ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷದ  ತರಗತಿಗಳು ಪ್ರಾರಂಭವಾದಾಗ  ಅಧ್ಯಾಪಕರು ಹೊಸ ವಿದ್ಯಾರ್ಥಿನಿಯರ ಹೆಸರು ಕೇಳುವುದು ವಾಡಿಕೆ. ಹಾಗೆಯೇ ಈ ನಡುವೆ ನಾನು ಒಂದು ತರಗತಿಯ ವಿದ್ಯಾರ್ಥಿನಿಯರ ಹೆಸರು ಕೇಳುತ್ತಿದ್ದೆ.‌ ಒಬ್ಬ ವಿದ್ಯಾರ್ಥಿನಿ ನನ್ನ ಹೆಸರು ‘ಜಾನವಿ’ ಎಂದಳು. ಅದು ಜಾಹ್ನವಿ ಇರಬೇಕು ಅನ್ನಿಸಿ ನಾನು ”ಜಾಹ್ನವಿಯೇನಮ್ಮ ನಿನ್ನ ಹೆಸರು?” ಎಂದು ಕೇಳಿದೆ.‌ “ಅಲ್ಲ, ಅಲ್ಲ ಮ್ಯಾಮ್, ಜಾನವಿ,  ಅದೇ ಮ್ಯಾಮ್  ನದಿ ಹೆಸರು” ಅಂದಳು.‌  ಆಗ ನನಗೆ ಖಾತ್ರಿ ಆಯಿತು ಇವಳ ಹೆಸರು  ಖಂಡಿತ ಜಾಹ್ನವಿಯೇ, ಆದರೆ ಮುಂಚಿನಿಂದಲೂ ತಪ್ಪಾಗಿ ಜಾನವಿ, ಜಾನವಿ ಎಂದು ಉಚ್ಚರಿಸುತ್ತಿದ್ದಾಳೆ ಎಂದು.‌ ಆಗ ನಾನು ಅವಳಿಗೆ ಗಂಗಾವತರಣದ ಕಥೆ ಹೇಳಿದೆ. 

ಬೇಂದ್ರೆಯವರು ಬಂಧುರತೆಯಿಂದ ಬರೆದಂತೆ ಸುರಗಂಗೆಯು ಸ್ವರ್ಗದಿಂದ ಇಳಿದು ಬಂದು ‘ಹರನ ಜಡೆಯಿಂದ ಹರಿಯ ಅಡಿಯಿಂದ’ ಜಿಗಿದು, ರಭಸದಿಂದ ಹರಿದು, ಜಹ್ನು‌‌ ಋಷಿಯ ಆಶ್ರಮವನ್ನು ಮುಳುಗಿಸಿದಾಗ ಅವನು ಕೋಪ ಮಾಡಿಕೊಂಡು ಅವಳನ್ನು ಕುಡಿದುಬಿಡುತ್ತಾನೆ! ಅಲ್ಲಿಯ ತನಕ ಅವಳನ್ನು ಬಹು ಕಷ್ಟಪಟ್ಟು ಭೂಮಿಗೆ ಕರೆ ತಂದಿದ್ದ ಭಗೀರಥನು ಜಹ್ನುವನ್ನು ಕಾಡಿಬೇಡಿ, ತಪಸ್ಸಿನಿಂದ ಒಲಿಸಿ  ಗಂಗೆಯನ್ನು ಬಿಡುಗಡೆ ಮಾಡಿಸುವಲ್ಲಿ ಸಫಲನಾಗುತ್ತಾನೆ ; ಆ ಸಂದರ್ಭದಲ್ಲಿ ಜಹ್ನುವಿನ ತೊಡೆಯಿಂದ ಹೊರಗೆ ಬಂದ ಗಂಗೆ ಅವನ  ಮಗಳ ಸ್ಥಾನ ಪಡೆದು ಜಾಹ್ನವಿ ಎಂದು ಹೆಸರು ಪಡೆಯುತ್ತಾಳೆ.  ಈ ಕಥೆ ಕೇಳಿಸಿಕೊಂಡ ವಿದ್ಯಾರ್ಥಿನಿಯು “ಇನ್ಮೇಲೆ ನನ್ನ ಹೆಸರನ್ನ ಜಾಹ್ನವಿ ಅಂತ ಸರಿಯಾಗಿ ಬರೀತೀನಿ ಮ್ಯಾಮ್” ಅಂದಳು‌. ಆಗ ಅವಳ ಮುಖದಲ್ಲಿ ಮೂಡಿದ ಮುಗುಳ್ನಗು ನನಗೆ ಸಂತಸ ಕೊಟ್ಟಿತು‌‌ ; ತನ್ನ ಹೆಸರಿನ ಅರ್ಥವನ್ನು ಅರಿತದ್ದರಿಂದ ಉಂಟಾದ ಖುಷಿಯ ಮುಗುಳ್ನಗು ಅದು.‌