತಿಜಾಲ ವಿದ್ಯುತ್ ಸಾಮರ್ಥ್ಯ ‌- ಸಾಮಾನ್ಯವಾಗಿ ಋಣಾತ್ಮಕವಾದ, ಏಕಪ್ರಕಾರವಾದ ವಿದ್ಯುತ್ ಅಂತಃಸಾಮರ್ಥ್ಯವನ್ನು ಉಷ್ಣವಿದ್ಯುತ್ ಕವಾಟದ ತಡೆತಂತಿಜಾಲಕ್ಕೆ ನೀಡುವುದು.  ಈ ತಂತಿಜಾಲ ವಿದ್ಯುದಂಶವು ಯಾವ ಮೌಲ್ಯ ಹೊಂದಿರುತ್ತದೆಂದರೆ, ಸ್ಥಿರವಾಗಿರದ ವಿದ್ಯುತ್ತನ್ನು ಹಾಯಿಸಿದಾಗಲೂ ಕವಾಟವು ವಿದ್ಯುತ್ತನ್ನು  ಕತ್ತರಿಸುವುದೂ ಇಲ್ಲ ಮತ್ತು (ಅಸ್ಥಿರತೆಯನ್ನು) ಪ್ರವಹಿಸಲು ಬಿಡುವುದೂ ಇಲ್ಲ. 

Ground fault

ಗ್ರೌಂಡ್ ಫಾಲ್ಟ್ – ಭೂಸ್ಪರ್ಶ ದೋಷ – ಒಂದು ವಾಹಕಕ್ಕೆ ಅಚಾನಕ್ಕಾಗಿ ಭೂಸ್ಪರ್ಶ ಉಂಟಾಗುವ ಕ್ರಿಯೆ. 

Ground rod 

ಗ್ರೌಂಡ್ ರಾಡ್ – ಭೂಸ್ಪರ್ಶ ಕಂಬಿ‌ – ಉತ್ತಮವಾದ ಭೂಸ್ಪರ್ಶಕ್ಕಾಗಿ ಚೆನ್ನಾಗಿ ನೆಲದಲ್ಲಿ ನೆಟ್ಟಿರುವ ಒಂದು ವಾಹಕ ಕಂಬಿ.

Ground state 

ಗ್ರೌಂಡ್ ಸ್ಟೇಟ್ – ಕನಿಷ್ಠ ಶಕ್ತಿಸ್ಥಿತಿ – ಒಂದು ಪರಮಾಣು, ಅಣು ಅಥವಾ ಇನ್ಯಾವುದಾದರೂ ವ್ಯವಸ್ಥೆಯ ಕನಿಷ್ಠತಮ ಶಕ್ತಿಸ್ಥಿತಿ

Ground waves 

ಗ್ರೌಂಡ್ ವೇವ್ಸ್ – ಭೂಮಿಚಾರಿ‌ ಅಲೆಗಳು – ಪ್ರಸಾರಕ ಹಾಗೂ ಸ್ವೀಕಾರಕಗಳ ಮಧ್ಯೆ ‌ಇದ್ದು, ಭೂಮಿಯ ಮೇಲ್ಮೈಗೆ ಸಮೀಪವಾಗಿ ಪಯಣಿಸುವ ವಿದ್ಯುತ್ಕಾಂತೀಯ ( ರೇಡಿಯೋ) ಅಲೆ‌ಗಳು (ಹೋಲಿಕೆ -Sky wave – ಸ್ಕೈ ವೇವ್ – ಆಕಾಶಚಾರಿ ಅಲೆ).

Ground wire

ಗ್ರೌಂಡ್ ವೈಯರ್ – ಭೂಸ್ಪರ್ಶ ತಂತಿ‌ – ಒಂದು ವಿದ್ಯುತ್ ಉಪಕರಣ ಹಾಗೂ ಒಂದು ಭೂಸ್ಪರ್ಶಿತ ಉಪಕರಣಗಳನ್ನು ಜೋಡಿಸಲು ಬಳಸುವ ವಾಹಕ ತಂತಿ.

Grounding or earthing 

ಗ್ರೌಂಡಿಂಗ್ ಆರ್ ಅರ್ತಿಂಗ್ – ಭೂಸ್ಪರ್ಶ ಮಾಡಿಸುವಿಕೆ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವುದು.

Page 60 of 80

Kannada Sethu. All rights reserved.