ಇವತ್ತಿನ ಕನ್ನಡ ಪ್ರಸಂಗವನ್ನು ನಾನು ಬಹಳ ಖುಷಿಯಿಂದೇನೂ ಬರೆಯುತ್ತಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ತರಗತಿಯಲ್ಲಿ ನನಗೆ ಆದ ಆತಂಕಮಯ ಅನುಭವವೊಂದನ್ನು ನಿಮ್ಮೊಂದಿಗೆ ಹಂಚ್ಕೋತಿದ್ದೇನೆ.
ಬೆಂಗಳೂರಿನ ಮಹಾರಾಣಿ ಕಾಲೇಜಿನ ಬಿ.ಎಸ್ಸಿ. ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನಾನು, ಈಚೆಗೆ ವಿದ್ಯಾರ್ಥಿನಿಯರಿಗೆ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಕಿರುಪರೀಕ್ಷೆ ಕೊಟ್ಟಿದ್ದೆ. ಆ ಮಕ್ಕಳು ಮೂವತ್ತು ಅಂಕಗಳಿಗಾಗಿ ಒಂದೂಕಾಲು ಗಂಟೆ ಅವಧಿಯ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಅವಧಿಯು ಮುಗಿಯುತ್ತಾ ಬಂದಂತೆ ಮಕ್ಕಳ ಒಂದು ವರ್ತನೆ ನನ್ನ ಗಮನ ಸೆಳೆಯಿತು; ಅದೇನೆಂದರೆ ಮುಖ ಹಿಂಡಿಕೊಂಡು, ‘ಅಯ್ಯೋ ಅಯ್ಯೋ’ ಎಂಬ ಭಾವದಿಂದ ತಮ್ಮ ಕೈಯನ್ನು ಕೊಡವಿಕೊಳ್ಳುತ್ತಿದ್ದರು. “ಯಾಕಮ್ಮಾ, ಏನಾಯ್ತು? ಕೈ ಯಾಕೆ ಹೀಗೆ ಕೊಡವ್ತಾ ಇದೀರ?” ಅಂತ ನಾನು ಕೇಳಿದಾಗ ‘ನಾವು ಕನ್ನಡ ಬರೆಯೋದು ಅಪರೂಪ ಅಲ್ವಾ ಮೇಡಂ. ಒತ್ತಕ್ಷರ, ದೀರ್ಘಾಕ್ಷರ ಬರೆದು ಬರೆದು ಕೈಯೆಲ್ಲ ನೋವು ಬರುತ್ತೆ ಮೇಡಂ” ಎಂದು ಮತ್ತೆ ಕೈ ಕೊಡವುತ್ತಾ ಕುಳಿತರು. ನನಗೆ ಅವರ ಹ್ಯಾಪುಮೋರೆ ನೋಡಿ ತುಸು ಕರುಣೆ, ತುಸು ನಗು, ತುಸು ಕೋಪ ಎಲ್ಲ ಒಟ್ಟಿಗೆ ಬಂದವು. ತಕ್ಷಣ ಅನ್ನಿಸಿದ್ದೆಂದರೆ….’ಕುದುರೆ ಕಂಡ್ರೆ ಕಾಲ್ನೋವು, ಕನ್ನಡ ಕಂಡ್ರೆ ಕೈನೋವು’ (‘ಕುದುರೆ ಕಂಡರೆ ಕಾಲ್ನೋವು’ ಎಂಬುದು ಕನ್ನಡ ಭಾಷೆಯ ಪ್ರಸಿದ್ಧ ಗಾದೆ)ಎಂದು. ಛೆ…ಬಹಳ ಬೇಸರವಾಯಿತು.
ಆಂಗ್ಲ ಭಾಷೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಮತ್ತು ಪದವಿ ಮಟ್ಟದ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಬರೆಯುವುದು ತುಂಬ ಕಡಿಮೆ. ಈಗ ನೆರಳಚ್ಚು( ಜೆರಾಕ್ಸ್), ಅಂತರ್ಜಾಲ ಪಾಠ ಇವೆಲ್ಲ ಇರುವುದರಿಂದ ವಿದ್ಯಾರ್ಥಿಗಳು ಕೈಯಲ್ಲಿ ಪಾಠಗಳನ್ನು ಬರೆಯುವ ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಿದೆಯೇ ಹೊರತು ಹೆಚ್ಚಾಗುತ್ತಿಲ್ಲ. ಹೀಗಾಗಿ ನನ್ನಂತಹ ಕನ್ನಡ ಅಧ್ಯಾಪಕರು ವಿದ್ಯಾರ್ಥಿಗಳ ಕನ್ನಡ ಬರವಣಿಗೆಯ ವೇಗ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಸದಾ ಇರುತ್ತೇವೆ.