ಕಬ್ಬಿಣದ ಕಡಲೆಯಂತಹ ಹಳೆಗನ್ನಡ ಪಾಠಗಳು ಅಥವಾ ಅತ್ಯಂತ ಅಮೂರ್ತ ಹಾಗೂ ಸಂಕೀರ್ಣವಾಗಿರುವ ವೈಚಾರಿಕ ಪಾಠಗಳು ಕನ್ನಡ ಅಧ್ಯಾಪಕರ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ ನಿಜ. ಆದರೆ ತೀರಾ ಸರಳ ಭಾಷೆಯಲ್ಲಿರುವ ಲಲಿತ ಪ್ರಬಂಧಗಳು ಅಥವಾ ಪ್ರವಾಸ ಕಥನಗಳು ಪಠ್ಯಭಾಗವಾದಾಗ ಅಧ್ಯಾಪಕರಿಗೆ ಇನ್ನೊಂದು ರೀತಿಯ ಸವಾಲು ಎದುರಾಗುತ್ತೆ ನೋಡಿ. ಇದನ್ನು ವಿಚಿತ್ರ ಅನ್ನದೆ ವಿಧಿಯಿಲ್ಲ. ಅದರಲ್ಲೂ ಆ ಪಾಠದ ವಿಷಯವು ಸರಳವಾದ ಆದರೆ  ರಸಹೀನವೆನ್ನಿಸುವ ಮಾಹಿತಿಯಿಂದ ಕೂಡಿದ್ದಾಗಲಂತೂ ಇದ್ದಿದ್ದೂ ಕಷ್ಟ.

ಇದು ಹೇಗೆ ಎನ್ನುವಿರಾ? ವಿದ್ಯಾರ್ಥಿಗಳಿಗೆ ತಾವೇ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲದ, ಆದರೆ ತರಗತಿಯಲ್ಲಿ ವಿವರಿಸಿದರೆ ತೀರಾ ಸೀರಸ ಅನ್ನಿಸುವ (ಅಂದರೆ ಇದನ್ನು ಓದಿ ಹೇಳಕ್ಕೆ ಇವರೇ ಬೇಕಾ!? ಎಂಬ ಭಾವನೆ ತರುವ) ಪಾಠಗಳು ಇದ್ದಾಗ ಅಧ್ಯಾಪಕರಿಗೆ ಒಂದು ವಿಚಿತ್ರ ಇಕ್ಕಟ್ಟು ಎದುರಾಗುತ್ತದೆ. ಕರ್ತವ್ಯ ದೃಷ್ಟಿಯಿಂದ ಪಾಠ ಮಾಡಲೇಬೇಕು, ಆದರೆ ಶುರು ಮಾಡಿದರೆ ನಿಲ್ಲಿಸಬೇಕು ಎನ್ನುವಷ್ಟು ಬೇಸರ ಉಂಟು ಮಾಡುವ ಸಪ್ಪೆಕಡಲೆಗಳಿವು. ನನಗೆ ಇಂಥದ್ದೊಂದು ಸವಾಲು ಎದುರಾದಾಗ ನಾನು ಪರಿಹರಿಸಿಕೊಂಡ ರೀತಿ ಇದೋ ಇಲ್ಲಿದೆ.

ಒಮ್ಮೆ ಎರಡನೆಯ ವರ್ಷದ ಬಿ.ಎಸ್ಸಿ. ತರಗತಿಗೆ ನೇಮಿಚಂದ್ರರ `ಪೆರುವಿನ ಪವಿತ್ರ ಕಣಿವೆಯಲ್ಲಿ’ ಎಂಬ ಪ್ರವಾಸ ಕಥನವನ್ನು ಕನ್ನಡ ಪಾಠಗಳ ಭಾಗವಾಗಿ ಇಡಲಾಗಿತ್ತು. ನಮ್ಮಷ್ಟಕ್ಕೆ ನಾವೇ ಓದಿಕೊಂಡರೆ ಕುಳಿತಲ್ಲೇ ಒಂದು ಹೊಸ ಪ್ರಪಂಚದ ದರ್ಶನ ಮಾಡಿಸುವಷ್ಟು ಶಕ್ತವಾದ ಗದ್ಯ ಬರವಣಿಗೆ ಅದು. ಆದರೆ ಅದರ ಸರಳ ಶೈಲಿಯಿಂದಾಗಿ ತರಗತಿಯಲ್ಲಿ ಪಾಠ ಮಾಡಲು ನಿಂತರೆ `ಇದೇನಪ್ಪಾ, ಈ ಮ್ಯಾಮ್ ಇಷ್ಟು ಸುಲಭವಾದದ್ದನ್ನ ಸುಮ್ಮನೆ ಓದಿಕೊಂಡು ಹೋಗ್ತಾರಲ್ಲ, ನಮ್ಗೇನು ಓದಕ್ಕೆ ಬರಲ್ವಾ?’ ಅನ್ನಿಸುವಂತೆ ಮಾಡುತ್ತಿತ್ತು ಆ ಪಾಠ! ಏನು ಮಾಡುವುದು? ಯೋಚಿಸಿ ಯೋಚಿಸಿ ನನ್ನ ತಲೆಬಿಸಿಯಾಯಿತು.

ನೋಡಿ, ಆಗ ಹೊಳೆದದ್ದು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತೊಡಗಿಸುವ ಅಂದರೆ ಅವರೇ `ಮಾಡಿ ಕಲಿವ’ ಸಕ್ರಿಯ ತರಗತಿಯ ಉಪಾಯ. ಆ ಪಾಠದಲ್ಲಿ ಹನ್ನೊಂದು ಅಧ್ಯಾಯಗಳಿದ್ದವು. ಸರಿ, ತರಗತಿಯಲ್ಲಿದ್ದ ಸುಮಾರು ಅರವತ್ತು ವಿದ್ಯಾರ್ಥಿಗಳನ್ನು ಹನ್ನೊಂದು ಅಧ್ಯಯನ ತಂಡಗಳಾಗಿ ವಿಭಾಗಿಸಿ ಅವರಿಗೆ ಒಂದೊಂದು ಅಧ್ಯಾಯವನ್ನು ಮಂಡಿಸಲು ಒಪ್ಪಿಸಿದೆ. ಅವರು ಸಂಕ್ಷಿಪ್ತವಾಗಿ ಆ ಅಧ್ಯಾಯವನ್ನು ವಿವರಿಸಿ ಅದಕ್ಕೆ ಪೂರಕವಾಗಿ ಚಿತ್ರ, ಹಾಡು, ನಾಟಕ, ಪರಿಣಾಮಕಾರಿ ಪ್ರದರ್ಶನ(ಪಿಪಿಟಿ) ಮುಂತಾದ ಸಾಹಿತ್ಯೇತರ ಕಲಾಭಿವ್ಯಕ್ತಿ ವಿಧಾನಗಳಿಂದ ತರಗತಿಯಲ್ಲಿ ಪ್ರಸ್ತುತ ಪಡಿಸಬೇಕು ಎಂದು ಹೇಳಿದೆ. ಕೊನೆಯಲ್ಲಿ ಒಬ್ಬೊಬ್ಬರೂ ತಾವು ತಂಡಕಾರ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ಮತ್ತು ತಾವು ಇದರಿಂದ ಕಲಿತ ವಿಷಯದ ಬಗ್ಗೆ ಎರಡು ಪುಟಗಳಿಗೆ ಮೀರದಂತೆ ಒಂದು ಕಿರುಪ್ರಬಂಧವನ್ನು ಬರೆಯಬೇಕೆಂದು ಹೇಳಿದೆ. ತುಂಬ ಚೆನ್ನಾಗಿ ಮಂಡನೆ ಮಾಡಿದ ತಂಡಕ್ಕೆ ಪುಸ್ತಕ ಬಹುಮಾನ ಕೊಡುವುದಾಗಿ ಘೋಷಿಸಿದೆ.

ಸಂತೋಷದ ವಿಷಯವೆಂದರೆ ಮಕ್ಕಳಿಗೆ ಈ ಕ್ರಮವು ತುಂಬ ಉತ್ಸಾಹ ಮೂಡಿಸಿ ಅವರು ಗರಿಗೆದರಿದ ಹಕ್ಕಿಗಳಂತಾಗಿಬಿಟ್ಟರು. ಮುಂದಿನ ಹತ್ತು-ಹನ್ನೆರಡು ವಾರಗಳಲ್ಲಿ ಅವರು ಓದಿದ್ದೇನು.. ನನ್ನ ಹತ್ತಿರ ಚರ್ಚಿಸಿ ತಯಾರಾಗಿದ್ದೇನು ….. ನಾಟಕ, ಹಾಡು, ಚಿತ್ರ, ಮಡಕೆ-ಕುಡಿಕೆಯ ಮೇಲೆ ಚಿತ್ರ ಬರೆದು ಸಂಭ್ರಮಿಸಿದ್ದೇನು …. ಓಹೋಹೋಹೋ .. .ತರಗತಿಯ ವಾತಾವರಣವೇ ಬದಲಾಗಿಹೋಯಿತು. ತೂಕಡಿಸಿದಂತೆ ಕಾಣುತ್ತಾ ಬೇಸರದಿಂದ ತರಗತಿಯಲ್ಲಿ ಕುಳಿತಿರುತ್ತಿದ್ದ ಮಕ್ಕಳು ಇವರೇನಾ ಎಂಬಷ್ಟರ ಮಟ್ಟಿಗೆ ಹೊಸದಾಗಿಬಿಟ್ಟರು ಅವರು! ಆ ಅರ್ಧವರ್ಷ ಹೇಗೆ ಕಳೆಯಿತೊ ಗೊತ್ತಾಗಲಿಲ್ಲ. ಕಲಿಕೆ, ಮನರಂಜನೆ, ಉಲ್ಲಾಸ ಎಲ್ಲವೂ ಇದ್ದ ಲವಲವಿಕೆಯ ದಿನಗಳವು.

ಹೀಗೆ ಕನ್ನಡ ವಿಷಯದ ಒಂದು ಸುಲಭಪಾಠ!ವನ್ನು ಹೊಸ ರೀತಿಯಲ್ಲಿ ಮಕ್ಕಳು ಕಲಿತರು.