ನಮಗೆ ವಿದ್ಯಾವರ್ಧಕ ಸಂಘ ಮಹಾವಿದ್ಯಾಲಯದ ಪದವಿಪೂರ್ವ ತರಗತಿಯಲ್ಲಿ(೧೯೮೬-೮೮) ಕನ್ನಡ ಪಾಠ ಮಾಡುತ್ತಿದ್ದ ನಾಗಲಕ್ಷ್ಮಿ ಮೇಡಂ ಅವರು, `ಸಮಯ ಎಷ್ಟಾಯ್ತು?. `ಎಷ್ಟನೇ ಪುಟಕ್ಕೆ ಪಾಠ ನಿಲ್ಲಿಸಿದ್ದೆ?, `ತರಗತಿಗೆ ಬರಕ್ಕೆ ಯಾಕೆ ತಡ ಆಯ್ತು? ………. ಹೀಗೆ ಬೆಂಗಳೂರಿನಲ್ಲಿ `ಸಾಮಾನ್ಯವಾಗಿ ಬಳಸದ ಹಾಗೆ ೯೯% ಕನ್ನಡ ಬಳಸುತ್ತಿದ್ದರು. ಇನ್ನು ಸಭೆಗಳಲ್ಲಿ ಕೆಲವೊಮ್ಮೆ ಕೆಲವು ನಿರೂಪಕರು `ನಿಮ್ಮ ಸಂಚಾರಿ ದೂರವಾಣಿಗಳನ್ನು ಮೌನಮಿಡಿತಕ್ಕೆ ಹಾಕಿ, `ಮುಖಪುಸ್ತಕ(ಫೇಸ್ಬುಕ್)ದಲ್ಲಿ ಓದಿದ ಹಾಗೆ …….. ಈ ರೀತಿಯ ಪದಪ್ರಯೋಗ ಮಾಡುತ್ತಾರೆ.
ಖಾಸಗಿ ಒಡೆತನದ ವಿದ್ಯುನ್ಮಾನ ಮಾಧ್ಯಮಗಳಲ್ಲಿ `ಟ್ರಾಫಿಕ್, `ಬ್ರೇಕಿಂಗ್ ನ್ಯೂಸ್, ಕರ್ಫ್ಯೂ, ಆಂಬುಲೆನ್ಸ್, ….. ಇಂತಹ ಇಂಗ್ಲಿಷ್ ಪದಗಳು ನಿಸ್ಸಂಕೋಚವಾಗಿ ಬಳಕೆಯಾಗುತ್ತವೆ.
ಆಡುಗನ್ನಡದಲ್ಲಿ ಎಷ್ಟು `ಕನ್ನಡ ಇರಬೇಕು? ಈ ಗೊಂದಲ ನನ್ನನ್ನು ಕಾಡುತ್ತೆ. ವಿದ್ಯಾವಂತರು ಬಳಸುವ `ದೆಟ್ ಈಸ್ ನಾಟ್ ಕರೆಕ್ಟ್, ಅಲ್ವಾ?, ಯು ಹ್ಯಾವ್ ಸೀನ್ ಇಟ್, ಅಲ್ವಾ, `ದೆಟ್ ಈಸ್ ಸೋ ಅನ್ಫೇರ್ ಅಂತ ಅನ್ನಿಸ್ತು, ಆಲ್ರೆಡಿ ಅದರ ಐಡಿಯಾ ಇತ್ತು ನಂಗೆ ….ಎಂಬ ವಾಕ್ಯಗಳನ್ನು ಗಮನಿಸಿ. ಇಲ್ಲಿ ವಾಕ್ಯದ ಕೊನೆಯ ಕ್ರಿಯಾಪದ ಮಾತ್ರ ಕನ್ನಡ ಆಗಿರುತ್ತದೆ. ಇಂಗ್ಲಿಷ್ ಚೆನ್ನಾಗಿ ಬಲ್ಲ ಕನ್ನಡಿಗರು ಬಳಸುವ ಒಂದು ಭಾಷಾಪ್ರಭೇದವಿದು. ಇವರು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಇಂತಹ ಉನ್ನತ ವಿದ್ಯಾಭ್ಯಾಸ ಗಳಿಸಿ ಕಾಲೇಜು ಅಧ್ಯಾಪಕ, ವೈದ್ಯ, ಕಾರ್ಯನಿರ್ವಾಹಕ ಯಂತ್ರಜ್ಞಾನಿ(ಎಕ್ಷಿಕ್ಯೂಟಿವ್ ಇಂಜಿನಿಯರ್) ಇಂತಹ ಹುದ್ದೆಗಳಲ್ಲಿ ಇರುವವರು.
ಇನ್ನೊಂದು ರೀತಿಯ ಕನ್ನಡ ಆಗಾಗ ಕಿವಿಗೆ ಬೀಳುತ್ತೆ. `ನೈಟೆಲ್ಲಾ ಎದ್ದಿದ್ದೆ ಗೊತ್ತಾ?, `ಸ್ಟ್ರಾಫಿಕ್ ಜಾಸ್ತಿ ಇತ್ತು ಅಮ್ಮ, ಆಟೋನೆ ಬರ್ಲಿಲ್ಲ, `ಈ ಲೆಸನ್ ಆಗಿಲ್ಲ ಮ್ಯಾಮ್, `ಯಾಕೆ ಟೆನ್ಶನ್ ಆಗಿದೀಯ?, `ಈ ಮ್ಯಾಂಗೋ ತಿನ್ನು, ಎಷ್ಟು ಸ್ವೀಟ್ ಆಗಿದೆ ಗೊತ್ತಾ?, `ನಮ್ಮ ವೈಫು ಆನಿಯನ್ ಬೇಕು ಅಂದಿದಾರೆ, `ಯಾಕೊ ಮಚಾ, ನಿನ್ ಡವ್ ಇನ್ನೂ ಬಂದಿಲ್ಲಾ ಅಂತ ಬೇಜಾರಾ? ಎಣ್ಣೆ ಒಡಿಯೋಣ ಬಾರೋ, `ಆ ಸಾಂಗ್ ಹಾಕೋ, ಬೊಂಬಾಟಾಗಿದೆ ಗೊತ್ತಾ?, `ಏಯ್ ಸೂಪರ್ ಕಣೋ, `ನೆಟ್ ಖಾಲಿಯಾಗಿತ್ತು, ಕರೆನ್ಸಿ ಇರ್ಲಿಲ್ಲ, ಇಲ್ಲಿ ವೈಫೈ ಇಲ್ವಾ?, `ನಾನು ಸ್ಯಾಲರಿ ತಗೊಂಡು ಹೋಗಿ ಮನೇಲಿ ಕೊಟ್ಬಿಡ್ತೀನಪ್ಪಾ, ರೇಷನ್ ಎಲ್ಲಾ ತರೋದು ನಮ್ಮನೆಯವ್ರೇ, `ಮೀಟ್ರು, ಮ್ಯಾಟ್ರು ಎರ್ಡೂ ಇರ್ಬೇಕಮ್ಮಾ, … ಬೀದಿಯಲ್ಲಿ, ಬಸ್ಸುಗಳಲ್ಲಿ, ಕೇಳಿಸುವ ಪ್ರಭೇದ ಇದು. ಅರೆವಿದ್ಯಾವಂತರು, ನಗರಗಳಲ್ಲಿ ನೆಲೆಸಿದ ವಿದ್ಯಾವಂತರು ಬಳಸುವ ಕನ್ನಡ ಪ್ರಭೇದ.
ಇನ್ನು ಜಾಹೀರಾತುಗಳ ಕನ್ನಡ. `ನಿಮ್ಮ ಸ್ಕಿನ್ ಫೇರ್ ಆಂಡ್ ಗ್ಲೋಯಿಂಗ್ ಆಗುತ್ತೆ, `ನಿಮ್ಮ ಮನೆಯಲ್ಲಿರೋ ಹಾರ್ಮ್ಫುಲ್ ಜರ್ಮ್ಸ್ನ ಇದು ಓಡಿಸುತ್ತೆ, `ಈ ಆಯಿಲ್ ತುಂಬ ಲೈಟ್ ಆಗಿರುತ್ತೆ ಕನ್ನಡ ಬರದ ಹಾಗೂ ದೂರದರ್ಶನ ನೋಡುವ ಯಾವುದೇ ಭಾಷೆಯವರಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ಅತಿ ಚಾಣಾಕ್ಷ ರೀತಿಯಲ್ಲಿ ನುಡಿಮಿಶ್ರಣ ಮಾಡಿದ ಕನ್ನಡ ಇದು!
ಇಂತಹ `ವಿವಿಧ ಕನ್ನಡಗಳನ್ನು ಕೇಳಿದಾಗ `ಯಾವ ಕನ್ನಡ ಹಿತ ನನಗೆ ಎಂದು ಯೋಚಿಸುವಂತಾಗುತ್ತದೆ. ಅವರವರಿಗೆ ಅವರವರ ಕನ್ನಡ ಹಿತವೇನೋ.
ಒಟ್ಟಿನಲ್ಲಿ ಎಷ್ಟು ಜನರು ಕನ್ನಡವನ್ನು ಆಡುತ್ತಾರೋ ಅಷ್ಟು ಆಡುಗನ್ನಡಗಳ ಪ್ರಭೇದಗಳು ಇರುತ್ತವೆ ಎಂದು ತೋರುತ್ತದೆ. ಹೀಗಾಗಿ ಆಡುಗನ್ನಡದಲ್ಲಿ ಎಷ್ಟು ಕನ್ನಡ ಇರಬೇಕು ಎಂಬ ಪ್ರಶ್ನೆಯು ಹುಟ್ಟಿದಾಗ ಇಷ್ಟೇ ಕನ್ನಡ ಇರಬೇಕು ಎಂಬ ನಿಯಮವನ್ನು ವಿಧಿಸಲಾಗುವುದಿಲ್ಲವೇನೋ. ಲೋಕೋಭಿನ್ನರುಚಿಃ ಎಂಬಂತೆ ಲೋಕೋಭಿನ್ನಕನ್ನಡ: ಅನ್ನಬಹುದೇ!?