ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Helium  Neon laser

ಹೀಲಿಯಂ ನಿಯಾನ್ ಲೇಸರ್ – ಹೀಲಿಯಂ ‌ನಿಯಾನ್ ತೀಕ್ಷ್ಣ ಬೆಳಕು‌ – ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು ಬಳಸುವ ಪರಮಾಣೀಯ ತೀಕ್ಷ್ಣ ಬೆಳಕು.

Helix

ಹೆಲಿಕ್ಸ್ – ಸುರುಳಿ – ನೈಸರ್ಗಿಕವಾಗಿ ದೊರೆಯುವ ಅನೇಕ ದೊಡ್ಡ ಗಾತ್ರದ ಅಣುಗಳು, ಉದಾಹರಣೆಗೆ, ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ಸುರುಳಿಯಾಕಾರದಲ್ಲಿರುತ್ತವೆ.

Henry (H)

ಹೆನ್ರಿ( H) – ಹೆನ್ರಿ ( H) – ಸ್ವಯಂ ವಿದ್ಯುತ್ ಪ್ರೇರಕತೆ ಅಥವಾ ಪರಸ್ಪರ ವಿದ್ಯುತ್ ಪ್ರೇರಕತೆಯ ಎಸ್.ಐ.ಮೂಲಮಾನ ಇದು. 1H = 1 ವೆಬರ್ /ಆಂಪಿಯರ್. ಜೋಸೆಫ್ ಹೆನ್ರಿ (1797-1878) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಪ್ರೇರಕತೆಯನ್ನು ಕಂಡು ಹಿಡಿದ ವಿಜ್ಞಾನಿ ಇವರು.

Hertz (Hz)

ಹರ್ಟ್ಝ್( Hz) – ಪುನರಾವರ್ತನೆಯ ಎಸ್.ಐ.ಮೂಲಮಾನ‌- 1 ಹರ್ಟ್ಝ್ – 1 ಸೆಕೆಂಡಿಗೆ ಒಂದು ಸುತ್ತು ಅಥವಾ 1 ಸೆಕೆಂಡಿಗೆ ಒಂದು ಆವರ್ತನ.‌ ಜರ್ಮನಿಯ ವಿಜ್ಞಾನಿ ಹೇನ್ರಿಚ್ ಹರ್ಟ್ಝ್ ರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಕಾಂತೀಯ ಅಲೆಗಳ ಅಸ್ತಿತ್ವವನ್ನು ವಾಸ್ತವಿಕವಾಗಿ ಮೊದಲ ಬಾರಿಗೆ ತೋರಿಸಿಕೊಟ್ಟವರಿವರು.

Heterodyne

ಹೆಟಿರೋಡೈನ್ – ಅಲೆಸಂಯೋಜಕ ಅಥವಾ ಭಿನ್ನ ಅಲೆ ಮಿಶ್ರಕ‌ – ಒಳಬರುತ್ತಿರುವ ಅಲೆಯೊಂದರ ಮೇಲೆ ತಾನೇ ಉತ್ಪತ್ತಿ ಮಾಡಿದ ರೇಡಿಯೋ ( ವಿದ್ಯುತ್ ಕಾಂತೀಯ) ಅಲೆಯೊಂದನ್ನು‌ ಹಾಯಿಸಿ, ಬಡಿತವು ಉತ್ಪತ್ತಿಯಾಗುವಂತೆ ಮಾಡುವ ಉಪಕರಣ ಅಥವಾ ವಿಧಾನ.

Heterogeneous reactor

ಹೆಟಿರೋಜೀನಸ್ ರಿಯಾಕ್ಟರ್ – ಭಿನ್ನವಸ್ತು ಮಿಶ್ರಿತ ಅಣುಸ್ಥಾವರ – ಇಂಧನವನ್ನು ಮಂದಕ ( moderator) ದಿಂದ ಪ್ರತ್ಯೇಕವಾಗಿ ಇರಿಸಿದ ಅಣುಸ್ಥಾವರ. ಇಲ್ಲಿ ನೂಟ್ರಾನುಗಳಿಗೆ ಭಿನ್ನವಸ್ತುಗಳಿಂದ ಕೂಡಿದ ಒಂದು ಮಿಶ್ರಣ ದೊರಕುತ್ತದೆ.

Heuristic

ಹ್ಯೂರಿಸ್ಟಿಕ್ – ಮಾಡಿ‌ಕಲಿಯುವ ಅಥವಾ ಸ್ವಂತ ಅನ್ವೇಷಣೆಯ ವಿಧಾನ – ಸಮಸ್ಯೆಯನ್ನು ಪರಿಹಾರ ಮಾಡುವ ಯಾವುದೇ ಕ್ರಮವಿಧಿ ಇಲ್ಲದೆ ಇದ್ದಾಗ, ಮತ್ತೆ ಮತ್ತೆ ಮಾಡಿ ಮಾಡಿ ಸರಿಯಾದ ಪರಿಹಾರ ಹುಡುಕಿಕೊಳ್ಳುವ ರೀತಿ. ‌ಬೇರೆ ಪದಗಳಲ್ಲಿ ಹೇಳಬೇಕೆಂದರೆ ಪ್ರಯತ್ನ ಮತ್ತು ತಪ್ಪುಗಳಿಂದ ( Trial and error) ಪರಿಹಾರ ಕಂಡುಕೊಳ್ಳುವ ವಿಧಾನ.

Heusler alloys

ಹ್ಯೂಸ್ಲರ್ ಅಲ್ಲಾಯ್ಸ್ – ಹ್ಯೂಸ್ಲರರ ಮಿಶ್ರಲೋಹಗಳು – ಯಾವುದೇ ಪ್ರಬಲ ಅಯಸ್ಕಾಂತ ಮೂಲವಸ್ತುಗಳು ಇಲ್ಲದ, ವಿಶೇಷ ರೀತಿಯ ಮಿಶ್ರಲೋಹಗಳು‌. ವಿವಿಧ ವಿದ್ಯುನ್ಮಾನ  ಉಪಕರಣಗಳಿಗೆ  ಸಂಬಂಧಿಸಿದಂತೆ ಬಹೂಪಯೋಗಿಯಾದ ಇವನ್ನು 20ನೇ ಶತಮಾನದ ಜರ್ಮನ್  ಗಣಿಯಂತ್ರಜ್ಞಾನಿ ಕಾನ್ರಾಡ್ ಹ್ಯೂಸ್ಲರ್ ರು ಕಂಡುಹಿಡಿದರು.

High frequency( HF)

ಹೈ ಫ್ರೀಕ್ವೆನ್ಸಿ(HF) – ಉಚ್ಚ ಆವರ್ತನ – 3-30 ಮೆಗಾ ಹರ್ಟ್ಝ್ ವರೆಗಿನ‌‌ ಆವರ್ತನವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆಗಳು, ಅಂದರೆ ಇವುಗಳ ತರಂಗಾಂತರವು 10-100 ಮೀಟರ್ ಆಗಿರುತ್ತದೆ.

High speed steel

ಹೈ ಸ್ಪೀಡ್ ಸ್ಟೀಲ್ – ಉಚ್ಚ ವೇಗದ ಉಕ್ಕು – ಮಬ್ಬುಕೆಂಪು ತಾಪ( ಡಲ್ ರೆಡ್ ಹೀಟ್) ದಲ್ಲೂ ತನ್ನ ಕಾಠಿಣ್ಯವನ್ನು ಉಳಿಸಿಕೊಳ್ಳುವಂತಹ ಉಕ್ಕು. ಟಂಗ್ಸ್ಟನ್, ಕ್ರೋಮಿಯಂ, ಇಂಗಾಲ, ವೆನೆಡಿಯಂ, ಮಾಲಿಬ್ಡಿನಮ್ ಮತ್ತು ಇನ್ನೂ ಕೆಲವು ಲೋಹಗಳನ್ನು ಸೇರಿಸಿ‌ ಇದನ್ನು ತಯಾರಿಸುತ್ತಾರೆ.

Page 65 of 80

Kannada Sethu. All rights reserved.