ಪದವಿ ತರಗತಿಗಳಲ್ಲಿ ಹೊಸ ತಂಡ ಬಂದ ಮೊದಲ ದಿನ ಇನ್ನೂ ಅಧಿಕೃತ (ಕಾಲೇಜಿನ ಕಛೇರಿ ಮೂಲಕ ಬರುವಂಥದ್ದು) ಪ್ರವೇಶಾತಿ ಪಟ್ಟಿ ಬಂದಿಲ್ಲದಿರುವುದರಿಂದ, ಹಾಜರಾಗಿರುವ ವಿದ್ಯಾರ್ಥಿನಿಯರಿಂದಲೇ ಒಂದು ಹಾಳೆಯಲ್ಲಿ ಹೆಸರು ಬರೆಸಿಕೊಳ್ಳುವ ಬಗ್ಗೆ ಹಿಂದಿನ ಕನ್ನಡ ಪ್ರಸಂಗವೊಂದರಲ್ಲಿ ಬರೆದಿದ್ದೆ. ವಿದ್ಯಾರ್ಥಿನಿಯರು ಹೆಸರು ಬರೆಯುವ ರೀತಿಯಲ್ಲೇ ನಮಗೆ ಅವರ ಕನ್ನಡ ಬರವಣಿಗೆಯ ಗುಣಮಟ್ಟದ ಅರಿವು ತಕ್ಕ ಮಟ್ಟಿಗೆ ಆಗುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿನಿಯರು ತಮ್ಮ ಹೆಸರು ಬರೆಯುವಾಗ ತಪ್ಪು ಮಾಡುವುದಿಲ್ಲ. ಆದರೆ ಎಲ್ಲ ನಿಯಮಗಳಿಗೂ ಒಂದು ಅಪವಾದ ಅಂತ ಇರುತ್ತಲ್ಲ! ಒಮ್ಮೆ ಒಂದು ತರಗತಿಯಲ್ಲಿ ಹೀಗೆ ಹೆಸರು ಬರೆಸಿಕೊಂಡು ಆ ಪಟ್ಟಿಯನ್ನು ಗಮನಿಸುತ್ತಿದ್ದೆ. ಒಬ್ಬ ಹುಡುಗಿ ತನ್ನ ಹೆಸರನ್ನು `ಕಾಂಚಾಣ್ಣ’ ಎಂದು ಬರೆದಿದ್ದಳು. ನಾನು ಅದು ಕಾಂಚನಾ ಇರಬಹುದು ಎಂದು ಊಹಿಸಿದೆ ಮತ್ತು ಆ ಹೆಸರು ಬರೆದ ಹುಡುಗಿಯನ್ನು ಎದ್ದು ನಿಲ್ಲಲು ಹೇಳಿದೆ. ಮುಗ್ಧವಾಗಿ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತುಕೊಂಡವಳನ್ನು `ನಿನ್ನ ಹೆಸರೇನಮ್ಮ? ಅಂದೆ. `ಕಾಂಚನಾ’ ಅಂದಳು. ಅವಳನ್ನು ತರಗತಿಯ ನಂತರ ವಿಭಾಗಕ್ಕೆ ಬರುವಂತೆ ಹೇಳಿದೆ. ಬಂದಳು ಹುಡುಗಿ. ಅವಳು ತನ್ನ ಹೆಸರು ಬರೆದದ್ದನ್ನು ತೋರಿಸಿ `ಯಾಕಮ್ಮಾ, ಹೀಗೆ ಬರೆದಿದ್ದೀಯ? ಸರೀನಾ ಇದು?’’ ಅಂತ ಕೇಳಿದೆ. ಅವಳು `ಮ್ಯಾಮ್, ನಂಗೆ ಸರಿಯಾಗಿ ಕನ್ನಡ ಬರಿಯಕ್ಕೆ ಬರಲ್ಲ. ಮನೆಯಲ್ಲಿ ತೆಲುಗು ಮಾತಾಡೋದು. ಯಾವಾಗ್ಲೂ ಕನ್ನಡದಲ್ಲಿ ಪಾಸಾಗೋದೇ ಕಷ್ಟ. ತುಂಬ ಮಿಸ್ಟೇಕ್ಸ್ ಮಾಡ್ತೀನಿ’’ ಅಂದಳು. ಮೊದಲನೇ ಪದವಿ ಹಂತದ ತರಗತಿಯಲ್ಲಿ ಓದುತ್ತಿರುವ ಈ ಹುಡುಗಿಯ ಕನ್ನಡ ಕಲಿಕೆಯ ಪರಿಸ್ಥಿತಿ ನೋಡಿ ನನಗೆ ತುಂಬ ಬೇಸರವಾಯಿತು. ನೋಡೋಣ, ಒಂದಿಷ್ಟು ಬರವಣಿಗೆ ಕಲಿಸಲು ಪ್ರಯತ್ನಿಸೋಣ ಅನ್ನಿಸಿ ಮಾರನೆಯ ದಿನದಿಂದಲೇ ಕಾಗುಣಿತ, ಹ್ರಸ್ವಾಕ್ಷರ, ದೀರ್ಘಾಕ್ಷರ, ಒತ್ತು, ಕೊಂಬು, ಕಾಗುಣಿತ …….. ಮುಂತಾದ ಮೂಲ ಅಂಶಗಳ ಪನರ್ಮನನ ಶುರು ಮಾಡಿಸಿದೆ. ಒಂದಷ್ಟು ದಿನ ಬಂದು ಪಾಠ ಹೇಳಿಸಿಕೊಂಡ ಹುಡುಗಿ ತನ್ನ ಬರವಣಿಗೆಯನ್ನು ತುಸು ತಿದ್ದಿಕೊಂಡಳು ಅನ್ನಿ. ಆದರೂ ಉನ್ನತ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳು ಅಕ್ಷರಾಭ್ಯಾಸದ ಮಟ್ಟದಲ್ಲಿ ಉಳಿಯುವುದು ಎಲ್ಲ ಕನ್ನಡ ಅಧ್ಯಾಪಕರಿಗೂ ಗಾಬರಿ ಹುಟ್ಟಿಸುವ ವಿಷಯ.