ನಲವತ್ತು ಐವತ್ತು ವರ್ಷಗಳ ಹಿಂದೆ ಅಂದರೆ ನಮ್ಮ ಬಾಲ್ಯಕಾಲದಲ್ಲಿ ಕರವಸ್ತ್ರ ಎಂಬ ಪದಕ್ಕೆ ( hand kerchief – ಇದಕ್ಕೆ ಮೂಲ – ಫ್ರೆಂಚ್ ಭಾಷೆಯ ಪದ – couvercheif – ತಲೆಯನ್ನು ಮುಚ್ಚಿಕೊಳ್ಳಲು ಬಳಸುತ್ತಿದ್ದ ಚೌಕಾಕಾರದ ಅಥವಾ ತ್ರಿಕೋನಾಕಾರದ ಬಟ್ಟೆ) ಸಂವಾದಿಯಾಗಿ ಮನೆಗಳಲ್ಲಿ ಬಳಸುತ್ತಿದ್ದ ಪದ ಅಂದರೆ ಕೈಚೌಕ. ಆಗಿನ ಕಾಲದಲ್ಲಿ ಮನೆಯಿಂದ ಹೊರಗೆ ಹೊರಟಾಗ, ಅಥವಾ ಶೀತ-ಜ್ವರದ ಬಾಧೆ ಇದ್ದಾಗ ಅಮ್ಮ ತನ್ನ ಮಕ್ಕಳಿಗೆ ಹೇಳಿಯೇ ಹೇಳುತ್ತಿದ್ದ ವಾಕ್ಯ ಅಂದ್ರೆ ‘ಕೈಚೌಕ ತಗೋ, ಮರೀಬೇಡ’.
ಕೈಚೌಕ ಅಂದರೆ ಕೈಮುಖಗಳನ್ನು ಕರೆಸಿಕೊಳ್ಳುವ ಉದ್ದೇಶದಿಂದ ಕೈಯಲ್ಲಿ ಅಥವಾ ಕೈಚೀಲದಲ್ಲಿ ನಾವು ಇರಿಸಿಕೊಳ್ಳುತ್ತಿದ್ದ ಚೌಕಾಕಾರದ ಒಂದು ಚಿಕ್ಕ ಬಟ್ಟೆ. ಬಡವರು, ಮಧ್ಯಮ ವರ್ಗದವರು ಸಾಧಾರಣವಾದ ಹತ್ತಿಯ ಸರಳ ಕೈಚೌಕ ಬಳಸಿದರೆ, ಶ್ರೀಮಂತರು ಮತ್ತು ಉತ್ತಮ ಕಲಾಭಿರುಚಿ ಇರುವವರು ರೇಷ್ಮೆಯ ಹಾಗೂ ಸುಂದರ ಕಸೂತಿಯುಳ್ಳ ಕೈಚೌಕ (ಕರವಸ್ರ್ತ)ಗಳನ್ನು ಬಳಸುತ್ತಿದ್ದರು. ಕರಕುಶಲ ಕಲೆಗಳಲ್ಲಿ ಆಸಕ್ತಿ ಇದ್ದ ಹುಡುಗಿಯರು, ಹೆಂಗಸರು ತಮ್ಮ ಕೈಚೌಕಗಳ ಮೇಲೆ ನೂಲಿನ ಚಿತ್ರಗಳನ್ನು ರಚಿಸಿಕೊಳ್ಳುತ್ತಿದ್ದರು, ಹಾಗೂ, ತಮ್ಮ ಇಷ್ಟದ ಜನರಿಗೆ ಇವನ್ನು ಉಡುಗೊರೆಯಾಗಿ ಕೊಡುವ ಕ್ರಮವೂ ಇತ್ತು. ಅಂದ ಹಾಗೆ ಕೈಚೌಕ ಎನ್ನುವುದು ಎಷ್ಟು ಸರಳ ಸಂಗತಿ ಆಗಿತ್ತೆಂದರೆ, ಏನಿಲ್ಲದಿದ್ದರೆ ಹಳೆಯ ಪಂಚೆಯ ತುಂಡನ್ನು ಚೌಕಾಕಾರವಾಗಿ ಕತ್ತರಿಸಿದರೆ ಅದೋ! ಒಂದು ಕೈಚೌಕ ತಕ್ಷಣ ತಯಾರಾಗಿಬಿಡುತ್ತಿತ್ತು!
ಹಳೆಯ ಕಾಲದ ಹಿಂದಿ ಸಿನಿಮಾಗಳಲ್ಲಿ ‘ರುಮಾಲ್’ ಎಂದು ಕರೆಸಿಕೊಳ್ಳುತ್ತಿದ್ದ ಈ ಕರವಸ್ತ್ರಕ್ಕೆ ವಿಶೇಷವಾದ ಪ್ರಣಯ ರಾಯಭಾರದ ಜವಾಬ್ದಾರಿ ಇರುತ್ತಿತ್ತು. ನಾಯಕಿ ತನ್ನ ಹೆಸರುಳ್ಳ ಅಥವಾ ಪ್ರಿಯತಮನ ಹೆಸರುಳ್ಳ ಕಸೂತಿ ಕರವಸ್ತ್ರವನ್ನು ನಾಯಕನಿಗೆ/ ತನ್ನ ಪ್ರೇಮಿಗೆ ಉಡುಗೊರೆಯಾಗಿ ಕೊಡುವುದು, ತಾನು ಒಳಗೊಳಗೇ ಇಷ್ಟ ಪಡುವ ನಾಯಕಿಯು ಬೀಳಿಸಿಕೊಂಡ ಕರವಸ್ತ್ರವನ್ನು ಎತ್ತಿಕೊಡುವ ನೆಪದಲ್ಲಿ ನಾಯಕ ಅವಳನ್ನು ಮಾತಾಡಿಸುವುದು ….. ಹೀಗೆ. ‘ರೇಷಮೀ ರುಮಾಲ್’ ಎಂಬ ಹಿಂದಿ ಸಿನಿಮಾ ಸಹ ಬಂದಿತ್ತು, 1961ರಲ್ಲಿ.
ಆದರೆ ಇಂದು ಕಾಗದದಿಂದ ತಯಾರಿಸಲಾಗುತ್ತಿರುವ ಟಿಶ್ಯೂ, ವೆಟ್ ಟಿಶ್ಯೂ, ಪರ್ಫ್ಯೂಮ್ಡ್ ಟಿಶ್ಯೂ, ವೈಪ್ಸ್ ಗಳ ಭರಾಟೆಯಲ್ಲಿ ಸರಳ ಕೈಚೌಕವನ್ನು ನೆನಪಿಸಿಕೊಳ್ಳುವವರೇ ಇಲ್ಲ. ಬಹುಶಃ ಕೊಳ್ಳುಬಾಕ ಸಂಸ್ಕೃತಿಯ ‘ಬಳಸು ಮತ್ತು ಎಸೆ’ ಧೋರಣೆಯಿಂದಾಗಿ ಈ ಟಿಶ್ಯೂ ಪೇಪರ್ ಎಂಬ ಪರಿಸರ ಶತ್ರು ಹುಟ್ಟಿ ಬಳಕೆಗೆ ಬಂದಿರಬೇಕು.
ಜಪಾನ್ ದೇಶದಲ್ಲಿ ಹದಿನೇಳನೇ ಶತಮಾನದಿಂದಲೇ ವಾಶಿ ಎಂಬ ಹೆಸರಿನಲ್ಲಿ ಈ ಟಿಶ್ಯೂ ಕಾಗದಗಳ ಬಳಕೆ ಇತ್ತಂತೆ. ಪಾಶ್ಚಾತ್ಯ ಪ್ರಪಂಚಕ್ಕೆ ಇದನ್ನು 1924 ರಲ್ಲಿ ಕಿಂಬರ್ಲೀ ಕ್ಲಾರ್ಕ್ ಎಂಬವರು ಕ್ಲೀನೆಕ್ಸ್ ಎಂಬ ಹೆಸರಿನಿಂದ, ಹಾಲಿವುಡ್ ನಟ ನಟಿಯರು ತಮ್ಮ ಮುಖಬಣ್ಣವನ್ನು ಕೋಲ್ಡ್ ಕ್ರೀಮ್ ಹಚ್ಚಿ ತೆಗೆಯಲು ಪರಿಚಯಿಸಿದ್ದಂತೆ. ಇದನ್ನು ಜನಪ್ರಿಯಗೊಳಿಸಲು ಹಾಲಿವುಡ್ ನಟ ನಟಿಯರು ಇದರ ಜಾಹೀರಾತು ಕೊಡುತ್ತಿದ್ದರಂತೆ. ಮುಂದೆ ಗ್ರಾಹಕರು ಇದನ್ನು ಬಳಸಿ ಎಸೆಯಬಹುದಾದ ಕರವಸ್ತ್ರ ವಾಗಿ ಉಪಯೋಗಿಸಲು ಪ್ರಾರಂಭಿಸಿದರಂತೆ! ಅಂತೂ ನೂರು ವರ್ಷಗಳಿಂದ ಈ ಟಿಶ್ಯೂ ಪೇಪರ್ ನಮ್ಮ ಜಗತ್ತನ್ನು ಆಳುತ್ತಾ, ಯಥಾಶಕ್ತಿ ಪರಿಸರ ಮಾಲಿನ್ಯಕ್ಕೆ ತನ್ನ ಕಾಣಿಕೆ ಸಲ್ಲಿಸುತ್ತಿದೆ ಅನ್ನಬೇಕು. ಆದರೆ ನಿಜವಾಗಿಯೂ ಬಯ್ದುಕೊಳ್ಳಬೇಕಾದ್ದು ಟಿಶ್ಯೂ ಕಾಗದವನ್ನಲ್ಲ, ಮಾನವರು ಎಂಬ ನಮ್ಮ ಸೋಮಾರಿತನವನ್ನ. ಅಲ್ಲವೆ?
ಟಿಶ್ಯೂ ಕಾಗದಗಳಂತೆ ಪರಿಸರಕ್ಕೆ ಹಾನಿ ಮಾಡದ, ಒಗೆದು ಮತ್ತೆ ಮತ್ತೆ ಬಳಸಬಹುದಾದ, ತನ್ನ ಹೆಸರಿನಷ್ಟೇ ಸರಳವಾದ ಕೈಚೌಕವು ಹಿಂದಿನ ಕಾಲದ ಸರಳ ಜೀವನದ ಒಂದು ಪ್ರತೀಕ ಎಂದು ಭಾಸವಾಗುತ್ತದೆ ನನಗೆ.
ಆದರೆ...ಟಿಶ್ಯೂ ಕಾಗದದ ಜಾಗದಲ್ಲಿ ಮತ್ತೆ ನಮ್ಮ ಸರಳ ಕೈಚೌಕವು ಜಗತ್ತನ್ನು ಆಳಬಹುದೇ…? ಈ ಪ್ರಶ್ನೆ ಮತ್ತು ಆಸೆ ಕಾಡುತ್ತವೆ ನನ್ನನ್ನು.