ಕನ್ನಡ ಅಧ್ಯಾಪಕರಿಗೆ ಎಷ್ಟರ ಮಟ್ಟಿಗೆ ಇಂಗ್ಲಿಷ್ ಬೇಕು? ಅವರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುವ ಶಕ್ತಿ ಇರಬೇಕೇ? ಅವರು ಅನುವಾದದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡರೆ ಸಾಕೇ? ಅವರ ಕನ್ನಡ ಎಷ್ಟರ ಮಟ್ಟಿಗೆ `ಬೆರಕೆಯಿಲ್ಲದ ಕನ್ನಡ’ ಆಗಿರಬೇಕು? ………… ಇಂತಹ ಪ್ರಶ್ನೆಗಳು ಆಗಾಗ ಚರ್ಚೆಗೆ ಬರುವುದುಂಟು. ಇದೇ ಸಂದರ್ಭದಲ್ಲಿ ಎರಡು ವಿಲಕ್ಷಣ ಸಂಗತಿಗಳನ್ನು ನಾವು ಗಮನಿಸಬಹುದು.

೧.    ತಾವು ಕನ್ನಡ ಅಧ್ಯಾಪಕರಾಗಿದ್ದರೂ ತಮ್ಮ ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ತಮ್ಮ ನುಡಿಬೆರಕೆ, ನುಡಿಜಿಗಿತಗಳಿಂದ ತೋರಿಸದಿದ್ದರೆ ತಮ್ಮ ಪ್ರತಿಷ್ಠೆಗೆ ಕುಂದು ಬರುತ್ತದೇನೋ ಎಂಬಂತೆ ವರ್ತಿಸುವ ಕನ್ನಡ ಅಧ್ಯಾಪಕರು ಕೆಲವರಿದ್ದಾರೆ. ವಸಾಹತುಶಾಹಿಯ ಆರಾಧನಾ ಮನೋಭಾವದ ಪಳೆಯುಳಿಕೆ ಎನ್ನೋಣವೇ ಇದನ್ನು?

೨.    ಇನ್ನೊಂದು ಅತಿರೇಕವೂ ಕಾಣುತ್ತದೆ. “ತಮಗೆ ಇಂಗ್ಲಿಷ್‌ನ ಗೋಜೇ ಬೇಡ, ಅದರಿಂದ ನಮಗೆ ಆಗಬೇಕಾದ್ದೇನಿಲ್ಲ, ನಮಗೆ ಕನ್ನಡವೊಂದಿದ್ದರೆ ಸಾಕು’’ ಎಂದು ಇಂಗ್ಲೀಷನ್ನು ಸಂಪೂರ್ಣ ದೂರವಿಡುವ ಕೆಲವು ಕನ್ನಡ ಅಧ್ಯಾಪಕರಿದ್ದಾರೆ. ತಮ್ಮ ಶಾಲಾ ಕಾಲೇಜಿನ ವಿದ್ಯಾಭ್ಯಾಸದ ಸಮಯದಲ್ಲಿ ಸರಿಯಾದ ಇಂಗ್ಲಿಷ್ ಕಲಿಯುವ ಅವಕಾಶ ಸಿಗದಿರುವುದೂ ಇದಕ್ಕೊಂದು ಕಾರಣವಿರಬಹುದು. `ಸಿಗಲಾರದ ದ್ರಾಕ್ಷಿ ಹುಳಿ’ ಎಂಬ ಮನೋಭಾವವೂ ಇದಾಗಿರಬಹುದಲ್ಲವೇ? ಇಂತಹ ಅಧ್ಯಾಪಕರಿಗೆ ಕಾಲೇಜಿನಲ್ಲಿ ಅನಿವಾರ್ಯವಾದ ಇಂಗ್ಲಿಷ್ ಬಳಕೆಯ ಸಂದರ್ಭ ಬಂದಾಗ ತೀರಾ ಕಷ್ಟವಾಗುತ್ತದೆ. ಉದಾಹರಣೆಗೆ ಕೇಂದ್ರ ಸರ್ಕಾರದೊಂದಿಗೆ, ಅಥವಾ ರಾಷ್ಟ್ರಮಟ್ಟದ ಸಂಸ್ಥೆಗಳಾದ ಯುಜಿಸಿ, ಎನ್.ಸಿ.ಸಿ.(ವಿದ್ಯಾರ್ಥಿ ಸೈನಿಕ ದಳ) ಮುಂತಾದವುಗಳ ಜೊತೆಗೆ ಪತ್ರವ್ಯವಹಾರ ಮಾಡುವುದು  ಕಬ್ಬಿಣದ ಕಡಲೆ ಅನ್ನಿಸಿಬಿಡುತ್ತದೆ.  

ಹಾಗಾದರೆ ಇಂಗ್ಲೀಷಿನ ಜೊತೆಗೆ ಕನ್ನಡ ಅಧ್ಯಾಪಕರ  ಸಂಬಂಧ   ಸಂಪರ್ಕಗಳು ಹೇಗಿರಬೇಕು? ಇದರಲ್ಲಿ ಸಕಾರಾತ್ಮಕ ಮನೋಭಾವದ ಅಗತ್ಯವಿದೆ. ಬಹುಶಃ ಇಲ್ಲಿ ನಾವು ಎರಡು ನೆಲೆಗಳಲ್ಲಿ ಯೋಚಿಸಬಹುದು ಅನ್ನಿಸುತ್ತದೆ.

೧.    ಇಂಗ್ಲೀಷಿನ ಬಗ್ಗೆ ಭಯ ಬೇಡ. ಪ್ರಯತ್ನ ಮಾಡಿದರೆ ಅದನ್ನು ಕಲಿತು ಅದರ ಮೂಲಕ ಕಛೇರಿ ಪತ್ರ ವ್ಯವಹಾರ ಮಾತ್ರವಲ್ಲ, ಆ ಭಾಷೆಯ ಸಹಾಯದಿಂದ ಕನ್ನಡವನ್ನು ಶ್ರೀಮಂತಗೊಳಿಸುವ ಕೆಲಸವನ್ನು ಕನ್ನಡ ಅಧ್ಯಾಪಕರು ಮಾಡಬಹುದು. ಹೊಸ ಪದಗಳ ಸೃಷ್ಟಿ, ಹೊಸ ಜ್ಞಾನಶಿಸ್ತುಗಳ ಅನುವಾದದ ಮೂಲಕ ಕನ್ನಡವನ್ನು ಬೆಳೆಸುವುದು ಮುಖ್ಯವಾಗಿ ಆಗಬೇಕಾದ ಕೆಲಸ. ಕನ್ನಡವು ಕಾಲಸೂಕ್ತಗೊಳ್ಳಬೇಕಾದದ್ದು ಹೀಗೆಯೇ ಅಲ್ಲವೇ?

೨.    ಇಂಗ್ಲೀಷಿನಲ್ಲಿ ಮಾತಾಡುವುದು ಒಂದು ಪ್ರತಿಷ್ಠೆಯ ವಿಷಯವಾಗಬೇಕಿಲ್ಲ, ಅದು ಕನ್ನಡ ಬರದವರೊಂದಿಗೆ ಮಾತಾಡುವ ಅಗತ್ಯದ ವಿಷಯವಾಗಬೇಕು, ಅಷ್ಟೆ. ಕನ್ನಡ ಅಧ್ಯಾಪಕರಿಗೆ ಸೊಗಸಾದ ಕನ್ನಡ ಮಾತಾಡುವುದಕ್ಕಿಂತ ದೊಡ್ಡ ಪ್ರತಿಷ್ಠೆ ಇನ್ನೇನಿರಲು ಸಾಧ್ಯ?

ಅಶೀಶ್ ನಂದಿ ವಸಾಹತುಶಾಹಿಯನ್ನು ಹಿತಶತ್ರು ಅಂದರು. ನಾವು ಕನ್ನಡ ಅಧ್ಯಾಪಕರು ಇಂಗ್ಲೀಷನ್ನು ಇಂಧನ ಎಂದುಕೊಳ್ಳುವುದೇ ಯುಕ್ತ ಅನ್ನಿಸುತ್ತದೆ.