`ನೆನಪು ಬಾಳಿನ ಬುತ್ತಿ’ ಎಂದಿದೆ ಒಂದು ಕವಿಮನಸ್ಸು. `ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಬಂದೀತು?’ ಎನ್ನುತ್ತದೆ ಒಂದು ಕನ್ನಡ ಗಾದೆಮಾತು. ಬುತ್ತಿ ಎಂಬುದು ಕನ್ನಡದಲ್ಲಿ ಬಳಕೆಯಲ್ಲಿರುವ ಒಂದು ಪದ. ನಾಮಪದವಾದಾಗ ಅದಕ್ಕೆ “ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ ರೊಟ್ಟಿ ಮೊದಲಾದುದು’’ ಎಂಬ ಅರ್ಥಗಳಿವೆ ಅನ್ನುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟು. ಬುತ್ತಿ ಕ್ರಿಯಾಪದವಾದಾಗ ಆಟದಲ್ಲಿ ತೂರಿ ಬರುವ ಚಿಣ್ಣಿ, ಚೆಂಡು ಮೊದಲಾದುವನ್ನು ಹಿಡಿಯುವುದು ಎಂಬ ಅರ್ಥವಿದೆ. ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಂತೂ ಮೊಸರನ್ನವನ್ನೇ ಬುತ್ತಿ ಎಂದು ಕರೆಯುವುದುಂಟು! ಬುತ್ತಿಗೆ ಒಂದು ಪರ್ಯಾಯ ಪದ ಪಾಥೇಯ. ಇದರ ಅರ್ಥವೆಂದರೆ  ಪ್ರಯಾಣ ಸಮಯಕ್ಕಾಗಿ ಕಟ್ಟಿಕೊಂಡ ಊಟ ಎಂದು. ಬುತ್ತಿಗೆ ನೆನಪು, ಸ್ಮರಣೆ ಎಂಬ ಅರ್ಥಗಳೂ ಇವೆ. ಕೊಂಕಣಿ ಭಾಷೆಯಲ್ಲಿ ಸಾಯುವ ವ್ಯಕ್ತಿಯು ಮಾಡಿದ ಕೊನೆಯ ಊಟಕ್ಕೆ ಕೊನೆಯ ಪ್ರಯಾಣಕ್ಕೆ ಅವನು ಕಟ್ಟಿಕೊಂಡು ಹೋದ ಬುತ್ತಿ ಎಂದು ಹೇಳುತ್ತಾರಂತೆ!

ಸಂಸ್ಕೃತದಲ್ಲಿ ಭುಕ್ತಿ ಎಂಬ ಪದವಿದೆ. ಅದಕ್ಕೆ ಊಟ, ಭೋಜನ, ಸುಖಾನುಭವ, ಭೋಗ ಎಂಬ ಅರ್ಥಗಳಿವೆ, ಗುಪ್ತರ ಕಾಲದಲ್ಲಿ ಈ ಪದವು ನಗರಾಡಳಿತ ಹಾಗೂ ವಾಸ್ತುಶಿಲ್ಪದಲ್ಲೂ ಬಳಕೆಯಾಗುತ್ತಿತ್ತಂತೆ! ಜ್ಯೋತಿಷ್ಯಶಾಸ್ತ್ರದಲ್ಲಿ ಈ ಪದದ ಬಳಕೆ ಇದೆ. ಹಿಂದಿ, ಮರಾಠಿ ಭಾಷೆಗಳಲ್ಲೂ ಈ ಪದದ ಬಳಕೆ ಇದೆ. ಕನ್ನಡದಲ್ಲೂ ಭುಕ್ತಿ ಪದದ ಬಳಕೆಯಾಗುತ್ತದೆ. ಕೆಲವು ಉಪಾಹಾರ ಮಂದಿರಗಳಿಗೆ `ಭುಕ್ತಿ’ ಎಂಬ ಹೆಸರಿಡುವುದೂ ಉಂಟು. ಬಹುಶಃ ಭುಕ್ತಿ ಪದದ ಇನ್ನೊಂದು ರೂಪವೇ ಬುತ್ತಿ ಇರಬಹುದು. `ರೊಟ್ಟಿ ಬುತ್ತಿ ಮಾಡಿಕೊಂಡು ಎತ್ತಿನ ಬಂಡಿ ಹೂಡಿಕೊಂಡು, ಎಂದು ಹೋಗೇನ ತವರೀಗೆ’ ಎಂಬ ಸಾಲು `ಆಷಾಢ ಮಾಸ ಬಂದೀತವ್ವ, ಅಣ್ಣ ಬರಲಿಲ್ಲ ಕರಿಯಾಕ’ ಎಂಬ ಜನಪ್ರಿಯ ಕನ್ನಡ ಜನಪದಗೀತೆಯಲ್ಲಿ ಇದೆ. ೨೦೧೪ನೇ ಇಸವಿಯಲ್ಲಿ, ಪ್ರಕಾಶ್ ರೈ ನಿರ್ದೇಶನದಲ್ಲಿ ಬಿಡುಗಡೆಯಾಗಿ ತುಂಬ ಜನಪ್ರಿಯತೆ ಗಳಿಸಿದ ಕನ್ನಡ ಸಿನಿಮಾ `ಒಗ್ಗರಣೆ’ಯಲ್ಲಿರುವ `ಈ ಜನುಮವೇ ಅಹ ದೊರಕಿದೆ ರುಚಿ ಸವಿಯಲು’ ಎಂಬ ಹಾಡಿನಲ್ಲಿ, `ದುಡಿವ ಜನರು ಬಿಡುವಿನಲ್ಲಿ ತೆರೆವ ಬುತ್ತಿಯೆ ಬಲುರುಚಿ’ ಎಂಬ ಸಾಲಿದೆ. ಹೀಗೆ ಬುತ್ತಿ ಎಂಬ ಪದವು ಅನೇಕ ರೀತಿಯಲ್ಲಿ ಬಳಕೆಗೊಂಡು ಶೋಭಿಸಿದೆ.

ಒಟ್ಟಿನಲ್ಲಿ, ಒಂದೊಂದು ಕನ್ನಡ ಪದದ ಹಿಂದೆಯೂ ಒಂದೊಂದು ಅರ್ಥಲೋಕವಿರುತ್ತದೆ; ಕನ್ನಡನಾಡಿನ ಬದುಕಿನ ರೀತಿಯು ಬೆಳೆದು ಬಂದ ದಾರಿಗುರುತುಗಳಿರುತ್ತವೆ.