ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ.
ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು ಹೇಳಿತು. ನನಗೆ ಸ್ವಲ್ಪ ಅಚ್ಚರಿಯಾಯಿತು. ಕಾರಣವೇನೆಂದರೆ ನಮ್ಮ ನಾಟ್ಯ ಶಾಲೆ ಇರುವ ಬೆಂಗಳೂರಿನ ಹಂಪಿನಗರವು ಗರಿಷ್ಠ ಸಂಖ್ಯೆಯಲ್ಲಿ ಕನ್ನಡಿಗರು ಇರುವ ಪ್ರದೇಶ. ಇಲ್ಲಿ ಇಂಗ್ಲಿಷ್ ಮಾತೃಭಾಷೆ ಹೊಂದಿರುವವರು( ಅಮೆರಿಕಾ, ಯುರೋಪ್ ದೇಶದವರು ಅಥವಾ ಆಂಗ್ಲೋ ಇಂಡಿಯನ್ನರು) ತೀರಾ ಅಪರೂಪ. ಆ ಮಗುವನ್ನು ನಾಟ್ಯಶಾಲೆಗೆ ಸೇರಿಸಬಂದಿದ್ದವರನ್ನು ನೆನೆದಾಗ ಅವರು ಕನ್ನಡ ಚೆನ್ನಾಗಿ ಬಲ್ಲವರಂತೆಯೇ ಕಂಡಿದ್ದರು. ಆಮೇಲೆ ತುಸು ಹೆಚ್ಚು ವಿಚಾರಿಸಲಾಗಿ ಈ ಮಗುವಿನ ಮನೆಯಲ್ಲಿ ಮಾತಾಡುವುದು ಕನ್ನಡವೇ, ಆದರೆ ಈ ಮಗುವನ್ನು ಆ ಮನೆಯ ಹಿರಿಯರು ಇಂಗ್ಲಿಷ್‌ನಲ್ಲಿ ಮಾತಾಡಿಸುತ್ತಾರೆ ಎಂದು ತಿಳಿದುಬಂತು!
ಯಾಕೆ ನಮ್ಮ ಕೆಲವು ಕನ್ನಡ ಬಂಧುಗಳು ಹೀಗೆ ಮಾಡ್ತಾರೆ!? ಇದಕ್ಕೆ ಕಾರಣ ಏನು? “ಮಗು ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲೀತಿದೆ, ಮನೆಯಲ್ಲೂ ಅದೇ ಭಾಷೆಯಲ್ಲಿ ಮಾತಾಡಿಸಿದ್ರೆ ಆಯಿತು ಬಿಡು” ಎಂಬ ಸುಲಭೀಕರಣವೋ, ಅಥವಾ ತಾವು ವಿಜ್ಞಾನ/ಅರ್ಥಶಾಸ್ತ್ರ/ಗಣಕ ವಿಜ್ಞಾನ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರಾಗಿದ್ದು, ಮನೆಯಲ್ಲಿಯೂ ಇಂಗ್ಲಿಷ್ ಬಳಸುವುದು ಉನ್ನತ ಸಂಸ್ಕೃತಿ ಎಂಬ ಭಾವನೆಯೋ, ಅಥವಾ ಕನ್ನಡದ ಬಗ್ಗೆ ಅಭಿಮಾನದ ಕೊರತೆಯೋ, ಮಾತೃಭಾಷೆಯನ್ನು ಮಕ್ಕಳಿಗೆ ಹೇಳಿಕೊಡುವುದರಲ್ಲಿನ ಮಹತ್ವ ಗೊತ್ತಿಲ್ಲದೆ ಹೀಗೆ ಮಾಡುತ್ತಾರೋ….ತುಂಬ ಯೋಚಿಸುವಂತಾಯಿತು ನನಗೆ. ಕನ್ನಡಿಗರೇ ತಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡದಿದ್ದರೆ ಇನ್ನು ಯಾರು ಹೇಳಿಕೊಡಬೇಕು? ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ತಂದೆ-ತಾಯಿಯರ ಪಾತ್ರ ಅತಿ ಮಹತ್ವದ್ದಲ್ಲವೆ?
ಕನ್ನಡಗರ ಮನೆಗಳು ಮೊದಲ ಕನ್ನಡ ಶಾಲೆಯಾಗಬೇಕು. ಆಗ ಮಾತ್ರ ಕನ್ನಡ ಬಾಳಲು, ಬೆಳೆಯಲು ಸಾಧ್ಯ.