ಮನಸ್ಸು ಬಾಲ್ಯಕ್ಕೆ ಹೋಯಿತೆಂದರೆ ಶಾಲೆಯಲ್ಲಿನ ಕನ್ನಡ ತರಗತಿಗಳು ನೆನಪಾಗುತ್ತವೆ.
ಮಂಗಳೂರಿಗೆ ಸೇರಿದ್ದ ಕಾಟಿಪಳ್ಳ ಮತ್ತು ಬೈಕಂಪಾಡಿ ಎಂಬ ಪುಟ್ಟ ಊರುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ನಡೆದದ್ದು. ಆ ಸರಳವಾದ ಹಳ್ಳಿಶಾಲೆಗಳಲ್ಲಿ ಎಷ್ಟು ಶ್ರದ್ಧಾವಂತ ಅಧ್ಯಾಪಕ-ಅಧ್ಯಾಪಕಿಯರಿರುತ್ತಿದ್ದರು! ಈಗ ನಾನೇ ಕಾಲೇಜು ಅಧ್ಯಾಪಕಿಯಾಗಿ ಅನೇಕ ವರ್ಷ ಕಳೆದ ಮೇಲೆ ಹಿನ್ನೋಟದ ಕಿಟಕಿಯಿಂದ ನೋಡುವಾಗ ಆ ಅಧ್ಯಾಪಕರ ಕಷ್ಟಸುಖಗಳು ಹೇಗಿದ್ದಿರಬಹುದು ಎಂದು ಯೋಚಿಸುವಂತಾಗುತ್ತದೆ. ಮುಗ್ಧ, ಅರಳುಗಣ್ಣುಗಳ ಆದರೆ ತುಂಬ ಚೇಷ್ಟೆ ಮಾಡುವ ಮಕ್ಕಳನ್ನು ತಹಬಂದಿಯಲ್ಲಿಟ್ಟು ಅವುಗಳಿಗೆ ಪಾಠ ಹೇಳಿಕೊಡುವುದು ಸುಲಭದ ಕೆಲಸವೇನಲ್ಲ. ಅಂತಹ ಮಕ್ಕಳಾಗಿದ್ದ ನಮ್ಮನ್ನು ತಮ್ಮ ತಾಳ್ಮೆ, ಉಪಾಯ, ಪ್ರೀತಿಗಳಿಂದ, ಕೆಲವೊಮ್ಮೆ ಹುಸಿ ಕೋಪದಿಂದ ಸುಮ್ಮನಿರಿಸಿ ಪಾಠ ಹೇಳಿಕೊಟ್ಟು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಆ ಅಧ್ಯಾಪಕರು ರೂಪಿಸಿದರಲ್ಲ ಎಂದು ಮನಸ್ಸು ತುಂಬಿ ಬರುತ್ತದೆ.
ಶಾಲಾ ಅಧ್ಯಾಪಕರೆಂದರೆ ತುಂಬ ನೆನಪಾಗುವವರು ನಮಗೆ ರಾಗವಾಗಿ ಪದ್ಯಗಳನ್ನು ಹೇಳಿಕೊಡುತ್ತಿದ್ದ ಮತ್ತು ಸಾಭಿನಯವಾಗಿ ಗದ್ಯಪಾಠ, ನಾಟಕಗಳನ್ನು ಕಲಿಸುತ್ತಿದ್ದ ಕನ್ನಡ ಅಧ್ಯಾಪಕರು. ಅದರಲ್ಲೂ ನಮ್ಮ ಪಾರ್ವತಿ ಟೀಚರ್ (ಇವರ ಬಗ್ಗೆ ಹಿಂದಿನ ಪ್ರಸಂಗವೊಂದರಲ್ಲಿ ಬರೆದಿದ್ದೇನೆ). `ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ’’(ಕುವೆಂಪು), “ಸ್ಥವಿರ ಗಿರಿಯ ಚಲನದಾಸೆ, ಮೂಕವನದ ಗೀತದಾಸೆ’’(ಪು.ತಿ.ನ), “ಏನು ಹೇಳೈ ಕರ್ಣ ಚಿತ್ತಗ್ಲಾನಿ ಯಾವುದು ಮನಕೆ ಕುಂತೀಸೂನುಗಳ ಬೆಸಗೈಸಿಕೊಂಬುದು ಸೇರದೇ ನಿನಗೆ’’(ಕುಮಾರ ವ್ಯಾಸ), ಮುಂತಾದ ಅದ್ಭುತ ಕವಿತೆಗಳನ್ನು ತಮಗೆ ತಿಳಿದ ರಾಗದಲ್ಲಿ ತರಗತಿಯಲ್ಲಿ ನಮ್ಮಿಂದ ಹೇಳಿಸುತ್ತಿದ್ದರು. ನಾವು ಅವರೊಂದಿಗೆ ಹಾಡುತ್ತಾ ಹಾಡುತ್ತಾ, ಆಡಾಡುತ್ತಾ ಎಂಬಂತೆ ಈ ಕವಿತೆಗಳನ್ನು, ಕಾವ್ಯಭಾಗಗಳನ್ನು ಬಾಯಿಪಾಠ ಕಲಿತುಬಿಡುತ್ತಿದ್ದೆವು. ಇಂದಿಗೂ ಅವು ನೆನಪಿನಲ್ಲಿವೆ. ಅರ್ಥ ಅಷ್ಟಾಗಿ ತಿಳಿಯದ, ಕೇವಲ ಲಯ, ಗುಂಗುಗಳೇ ಇಷ್ಟವೆನ್ನಿಸತ್ತಿದ್ದ ಪುಟ್ಟ ವಯಸ್ಸು ಆಗ ನಮ್ಮದು. ಈಗ ಯೋಚಿಸಿದರೆ ಅನ್ನಿಸುತ್ತೆ, ಈ ಹಾಡುಗಳ ಪ್ರವೇಶದ್ವಾರದ ಮೂಲಕ ಕನ್ನಡ ಕಾವ್ಯವೆಂಬ ಅರಮನೆಗೆ ಈ ಅಧ್ಯಾಪಕರು ನಮಗೆ ಪ್ರವೇಶ ದೊರಕಿಸಿಕೊಟ್ಟುಬಿಟ್ಟರು ಎಂದು. ಕನ್ನಡದ ಸಂಭ್ರಮಾಚರಿತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ವೈದೇಹಿಯವರು ಸಹ, ರಾಗವಾಗಿ ಹಾಡುವುದರ ಮೂಲಕವೇ ತಾವು ಕನ್ನಡ ಸಾಹಿತ್ಯದ ಭವ್ಯ ಜಗತ್ತಿಗೆ ಪ್ರವೇಶಿಸಿದ್ದು ಎಂದು ಒಂದು ಕಡೆ ಬರೆದಿದ್ದಾರೆ.
ಒಟ್ಟಿನಲ್ಲಿ ಅನೇಕರ ಮಟ್ಟಿಗೆ ಬಾಲ್ಯಕಾಲದ ರಾಗಸೇತುವಾದ ಕನ್ನಡ ಅಧ್ಯಾಪಕರು ತಂಪುಹೊತ್ತಿನಲ್ಲಿ ನೆನೆಯಬೇಕಾದವರು.