“ಓಹ್….ನಮ್ಮ ಅತ್ತೆ ಮನೆಯಲ್ಲಿ ಪೂಜೆ ಪುನಸ್ಕಾರ ಹೆಚ್ಚು”, ” ನಾನು ಬೆಳಿಗ್ಗೆ ಪೂಜೆ ಪುನಸ್ಕಾರ ಮುಗಿಸೋ ಹೊತ್ತಿಗೆ ಬೆಳಿಗ್ಗೆ ಹನ್ನೊಂದು ಗಂಟೆ ಆಗುತ್ತೆ”, “ಆಚಾರವಂತ್ರಪ್ಪಾ. ಪೂಜೆ ಪುನಸ್ಕಾರ ಮುಗಿಸ್ದೆ ಬರ್ತಾರಾ!” – ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವಲ್ಲ? ನಾನು ಈ ಪುನಸ್ಕಾರ ಎಂಬ‌ ಪದ ಕೇಳಿದಾಗಲೆಲ್ಲ ಏನು ಈ‌ ಪದದ ಅರ್ಥ ಎಂದು ಯೋಚಿಸುತ್ತಿದ್ದೆ. ಒಂದಷ್ಟು ಪರಾಮರ್ಶನ ಮಾಡಿ, ಗೂಗಲಿಸಿ, ಭಾಷಾಪ್ರಿಯರ ಜೊತೆಗೆ ಚರ್ಚಿಸಿ, ಕೊನೆಗೆ ನನಗೆ ಪರಿಚಯವಿರುವ ಸಂಸ್ಕೃತ ಪಂಡಿತರಾದ ಡಾ.ಹಯವದನ ಎಂಬವರ ಬಳಿ ಈ ಬಗ್ಗೆ ಕೇಳಿದಾಗ ಅವರು, ಸಂಸ್ಕೃತ ಭಾಷೆಯಲ್ಲಿ ಪುನಸ್ಕಾರ ಎಂಬ ಪದ ಇಲ್ಲ.‌ ಬಹುಶಃ ಪುರಸ್ಕಾರ ಎಂಬ ಪದವು ಜನರ ಸುಲಭೀಕರಣದ ಅಭ್ಯಾಸದಿಂದಾಗಿ‌ ಪುನಸ್ಕಾರ ಆಗಿದೆ ಅನ್ನಬಹುದು. ಅದು ಮೂಲತಃ ಪೂಜೆ ಪುರಸ್ಕಾರ. ಜನರ ಬಾಯಲ್ಲಿ ಪೂಜೆ ಪುನಸ್ಕಾರ ಆಗಿದೆ” ಎಂದರು. ಅವರೊಡನೆ ಮಾತಾಡಿದ ನಂತರ ಕನ್ನಡದಲ್ಲಿ‌‌ನ ಒಂದು ಪದಬಳಕೆಯ ಬಗ್ಗೆ ಸ್ಪಷ್ಟವಾಗಿ‌ ತಿಳಿದುಕೊಂಡ ಸಂತೋಷ ಉಂಟಾಯಿತು.