ತರಗತಿಗಳಲ್ಲಿ ಆದಷ್ಟೂ ಕನ್ನಡ ಪದಗಳನ್ನು ಬಳಸಬೇಕು ಎಂದು ಪ್ರಯತ್ನ ಮಾಡುವ ನಾನು ನನ್ನ ವಿದ್ಯಾರ್ಥಿನಿಯರಿಗೂ  (ಈಗ ನಾನು ಕೆಲಸ ಮಾಡುತ್ತಿರುವುದು ಒಂದು ಸರ್ಕಾರಿ ಮಹಿಳಾ ಕಾಲೇಜಾದ್ದರಿಂದ ನನ್ನ ತರಗತಿಗಳಲ್ಲಿ ಕೇವಲ ವಿದ್ಯಾರ್ಥಿನಿಯರಿರುತ್ತಾರೆ)  “ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡಿ ಮಕ್ಕಳೇ, ನಿಮ್ಮ‌  ಪದ ಸಂಪತ್ತು ಹೆಚ್ಚುತ್ತೆ” ಅಂತ ಹೇಳುತ್ತಿರುತ್ತೇನೆ. ಪಾಪ, ಅವರೂ ಕಲಿಯುವ ಉತ್ಸಾಹದಲ್ಲಿ ಈ ಪ್ರಯತ್ನವನ್ನು ಶದ್ಧೆಯಿಂದ ಪ್ರಾರಂಭಿಸುತ್ತಾರೆ.‌

‘ನಾನು ಒಳಗೆ ಬರಬಹುದೇ?’, ಸಮಯ, ತರಗತಿ, ಪಾಠ, ಪಠ್ಯಪುಸ್ತಕ, ಕಿರುಪರೀಕ್ಷೆ, ಹಾಜರಾತಿ, ನಿಯೋಜಿತ ಕಾರ್ಯ, ಅಂಕ, ಪ್ರಶ್ನೆ, ಉತ್ತರ, ಧನ್ಯವಾದಗಳು … ಇಂತಹ ಪದಗಳನ್ನು ಹೇಳಿಕೊಡುವುದು, ಕಲಿಯುವುದು ಅಷ್ಟು ಕಷ್ಟವಲ್ಲ. ಆದರೆ ಮಕ್ಕಳು “ಮ್ಯಾಮ್ ಅನ್ನೋ ಪದಕ್ಕೆ ಕನ್ನಡದಲ್ಲಿ ಏನಂತಾರೆ ಮ್ಯಾಮ್” ಅಂತ ಕೇಳಿದಾಗ ನಾನು ಪೇಚಿಗೆ ಸಿಕ್ಕಿಕೊಳ್ಳುತ್ತೇನೆ. 

ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ಅವರ ಶಿಕ್ಷಣ ಕ್ರಮವನ್ನೇ ನಾವು ನಮ್ಮದಾಗಿಸಿಕೊಂಡೆವು ಅಲ್ಲವೇ? ಸರ್, ಸಾರ್(ಸರ್ ನ ಕನ್ನಡ ರೂಪ) ಮಿಸ್, ಟೀಚರ್, ಮ್ಯಾಡಮ್ (ಅದರ ಸಂಕ್ಷಿಪ್ತ ರೂಪವಾಗಿ ಮ್ಯಾಮ್) – ಇವು ಆ ಶಿಕ್ಷಣ ಕ್ರಮದ ಭಾಗವಾಗಿ, ಅಧ್ಯಾಪಕರನ್ನು ಸಂಬೋಧಿಸಲು ಬಳಕೆಯಾದವು. ಬ್ರಿಟಿಷರು ಹೋಗಿ ಎಪ್ಪತ್ತೈದು ವರ್ಷಗಳಿಗಿಂತ ಹೆಚ್ಚು ಸಮಯವಾದರೂ ಈ ಪದಗಳ ಬಳಕೆಯು ಕನ್ನಡನಾಡಿನಲ್ಲಿ ಮುಂದುವರಿಯುತ್ತಲೇ ಇದೆ! 

ಗುರುಕುಲ, ಕೂಲಿಮಠಗಳ ಕಾಲದಲ್ಲಿ ಬಹುಶಃ ಗುರುಗಳೇ, ಅಯ್ನೋರೇ ಅನ್ನುವ ಪದಗಳನ್ನು, ಅಧ್ಯಾಪಕ ಸಂಭೋದನಾ ಪದಗಳಾಗಿ ವಿದ್ಯಾರ್ಥಿಗಳು ಬಳಸುತ್ತಿದ್ದಿರಬೇಕು. ಉತ್ತರ ಕರ್ನಾಟಕದ ಕನ್ನಡ ಶಾಲೆ ( ಪ್ರಾಥಮಿಕ ಶಾಲೆಗಳಿಗೆ ಬಳಸುವ ಪದ) ಗಳಲ್ಲಿ ‘ಅಕ್ಕೋರೇ’ ಅಂತ ಅಧ್ಯಾಪಕಿಯರನ್ನು ಸಂಭೋದಿಸುತ್ತಾರಂತೆ (ಹೌದು, ಗುರು‌ ಪದಕ್ಕೆ ಸ್ತ್ರೀಲಿಂಗ ಏನು? ಈ ಪ್ರಶ್ನೆ ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ‌ ಚಿಮ್ಮಿತು! ಗುರುಮಾತೆ? ಈ ಪದ ಬಳಸಿದರೆ  ಎಷ್ಟು ಅಸ್ವಾಭಾವಿಕ ಅನ್ನಿಸುತ್ತಲ್ಲ….!).

ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳು  ಅಧ್ಯಾಪಕರನ್ನು ಅವರ ಹೆಸರು ಹಿಡಿದು ಅಥವಾ ಅವರ ಕುಟುಂಬನಾಮ ಹಿಡಿದು ಸಂಭೋದಿಸುತ್ತಾರಂತೆ. ನಮ್ಮ ನಾಡಿನ ಸಂಪ್ರದಾಯಕ್ಕೆ ಈ ರೀತಿ ಯಾಕೋ ಅಷ್ಟು ಆಗಿಬಂದಿಲ್ಲ. 

ಹಾಂ,  ವಾಪಸ್ ತರಗತಿಯಲ್ಲಿನ ಆ ಪ್ರಶ್ನೆಗೆ ಬರೋಣ‌. ಮಕ್ಕಳು ನನ್ನನ್ನು ಈ ಪ್ರಶ್ನೆ ಕೇಳಿದಾಗ ಸ್ಪಷ್ಟ ಉತ್ತರ ಕೊಡಲಾಗದೆ ಒದ್ದಾಡಿ ಮೇಲಿನ ವಿಷಯಗಳನ್ನು ಹೇಳುತ್ತೇನೆ. ಅವರೂ ಸಹ ಏನು ಮಾಡುವುದೆಂದು ತೋಚದೆ ಮ್ಯಾಮ್ ಪದ ಬಳಕೆಯನ್ನೇ ಮುಂದುವರಿಸುತ್ತಾರೆ! ಕೆಲವರು ‘ಗುರುಗಳೇ’ ಅಂತಾರೆ. ಆ ಪದ ತೀರಾ ಔಪಚಾರಿಕ ಅನ್ನಿಸುತ್ತೆ ಮತ್ತು ಮಠಗಳ ನೆನಪು ತಂದುಬಿಡುತ್ತೆ!!! ಮತ್ತು ಗುರುಗಳೇ ಎಂದು ಕರೆಸಿಕೊಳ್ಳುವ ಪ್ರಭಾವಳಿ, ಕಾಂತಿ, ದೊಡ್ಡತನ ನನ್ನಂತಹ ಹುಲುಮಾನವಿಗೆ ಎಲ್ಲಿರುತ್ತೆ? ಮಕ್ಕಳು ಹಾಗಂದಾಗ ಮುಜುಗರ ಆಗುತ್ತೆ…

ಹೂಂ….ಅಂತೂ  ಈ ಪ್ರಶ್ನೆ ಇನ್ನೂ ಒಂದು‌ ಪ್ರಶ್ನೆಯಾಗಿಯೇ ಉಳಿದಿದೆ!