ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Hole

ಹೋಲ್ – ರಂಧ್ರ – ಒಂದು ಘನವಸ್ತುವಿನ  ಕಿಂಡಿ ಚೌಕಟ್ಟಿನ (ಲ್ಯಾಟಿಸ್) ರಚನೆಯಲ್ಲಿ ಎಲೆಕ್ಟ್ರಾನೊಂದು ಇದ್ದು, ಈಗ ಖಾಲಿಯಾಗಿರುವ ಜಾಗ. ರಂಧ್ರವು ಒಂದು ‘ಸಂಚಾರಿ- ಧನಾತ್ಮಕ – ವಿದ್ಯುದಂಶ-ಒಯ್ಯಕ’ ದಂತೆ ಕೆಲಸ ಮಾಡುತ್ತದೆ.

Hologram

ಹೋಲೋಗ್ರಾಂ – (ಮೂರು ಆಯಾಮಗಳ) ಪೂರ್ಣಚಿತ್ರ ದಾಖಲೆ – ಪೂರ್ಣಚಿತ್ರ ಗ್ರಹಣದಲ್ಲಿ ಮೂರು ಆಯಾಮಗಳ ಬಿಂಬವನ್ನು ಪುನರುತ್ಪತ್ತಿ ಮಾಡುವಾಗ ಬಳಸುವ ಒಂದು ಛಾಯಾಚಿತ್ರ ದಾಖಲೆ.

Holography

ಹೋಲೋಗ್ರಫಿ – ಮೂರು ಆಯಾಮಗಳ ಛಾಯಾಚಿತ್ರ ಗ್ರಹಣ – ಲೇಸರ್ ಬೆಳಕು ಹಾಗೂ ಛಾಯಾಚಿತ್ರ ಫಲಕಗಳನ್ನು ಬಳಸಿ ಒಂದು ವಸ್ತುವಿನ ಬಿಂಬವನ್ನು ಮೂರು ಆಯಾಮಗಳಲ್ಲಿ ದಾಖಲಿಸುವುದು ಮತ್ತು ಪ್ರದರ್ಶಿಸುವುದು.‌ ಹಂಗೇರಿಯ ಭೌತಶಾಸ್ತ್ರಜ್ಞರಾದ ಡೆನ್ನಿಸ್ ಗೇಬರ್ ಇದನ್ನು 1948ರಲ್ಲಿ ಕಂಡುಹಿಡಿದರು. ಇವರಿಗೆ ಈ ಸಂಶೋಧನೆಗಾಗಿ 1971ರಲ್ಲಿ ನೊಬೆಲ್ ಪ್ರಶಸ್ತಿ ಬಂತು.

Homogeneous reactor

ಹೋಮೋಜೀನಸ್ ರಿಯಾಕ್ಟರ್ – ಸಮಜಾತೀಯ ಅಣುಸ್ಥಾವರ – ಅಣುಸ್ಥಾವರವೊಂದರಲ್ಲಿ ನ್ಯೂಟ್ರಾನುಗಳ ವಿದಳನ ಕಾರ್ಯಕ್ಕಾಗಿ ವಿದಳನ ವಸ್ತು ಮತ್ತು ಮಂದಕಾರಕಗಳನ್ನು ಚೆನ್ನಾಗಿ ಬೆರೆಸಿದ್ದರೆ( ಅಂದರೆ ಸಮಜಾತೀಯ ಮಿಶ್ರಣವಾಗುವಂತೆ) ಅದು ಸಮಜಾತೀಯ ಅಣುಸ್ಥಾವರ ಅನ್ನಿಸಿಕೊಳ್ಳುತ್ತದೆ.

Homopolar crystal

ಹೋಮೋಪೋಲಾರ್ ಕ್ರಿಸ್ಟಲ್ – ಏಕಧ್ರುವ ಹರಳು ಅಥವಾ ಏಕಧ್ರುವ ಸ್ಫಟಿಕ) – ಕೇವಲ ಸಹಸಂಯೋಗ ( ಕೋವೇಲೆಂಟ್) ಬಂಧಗಳನ್ನು ಹೊಂದಿರುವ ಒಂದು ಹರಳು ಅಥವಾ ಸ್ಫಟಿಕ.

Homopolar generator‌( Faraday disc) 

– ಹೋಮೋಪೋಲಾರ್ ಜನರೇಟರ್ ( ಫ್ಯಾರಡೇ ಡಿಸ್ಕ್) 

– ಏಕಧ್ರುವ ವಿದ್ಯುದುತ್ಪಾದಕ ( ಫ್ಯಾರಡೇ ತಟ್ಟೆ) – ಒಂದು ಲೋಹದ ತಟ್ಟೆ ಹಾಗೂ ತನ್ನ ಮೇಲ್ಮೈಗೆ ಲಂಬಕೋನದಲ್ಲಿ ಸುತ್ತುತ್ತಿರುವ ಕಾಂತಕ್ಷೇತ್ರವನ್ನು ಹೊಂದಿರುವಂತಹ,  ‘ನೇರ ವಿದ್ಯುತ್’ ಉತ್ಪಾದಕ ಇದು. ಈ ತಟ್ಟೆಯ ಕೇಂದ್ರ ಮತ್ತು ತುದಿಗಳ ನಡುವೆ ವಿದ್ಯುತ್ ಚಾಲಕ ಶಕ್ತಿಯು ಪ್ರೇರಿತಗೊಳ್ಳುತ್ತದೆ.

Hooke’s law

ಹೂಕ್ಸ್ ಲಾ – ಹೂಕ್ ರ ನಿಯಮ – ಈ ನಿಯಮದ ಪ್ರಕಾರ ಒಂದು ವೇಳೆ ಒಂದು ವಸ್ತುವು ವಿರೂಪಗೊಂಡಿದೆಯೆಂದರೆ, ಅದರಲ್ಲಿ ಉಂಟಾದ ವಿರೂಪ ಅಥವಾ ಪೀಡನೆಯು ಅದರ ಮೇಲೆ ಹಾಕಿದ ಒತ್ತಡಕ್ಕೆ ನೇರ ಅನುಪಾತದಲ್ಲಿರುತ್ತದೆ. ಆದರೆ, ಒಂದು ಮಟ್ಟಕ್ಕಿಂತ ಹೆಚ್ಚಿನ ಒತ್ತಡ ಹಾಕಿದರೆ ಆ ವಸ್ತುವು ಹೂಕ್ ರ ನಿಯಮವನ್ನು ಪಾಲಿಸುವುದಿಲ್ಲ.

Horizontal intensity

ಹಾರಿಜಾಂಟಲ್ ಇನ್ ಟೆನ್ಸಿಟಿ‌ – ಅಡ್ಡ ರೇಖೆಯುದ್ಧದ  ತೀವ್ರತೆ – ಭೂಮಿಯ ಮೇಲ್ಮೈಯ ಅಡ್ಡರೇಖೆಯಲ್ಲಿರುವ  ಯಾವುದಾದರೂ ದತ್ತ ಬಿಂದುವಿನಲ್ಲಿ ಅಥವಾ ಅದರ ಮೇಲ್ಮೈಯ ಹತ್ತಿರದ ಬಿಂದುವಿನಲ್ಲಿ ಇರುವಂತಹ ಕಾಂತಕ್ಷೇತ್ರದ ಶಕ್ತಿ.

Horse power ( H.P.)

ಹಾರ್ಸ್ ಪವರ್( H.P.) – ಅಶ್ವ ಶಕ್ತಿ – ಎಫ್.ಪಿ.ಎಸ್. ( ಫುಟ್, ಪೌಂಡ್, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿ ವಿದ್ಯುತ್ ಸಾಮರ್ಥ್ಯದ ಒಂದು ಮೂಲಮಾನ.‌ ಇದು 746 ವ್ಯಾಟ್ ಗೆ ಸಮ ಅಥವಾ 33,000 ft.lb.per minuteಗೆ ಸಮ.

Hot atom

ಹಾಟ್ ಆಟಂ – ಸುಡು‌ ಅಣು – ಅತ್ಯಂತ ಹೆಚ್ಚಾದ ವಿಕಿರಣ ಚಟುವಟಿಕೆ ಮಾಡುತ್ತಿರುವ ಅಣು. ಇದು ಉದ್ರೇಕಿತ ಸ್ಥಿತಿಯಲ್ಲಿರುತ್ತದೆ ಅಥವಾ ತನ್ನ ಸುತ್ತಲಿನ ವಾತಾವರಣದ ತಾಪಮಾನದಲ್ಲಿ ತನಗೆ ಇರಬಹುದಾದದ್ದಕ್ಕಿಂತ ಹೆಚ್ಚಿನ ಮಟ್ಟದ ಚಲನಶಕ್ತಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ವಿಕಿರಣ ಕ್ರಿಯೆಗಳ ಫಲಿತವಾಗಿರುತ್ತದೆ.

Page 66 of 77

Kannada Sethu. All rights reserved.