ಶೈಕ್ಷಣಿಕ ವರ್ಷದ ಅಥವಾ ಅರ್ಧವರ್ಷದ ಕೊನೆಯಲ್ಲಿ ನಾವು ಅಧ್ಯಾಪಕರು ನಮ್ಮ‌ ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ (ಫೀಡ್ ಬ್ಯಾಕ್) ತೆಗೆದುಕೊಳ್ಳುವುದುಂಟು‌. ‘ನಾವು ಮಾಡಿದ ಪಾಠ ಅವರಿಗೆ ಅರ್ಥವಾಗಿದೆಯೇ?, ನಮ್ಮ ಪಾಠದ ರೀತಿಯಲ್ಲಿ ಬದಲಾವಣೆ ಬೇಕೇ?, ಅವರು ನಮ್ಮ ಪಾಠದಿಂದ ಯಾವ ಹೊಸ ಸಂಗತಿಗಳನ್ನು ಕಲಿತರು?’ …. ಈ ಮುಂತಾಗಿ ಅವರಿಂದ ಅಭಿಪ್ರಾಯ, ಅನಿಸಿಕೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಡುವಂತೆ ಹೇಳುತ್ತೇವೆ. ಅವರು ಅದರಲ್ಲಿ ‌ತಮ್ಮ  ಹೆಸರು‌ ಬರೆಯುವುದು ಕಡ್ಡಾಯವೇನಲ್ಲ.‌ ಅಂದ ಹಾಗೆ, ಒಳ್ಳೆಯ ಅಭಿಪ್ರಾಯ ‌ಮಾತ್ರವಲ್ಲ, ಪಾಠದ ವಿಷಯದಲ್ಲಿ ಅವರಿಗೆ ಉಂಟಾದ ಅತೃಪ್ತಿ, ಅಸಾಮಾಧಾನಗಳನ್ನು ಸಹ ದಾಖಲಿಸುವಂತೆ ಹೇಳಿರುತ್ತೇವೆ, ಏಕೆಂದರೆ ಇದು ಮುಂದೆ ನಾವು ನಮ್ಮ ಪಾಠದ ವಿಧಾನವನ್ನು ಉತ್ತಮ ಪಡಿಸಲು ಸಹಾಯ ಮಾಡುತ್ತದೆ.‌

ಈ ನಡುವೆ ನಾನು ಒಂದು ತರಗತಿಯಲ್ಲಿ ಇದೇ ಮಾದರಿಯಲ್ಲಿ ಹಿಮ್ಮಾಹಿತಿ ಕೇಳಿದಾಗ ನನಗೆ ಒಂದು ಆಶ್ಚರ್ಯ ಕಾದಿತ್ತು.‌ ಒಬ್ಬ ವಿದ್ಯಾರ್ಥಿನಿ ಇಂಗ್ಲಿಷ್ ಲಿಪಿಯಲ್ಲಿ ಬರೆದ ಕನ್ನಡ ಭಾಷೆಯಲ್ಲಿ ಹಿಮ್ಮಾಹಿತಿ ಕೊಟ್ಟಿದ್ದಳು. ನೋಡಿ, ಹೀಗಿತ್ತು‌ ಅದು –

“Prathi dina kannadadalli hosa pada maththu suukthi kalitiddu khushi aaythu ma’am. Nange neevu paata maaduva reethi thumba ishta aaythu. Dhanyavaadagalu ma’am”.

ಅವಳ ಅಭಿಮಾನಪೂರ್ವಕ ನುಡಿಗಳಿಗೆ ಸಂತೋಷ ಪಡಬೇಕೋ, ಅವಳಿಗೆ ಅದನ್ನೇ ಕನ್ನಡ ಭಾಷೆಯಲ್ಲಿ ಬರೆಯಲು ಏಕೆ ಮನಸ್ಸಾಗಲಿಲ್ಲ‌ ಎಂದು ಚಿಂತಿಸಬೇಕೋ ತಿಳಿಯಲಿಲ್ಲ ನನಗೆ. ಆದರೂ ‘ಬಾಲ್ಯದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನಮ್ಮ ಕೆಲವು ಮಕ್ಕಳಿಂದ, ಪದವಿ ಹಂತದಲ್ಲಿ ಕನ್ನಡದಲ್ಲಿ ಸ್ವರಚಿತ ಬರವಣಿಗೆ  ಸರಾಗವಾಗಿ‌ ಸಾಧ್ಯ ಆಗದೇ? 

ಕನ್ನಡ ಅಷ್ಟು ದೂರ ಆಯಿತೇ ಅವರಿಂದ?’ ಎಂಬ ಗಾಬರಿ ಮಾತ್ರ ನನಗುಂಟಾದದ್ದು ನಿಜ.