“ಹಿದನ್ನು ಏಗೆ ಹೊಪ್ಪುವುದು ಏಳು”. ಎರಡನೇ ಬಿಎಸ್ಸಿ ತರಗತಿಯ ನನ್ನೊಬ್ಬಳು ವಿದ್ಯಾರ್ಥಿನಿ ಪೂರ್ಣಿಮಾ ಕನ್ನಡ ತರಗತಿಯಲ್ಲಿ ಬೋರ್ಡಿನ ಮೇಲೆ ಬರೆದಿದ್ದನ್ನು ಓದಿದ್ದು ಹೀಗೆ! ಒಂದು ದಿನ ವಿದ್ಯಾರ್ಥಿನಿಯರಿಗೆ ಸರಿಯಾದ ಉಚ್ಚಾರ ಕಲಿಸಲು ಬೋರ್ಡಿನಲ್ಲಿ ಕೆಲವು ಪದ/ವಾಕ್ಯಗಳನ್ನು ಬರೆದು ಓದಿಸುತ್ತಿದ್ದಾಗ ನಡೆದ ಘಟನೆ ಇದು. (ಬೋರ್ಡಿಗೆ `ಕರಿಹಲಗೆ’ ಅನ್ನುವ ಪದ ಬಳಸಬೇಕಾ ಅಂತ ಒಂದು ನಿಮಿಷ ಯೋಚಿಸಿದೆ, ಆದರೆ ಕನ್ನಡ ಭಾಷೆಯು ಬೋರ್ಡು ಎಂಬ ಪದವನ್ನು ತನ್ನದಾಗಿಸಿಕೊಂಡಿದೆ, ಬಹುಶಃ ಅದೇ ಹೆಚ್ಚು ಸಹಜ ಅನ್ನಿಸುತ್ತೆ ಅಂದುಕೊಂಡು ಅದನ್ನೇ ಬಳಸಿದೆ).

“ಇದನ್ನು ಹೇಗೆ ಒಪ್ಪುವುದು ಹೇಳು?” ಎಂಬ ವಾಕ್ಯದ ಅವಳ ಉಚ್ಚಾರಣೆಯ ರೀತಿ ಕೇಳಿ ನನಗೆ ತುಂಬ ಗಾಬರಿ ಆಯಿತು. ನಾನೋ ಕನ್ನಡ ಭಾಷೆಯ ವ್ಯಾಕರಣ, ಉಚ್ಚಾರಣೆ ಈ ವಿಷಯಗಳಲ್ಲಿ `ವಿಪರೀತ ಮಿಜಿಮಿಜಿ ಮಾಡುವ ಅಂದರೆ ತಲೆ ತಿನ್ನೋ ಪಾರ್ಟಿ’ ಅಂತ ಹೆಸರು ಪಡೆದಿರೋ ವ್ಯಕ್ತಿ! ಏನು ಮಾಡೋಣ ಹೇಳಿ! ನನ್ನದು ಕೈಯಲ್ಲಿ ಸದಾಕಾಲ ಕೆಂಪು ಪೆನ್ನು ಹಿಡಿದ ಮೇಷ್ಟ್ರ ಕೆಲಸ ಅಲ್ವೇ? ನನ್ನ ಕನ್ನಡ ಅಧ್ಯಾಪಕ ಮಿತ್ರರಿಗೆ ಈ ಕಷ್ಟ ಗೊತ್ತಿರುತ್ತೆ! ಸರಿ. ಪ್ರಸ್ತುತ ನನ್ನ ತರಗತಿ ಫಜೀತಿಗೆ ಮರಳಿ ಬರೋಣ. ನಾಲ್ಕು ಪದ ಮಾತ್ರ ಇರುವ ಒಂದು ವಾಕ್ಯದಲ್ಲಿ ಪ್ರತಿ ಪದದಲ್ಲೂ ಅಕಾರ-ಹಕಾರದ ಬಗ್ಗೆ ಎಚ್ಚರ ವಹಿಸುವ ಪರಿಸ್ಥಿತಿ ಬಂದುಬಿಟ್ಟರೆ ಈ ಬಡಪಾಯಿ ಆಧ್ಯಾಪಕಿ ಏನು ಮಾಡಬೇಕು! ನಾನು ಎಷ್ಟು ಸಲ ತಿದ್ದಿದರೂ ನಾಲ್ಕು ಪದಗಳಲ್ಲಿ ಯಾವುದಾದರೂ ಒಂದರ ಉಚ್ಚಾರವನ್ನು ಆ ಹುಡುಗಿ ತಪ್ಪು ಮಾಡುತ್ತಿದ್ದಳು. ನಾನು ತಿದ್ದುವುದು, ಅವಳು ತಪ್ಪು ಉಚ್ಚರಿಸುವುದು, ಮತ್ತೆ ನಾನು ತಿದ್ದುವುದು, ಅವಳು ತಪ್ಪು ಉಚ್ಚರಿಸುವುದು ……… ಇದನ್ನು ನೋಡುತ್ತಾ ಕುಳಿತಿದ್ದ ತರಗತಿಯ ಎಪ್ಪತ್ತು, ಎಂಬತ್ತು ಹುಡುಗಿಯರಿಗೆ ಒಂದು ಪುಕ್ಕಟೆ ಮನರಂeನೆ ಸಿಕ್ಕಿದಂತಾಗಿ ಅವು ಬರುವ ನಗುವನ್ನು ಅಡಗಿಸುತ್ತಲೋ, ಕೆಲವೊಮ್ಮೆ ನಗುತ್ತಲೋ ಕೂತಿದ್ದವು. ಕೊನೆಗೆ ಸಮಯದ ಅಭಾವದಿಂದಾಗಿ, ವಿದ್ಯಾರ್ಥಿನಿ ಪೂರ್ಣಿಮಾಳಿಗೆ ಅಕಾರ-ಹಕಾರದ ಉಚ್ಚಾರಣೆಯನ್ನು ತಿದ್ದಿಕೊಳ್ಳಲು ಸಾಧ್ಯವಾಗುವ ಕೆಲವು ಮನೆಬರಹದ ಹಾಗೂ ಅಭ್ಯಾಸದ ಕೆಲಸಗಳನ್ನು ಕೊಟ್ಟು ಅಂದಿನ ತರಗತಿಯ ಪಾಠವನ್ನು ಮುಂದುವರಿಸಿದೆ ಅನ್ನಿ.

ನಾನು ಮೇಷ್ಟ್ರಾದ ಲಾಗಾಯ್ತಿನಿಂದಲೂ ಉಚ್ಚಾರಣೆಯ ಈ ಸಮಸ್ಯೆಯನ್ನು ಹಲವು ಮಕ್ಕಳಲ್ಲಿ ನೋಡಿದ್ದೇನೆ. ತರಗತಿಯಲ್ಲೋ, ಕನ್ನಡ ವಿಭಾಗದಲ್ಲೋ, ಕಾರ್ಯಕ್ರಮ ನಿರೂಪಣೆಯ ಅಭ್ಯಾಸದಲ್ಲೋ ಅವರನ್ನು ತಿದ್ದಿ ತಿದ್ದಿ ನಮಗೆ ಸಾಕಾದರೂ ಹೇಳಿಕೊಳ್ಳುವಂತಹ ಬದಲಾವಣೆ, ತಿದ್ದುಪಡಿ ಏನೂ ಆಗುತ್ತಿರಲಿಲ್ಲ. ಹೇಳಿಕೊಟ್ಟಷ್ಟು ಸಲ ಕಷ್ಟಪಟ್ಟು ಸರಿಯಾಗಿ ಹೇಳಿದರೂ ತಾವೇ ಹೇಳುವಾಗ ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದವು. ಈಗಲೂ ಮಾಡುತ್ತಿರುತ್ತವೆ. ಕಾಲೇಜಿನ ಕಾರ್ಯಕ್ರಮಗಳಲ್ಲಿ ಅವು ಹೀಗೆ ತಪ್ಪು ಉಚ್ಚರಿಸಿದಾಗ ಬೇರೆ ವಿಭಾಗದ ಅಧ್ಯಾಪಕರು ನಮ್ಮ ಕಡೆ `ಏನ್ರೀ ಕನ್ನಡ ವಿಭಾಗದವರೇ, ಇದೇನಾ ನೀವು ಕಲಿಸಿಕೊಟ್ಟಿದ್ದು?’ ಎನ್ನುವಂತೆ ಆಕ್ಷೇಪಣಾ ದೃಷ್ಟಿ ಬೀರುವಾಗ ಭೂಮಿ ಬಾಯಿಬಿಟ್ಟು ನಮ್ಮನ್ನು ನುಂಗಿಬಿಡಬಾರದೇ ಅನ್ನಿಸುತ್ತೆ. ಕನ್ನಡ ತರಗತಿಗಳು, ಕಾಲೇಜು ಕಾರ್ಯಕ್ರಮಗಳು ಮಾತ್ರವಲ್ಲದೆ ಸಾರ್ವಜನಿಕ ವಲಯದ ಮಾತುಕತೆ, ಸಭೆ, ಸಮಾರಂಭಗಳಲ್ಲೂ ಈ ನುಡಿತಪ್ಪು ನಮ್ಮ ಗಮನಕ್ಕೆ ಆಗಾಗ ಬರುತ್ತಿರುತ್ತೆ.

ಒಂದು ಬಾರಿಯಂತೂ, ನಮ್ಮ ರಾಜ್ಯದ ಕಾಲೇಜುಗಳ ನಿರ್ವಹಣೆ ಮಾಡುವ ಇಲಾಖೆಯಾದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ, ಈ ಉಚ್ಚಾರ ಸಮಸ್ಯೆಯ ಒಂದು ವಿಚಿತ್ರ ಉದಾಹರಣೆಯು ನನಗೆ ಸಿಕ್ಕಿತು. ಪಾಠಗಳನ್ನು ಅಂತರ್ಜಾಲಕ್ಕೆ ಅಳವಡಿಸುವ ಸಂದರ್ಭದ ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್‌ಎಂಎಸ್) ಕೆಲಸಕ್ಕಾಗಿ ನಾನು ಕೆಲವೊಮ್ಮೆ ಇಲಾಖೆಗೆ ಹೋಗಿ ಅಲ್ಲಿನ ಉದ್ಯೋಗಿಗಳನ್ನು ಸಂಪರ್ಕಿಸಬೇಕಾಗುತ್ತಿತ್ತು. ಆಗ `ಓ, ಇದಾ? ಈ ವಿಷಯಕ್ಕೆ ಹಿಂದೂ ಮೇಡಂ ಅವರ್‍ನ ನೋಡಿ’, `ಹಿಂದೂ ಮೇಡಂ ಅವರಿಗೆ ಗೊತ್ತಿರುತ್ತೆ, ಕೇಳಿ’, `ಹಿಂದೂ ಮೇಡಮ್ಮಾ? ಅವರು ಇವತ್ತು ಬಂದಿಲ್ಲ’ ॒.॒ ಈ ಮಾತುಗಳು ನನ್ನ ಕಿವಿ ಮೇಲೆ ಬೀಳುತ್ತಿದ್ದವು. ಯಾರಪ್ಪಾ ಇದು? `ಹಿಂದೂ’ ಅಂತ ಹೆಸರಿಟ್ಟುಕೊಂಡವರು! ಎಂದು ನನಗೆ ಆಶ್ಚರ್ಯವಾಯಿತು. ಒಂದಷ್ಟು ವಿಚಾರಿಸಿದ ಮೇಲೆ, ಮತ್ತು ಆ ಮೇಡಂ ಅವರನ್ನು ಹುಡುಕಿ ಅವರನ್ನೇ ಈ ಬಗ್ಗೆ ಕೇಳಿ ತಿಳಿದುಕೊಂಡ ಮೇಲೆ ಗೊತ್ತಾಯಿತು ; ಓಹ್, ಅದು ಹಿಂದೂ ಅಲ್ಲ, ಅವರ ಹೆಸರು ಇಂದು ಎಂದು. ಇಂದು ಎಂಬ ಪದಕ್ಕೆ ಕನ್ನಡ ಭಾಷೆಯಲ್ಲಿ ಚಂದ್ರ ಎಂಬ ಆರ್ಥವೂ ಇದೆಯಲ್ಲವೇ? ಅದಕ್ಕೇ ಹೆಣ್ಣುಮಕ್ಕಳಿಗೆ ಇಂದುಕಲಾ, ಇಂದುಮತಿ, ಇಂದುಶ್ರೀ, ಇಂದುಶೀತಲಾ ಅಂತೆಲ್ಲ ಹೆಸರಿಡುತ್ತಾರೆ. ಈ `ಇಂದು’ ಜನರ ಉಚ್ಚಾರಣೆಯ ತಪ್ಪಿನಿಂದಾಗಿ `ಹಿಂದೂ’ ಆಗಿತ್ತು. ರಾಮರಾಮಾ! ಅಂತೂ ನನಗೆ `ಹಿಂದೂ’ ಮೇಡಂ ಸಿಕ್ಕಿದ್ರು ಅನ್ನಿ!

ಯಾಕೆ ಈ ಅಕಾರ-ಹಕಾರದ ಉಚ್ಚಾರಣೆ ಇಷ್ಟು ತೊಂದರೆ ಮಾಡುತ್ತೆ ಎಂಬುದರ ಬಗ್ಗೆ ವಿದ್ವಾಂಸರು ಬೇರೆ ಬೇರೆ ದೃಷ್ಟಿಕೋನಗಳಿಂದ ಚರ್ಚೆ ಮಾಡುತ್ತಾರೆ. ಆದರೆ ಸಮಸ್ಯೆಯ ಪರಿಹಾರ ಮಾತ್ರ ಸುಲಭದ್ದಲ್ಲ. ನಾನು ಪ್ರಾಯೋಗಿಕವಾಗಿ ಗಮನಿಸಿದಂತೆ ತರಗತಿಗಳಲ್ಲಿ ಹ ಅಕ್ಷರದಿಂದ ಶುರುವಾಗುವ ಪದಗಳಲ್ಲಿನ `ಹ’ಕಾರವನ್ನು ಬಾಯಿಯನ್ನು ಅಗಲವಾಗಿ ತೆರೆದು ಉಚ್ಚರಿಸಿದರೆ, ಆ ಅಕ್ಷರದ ಉಚ್ಚಾರ ಸರಿಯಾಗುತ್ತದೆ. ನಾನು ಪಾಠ ಮಾಡುವಾಗ ಈ ವಿಧಾನವನ್ನು ಅನೇಕ ಸಲ ಅನುಸರಿಸಿದ್ದೇನೆ, ಈಗಲೂ ಅನುಸರಿಸುತ್ತಿದ್ದೇನೆ.

ಅಂತೂ ಅ-ಹ ಕಾರದ ಹಾಹಾಕಾರವು ತರಗತಿಗಳನ್ನು ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿನ ಕನ್ನಡ ಮಾತನ್ನು ಕಾಡುತ್ತಿರುವುದು ಸುಳ್ಳಲ್ಲ. ಕನ್ನಡ ಮೇಷ್ಟ್ರುಗಳು ಅನುಭವಿಸುವ ತರಗತಿ ತಾಪತ್ರಯಗಳಲ್ಲಿ ಈ ಉಚ್ಚಾರದೋಷವು ಮುಂಚೂಣಿಯಲ್ಲಿದೆ ಎಂದು ಧಾರಾಳವಾಗಿ ಹೇಳಬಹುದು!