ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವುದು ಅನೇಕ ವರ್ಷಗಳಿಂದ ನಡೆದು ಬಂದ ಒಂದು ಪದ್ಧತಿ. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜೂ(ಬೆಂಗಳೂರು) ಇದಕ್ಕೆ ಹೊರತಲ್ಲ. ನವೆಂಬರ್ ೧ನೆಯ ದಿವಸವು, ಪರೀಕ್ಷೆಯೋ, ಅರ್ಧವಾರ್ಷಿಕ ಪರೀಕ್ಷೆಯ ನಂತರದ ದೀರ್ಘ ರಜೆಯ ನಡುವೆ ಬಂದಾಗ ಅಂದೇ ರಾಜ್ಯೋತ್ಸವವನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಕಾಲೇಜು ಪ್ರಾರಂಭವಾದ ನಂತರ, ಒಂದು ದಿನ ಈ ಸಂಸ್ಥೆಯಲ್ಲಿ (ಈಗ ಈ ಕಾಲೇಜು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿದೆ) ಕನ್ನಡ ಹಬ್ಬವನ್ನು ಮಾಡಲಾಗುತ್ತೆ.
ಹಿಂದೆ ಅಂದರೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ರೂಪಣೆಗೆ ಮುಂಚೆ ನಮ್ಮ ಕಾಲೇಜಿನ ಕನ್ನಡ ಹಬ್ಬದಲ್ಲಿ ಒಂದು ಗಮನ ಸೆಳೆಯುವ ಸಂಗತಿ ಇರುತ್ತಿತ್ತು. ಅದೇನೆಂದರೆ ಗಣ್ಯ ಅತಿಥಿಗಳು, ಪ್ರಾಂಶುಪಾಲರು ಮತ್ತು ಕನ್ನಡ ಸಂಘದ (ಅಧ್ಯಾಪಕ) ಸಂಚಾಲಕರು ಇರುವಂತಹ ವೇದಿಕೆಯಲ್ಲಿ, ಮೂರನೇ ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳಿಗೆ ಒಂದು ಸ್ಥಾನ ಇರುತ್ತಿತ್ತು. ವೇದಿಕೆಯ ಮೇಲೆ ಅವಳಿಗೆ ಇರುತ್ತಿದ್ದ ಕೆಲಸ ಅಂದರೆ ಅಂದಿನ ಸಭಾ ಕಾರ್ಯಕ್ರಮದ ವಂದನಾರ್ಪಣೆ ಮಾಡುವುದು. ಯಾರು ಈ ಹುಡುಗಿ?
ಹಾಂ, ಇವಳ ಪರಿಚಯ ಮಾಡಿಕೊಳ್ಳೋಣವೇ? ಕಾಲೇಜಿನಲ್ಲಿ ಈ ವಿದ್ಯಾರ್ಥಿನಿಯನ್ನು ಕನ್ನಡತಿ ಎಂದು ಕರೆಯಲಾಗುತ್ತಿತ್ತು. ಆ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಚುನಾಯಿತ ಪ್ರತಿನಿಧಿಗಳಲ್ಲಿ ಇವಳು ಸಹ ಒಬ್ಬಳಾಗಿರುತ್ತಿದ್ದಳು. ನಮ್ಮ ಕಾಲೇಜಿನಲ್ಲಿ ಇರುವಂತಹ ಒಟ್ಟು ಸುಮಾರು ಹದಿನೈದು ವಿವಿಧ ಸಂಯೋಜನೆಗಳ ಮೊದಲನೇ, ಎರಡನೇ ಮತ್ತು ಮೂರನೇ ವರ್ಷದ ಬಿ.ಎಸ್ಸಿ. ತರಗತಿಗಳ ವಿದ್ಯಾರ್ಥಿನಿಯರು ತಮ್ಮೊಳಗೆ, ಕನ್ನಡ ಪ್ರತಿನಿಧಿ(ಕೆ. ಆರ್. ಕನ್ನಡ ರೆಪ್ರೆಸೆಂಟೇಟಿವ್ ಎಂದು ಗುರುತಿಸಲಾಗುತ್ತಿತ್ತು)ಯೊಬ್ಬಳನ್ನು ಚುನಾಯಿಸುತ್ತಿದ್ದರು. ನಂತರ ನಡೆಯುವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ತರಗತಿ ಕನ್ನಡ ಪ್ರತಿನಿಧಿಗಳೆಲ್ಲ ಸೇರಿ, ಮತ್ತೆ ತಮ್ಮೊಳಗೆ ಕಾಲೇಜು ಮಟ್ಟದ ಒಬ್ಬ ಕನ್ನಡ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಈ ಚುನಾಯಿತ ಕನ್ನಡತಿಯು ಕನ್ನಡತಿಯರ ಕನ್ನಡತಿಯಾಗಿರುತ್ತಿದ್ದಳು. ಅವಳು ತನ್ನ ಚುನಾವಣಾ ಭಾಷಣದಲ್ಲಿ ತನ್ನ ಕನ್ನಡಾಭಿಮಾನದ ಬಗ್ಗೆ ಕೆಲವು ಮಾತುಗಳನ್ನು ಹೇಳಿ ಚಪ್ಪಾಳೆ ಗಿಟ್ಟಿಸುವುದು, ನಂತರ ಅವರಲ್ಲೊಬ್ಬಳು ಗೆಲ್ಲುವುದು ಇವು ನಡೆಯುತ್ತಿದ್ದವು. ನಂತರ ಬೇರೆ ಎಲ್ಲ ಪದಾಧಿಕಾರಿಗಳಿಗೆ ಹಾಕುವಂತೆ, `ಗೆಲುವಿನ ವಲ್ಲಿ(ವಿಶ್ವಸುಂದರಿ ಸ್ಪರ್ಧೆ ಮುಂತಾದವುಗಳಲ್ಲಿ ಗೆದ್ದವರ ಹೆಗಲು ಬಳಸಿ ಮೈಮೇಲೆ ಬರುವಂತೆ ಇರುವ ಹೊಳೆಯುವ ಸ್ಯಾಟಿನ್ ಬಟ್ಟೆಯಿಂದ ಮಾಡಿದ ಬಿರುದು ಪಟ್ಟಿ(ಸ್ಯಾಷೇ) ಹಾಕುತ್ತಾರಲ್ಲ, ಅಂಥದು) ಮತ್ತು ಒಂದು ಪದನಾಮ ಬಿಲ್ಲೆ (ಬ್ಯಾಡ್ಜ್)ಗಳನ್ನು ಇವಳಿಗೂ ಅಂದರೆ ಕಾಲೇಜು ಕನ್ನಡತಿಗೂ ಹಾಕುತ್ತಿದ್ದರು. ಅಂದಿನ ಚುನಾವಣೆಯ ನಂತರ ಪ್ರಾಂಶುಪಾಲರು ಬಂದು ಗೆದ್ದವರಿಗೆ ಒಂದು ಗುಲಾಬಿ ಹೂ ಕೊಟ್ಟು ಅಭಿನಂದನೆ ಸಲ್ಲಿಸುವುದು ಆ ಎಳೆಯ ವಯಸ್ಸಿನ ವಿದ್ಯಾರ್ಥಿನಿಯರಿಗೆ ನಿಜಕ್ಕೂ ಮನಸ್ಸನ್ನು ಮುದಗೊಳಿಸುವ ಸಂಗತಿ ಆಗಿರುತ್ತಿತ್ತು ಅನ್ನಿಸುತ್ತೆ. ಆ ಮಕ್ಕಳ ಸಂತೋಷ ನೋಡಿ ನಾವು ಅಧ್ಯಾಪಕರೂ ಖುಷಿ ಪಡುತ್ತಿದ್ದೆವು.
ಸರಿ, ಈ ವಲ್ಲಿ, ಬಿಲ್ಲೆಯ ಸಂಭ್ರಮಗಳ ಹುರುಪು ತುಸು ಶಾಂತಗೊಂಡು ದಿನಗಳು ಸಾಮಾನ್ಯತೆಗೆ ಮರಳಿದಾಗ ಹುಡುಗಿಯರು ತಮ್ಮ ಪ್ರಯೋಗಾಲಯ, ತರಗತಿಗಳು, ನಿಯೋಜಿತ ಕಾರ್ಯ, ಕಿರುಪರೀಕ್ಷೆ ಅದೂ ಇದೂ ಎಂದು ಬಿಡುವಿಲ್ಲದ ಚಟುವಟಿಕೆಗಳಲ್ಲಿ ಮುಳುಗಿ ಹೋಗುತ್ತಿದ್ದರು. ಪದವಿ ಶಿಕ್ಷಣದ ಮೂರನೆಯ ವರ್ಷದ ವ್ಯಾಸಂಗಕ್ರಮದಲ್ಲಿ ಭಾಷೆಗಳು ಇರುವುದಿಲ್ಲ. ಹೀಗಾಗಿ ಕನ್ನಡ ವಿಭಾಗದ ಜೊತೆಗೆ ಮೂರನೆಯ ವರ್ಷದ ಪದವಿ ವಿದ್ಯಾರ್ಥಿನಿಯರ ಸಂಪರ್ಕ, ಸಂಬಂಧ ತೀರಾ ಕಡಿಮೆ ಇರುತ್ತಿತ್ತು. ಮೊದಮೊದಲು ನಮ್ಮನ್ನು ಅಂದರೆ ಕನ್ನಡ, ಇಂಗ್ಲಿಷ್ ಭಾಷಾ ಅಧ್ಯಾಪಕರನ್ನು ಕಂಡರೆ `ನಮಸ್ತೆ ಮ್ಯಾಮ್, ………… ಗುಡ್ಮಾರ್ನಿಂಗ್ ಮ್ಯಾಮ್, …….. `ಭಾಷೆ ಕ್ಲಾಸ್ ಇಲ್ದೆ ಬೇಜಾರಾಗುತ್ತೆ ಮ್ಯಾಮ್, ಒಂದ್ಸಲ ನಮ್ಮ ಕ್ಲಾಸ್ಗೆ ಬನ್ನಿ ಮ್ಯಾಮ್ ಅನ್ನುತ್ತಿದ್ದವರು, ಬರುಬರುತ್ತಾ ತಮ್ಮ ಲೋಕದಲ್ಲಿ ಕಳೆದುಹೋಗುತ್ತಿದ್ದರು. ವಿಜ್ಞಾನ ಪಾಠಗಳ ಹೆಚ್ಚಳ, ಗಂಟೆಗಟ್ಟಲೆ ಇರುತ್ತಿದ್ದ ಪ್ರಯೋಗಾಲಯ, ಈ ಅರ್ಧವಾರ್ಷಿಕ ವ್ಯವಸ್ಥೆ(ಸೆಮಿಸ್ಟರ್ ಸಿಸ್ಟಂ)ಯ ಒತ್ತಡ ಇವೆಲ್ಲ ಸೇರಿ ಹೀಗಾಗುತ್ತಿತ್ತು ಅನ್ನಿಸುತ್ತೆ.
ಹಾಂ, ಇಲ್ಲೇ ನೋಡಿ ಅಲಂಕಾರ ಕನ್ನಡತಿ, ಅಭಿಮಾನಿ ಕನ್ನಡತಿಯರ ವಿಷಯ ಬರೋದು. ಇದನ್ನೇ ನಾನು ಇವತ್ತು ಮುಖ್ಯವಾಗಿ ಹೇಳಹೊರಟಿದ್ದು.
ವಿದ್ಯಾರ್ಥಿ ಸಂಘದ ಚುನಾವಣೆಯ ಭರಾಟೆ ಮುಗಿದು ಕಾಲೇಜಿನ ದೈನಿಕ ಚಟುವಟಿಕೆಗಳು ಪ್ರಾರಂಭವಾಗುವುದರ ಬಗ್ಗೆ ಹೇಳುತ್ತಿದ್ದೆನಲ್ಲ, ಬರುಬರುತ್ತಾ ಕನ್ನಡ ವಿಭಾಗಕ್ಕೂ ಮೂರನೇ ವರ್ಷದ ವಿದ್ಯಾರ್ಥಿನಿಯರಿಗೂ ಸಂಪರ್ಕ ಕಡಿಮೆಯಾಗುತ್ತಿತ್ತು. ಇದು ಎಷ್ಟು ಕಡಿಮೆಯಾಗುತ್ತಿತ್ತು, ಪರಿಸ್ಥಿತಿ ಎಂತಹ ಶೋಚನೀಯ ಮಟ್ಟಕ್ಕೆ ಇಳಿದಿರುತ್ತಿತ್ತು ಅನ್ನುವುದರ ನಿಜಸ್ವರೂಪ ನಮಗೆ ಗೊತ್ತಾಗುತ್ತಿದ್ದದ್ದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ! ಏಕೆಂದರೆ ತಾನು ಸಭೆಯಲ್ಲಿ ಮಾಡಬೇಕಾಗಿರುವ ವಂದನಾರ್ಪಣೆಯ ಭಾಷಣ ಬರೆಸಿಕೊಳ್ಳಲು ನಮ್ಮ ಕನ್ನಡತಿ ಓಡಿ ಕನ್ನಡ ವಿಭಾಗಕ್ಕೆ ಬರುತ್ತಿದ್ದಳು. ಸಮಾರಂಭ ಇನ್ನೊಂದು ದಿನವೋ, ಎರಡು ದಿನವೋ ಇದೆ ಅನ್ನುವಾಗಷ್ಟೇ ಬರುತ್ತಿದ್ದ ಅವಳ ಗಡಿಬಿಡಿ, ಧಾವಂತ ಹೇಳತೀರದು. ಸಭೆಯಲ್ಲಿ ಮಾತಾಡಬೇಕಾದ ಮಾತುಗಳನ್ನು ಔಪಚಾರಿಕ ಭಾಷೆಯಲ್ಲಿ ಬರೆಸುವುದು ಕನ್ನಡ ಅಧ್ಯಾಪಕರ ಕೆಲಸ. ಅದನ್ನು ಓದಮ್ಮ ಎಂದು ಹೇಳುವಾಗ ಅವಳು ಮಾಡುವ ತಪ್ಪುಗಳು … ಅಯ್ಯೋ …… ಅದನ್ನು ತಿದ್ದಿ, ತಿದ್ದಿ ಸಾಕಾಗುವ ಸಂದರ್ಭಗಳಿರುತ್ತಿದ್ದವು. ಅವಳು ಸಮಾರಂಭದ ದಿನ ಮುದ್ದುಗೊಂಬೆಯಂತೆ ಅಲಂಕಾರ ಮಾಡಿಕೊಂಡು ಬಂದು ಗಿಣಿಪಾಠ ಒಪ್ಪಿಸುವಂತೆ ವಂದನಾರ್ಪಣೆ ಓದಿಬಿಡುತ್ತಿದ್ದಳು. ಅವಳಿಗೆ ಭಾಷಣ ಬರೆಸಿದ ಅಧ್ಯಾಪಕರಿಗೆ ಏನು ತಪ್ಪು ಓದುತ್ತಾಳೋ ಅನ್ನುವ ಆತಂಕ ಇದ್ದೇ ಇರುತ್ತಿತ್ತು. ಅಂತೂ ಇಂತೂ ವಂದನಾರ್ಪಣೆ ಮುಗಿದು ಮುದ್ದುಗೊಂಬೆ ಕೆಳಗಿಳಿಯುತ್ತಿತ್ತು. ನಂತರ ಎಂದೂ ಸಹ ಈ `ಕನ್ನಡತಿಯು ಕನ್ನಡ ವಿಭಾಗದ ಕಡೆ ತಲೆ ಹಾಕುತ್ತಿರಲಿಲ್ಲ. ಅಮ್ಮಾ, ಅಲಂಕಾರ ಕನ್ನಡತಿಯೇ … ಒಮ್ಮೆ ಜೈ ನಿನಗೆ!
ಕಪ್ಪುಮೋಡಕ್ಕೆ ಬೆಳ್ಳಿಯಂಚು ಎಂಬಂತೆ ವಿಜ್ಞಾನ ಕಾಲೇಜುಗಳಲ್ಲಿ ಕೆಲವೊಮ್ಮೆ ಕನ್ನಡದಲ್ಲಿ ನಿಜಕ್ಕೂ ತುಂಬ ಆಸಕ್ತಿ, ಅಭಿಮಾನಗಳಿರುವ ವಿದ್ಯಾರ್ಥಿನಿಯರು ಸಿಗುತ್ತಾರೆ. ಇಂತಹವರು ತಮ್ಮ ಪದವಿ ಶಿಕ್ಷಣದುದ್ದಕ್ಕೂ ಕನ್ನಡ ವಿಭಾಗದ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ ಮತ್ತು ಕನ್ನಡದಲ್ಲಿ ಬರೆಯುವ, ಭಾಷಣಗಳನ್ನು ಮಾಡುವ ಅವಕಾಶಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಾರೆ. ತಾವು ಇಂಗ್ಲೀಷಿನಲ್ಲಿ ಕಲಿಯುವ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಬರೆಯುವ ಹುಮ್ಮಸ್ಸು ಕೂಡ ಇವರಲ್ಲಿ ಇರುತ್ತದೆ. ಅವರಲ್ಲಿ ಕೆಲವರು ಕನ್ನಡ ಎಂ.ಎ. ಮಾಡುವ ಅಥವಾ ಮಾಧ್ಯಮಗಳಲ್ಲಿ ಕೆಲಸ ಮಾಡುವ ಹಂತಕ್ಕೂ ಬೆಳೆಯುತ್ತಾರೆ, ಇಂತಹ ಅಭಿಮಾನಿ ಕನ್ನಡತಿಯರು ಕನ್ನಡ ಅಧ್ಯಾಪಕರ ನೆನಪುಗಳಲ್ಲಿ ಸದಾ ಹಸಿರಾಗಿರುತ್ತಾರೆ. ಇವರ ಸಂತತಿ ಸಾವಿರವಾಗಲಿ ಎಂದು ಕನ್ನಡ ಅಧ್ಯಾಪಕರ ಮನಸ್ಸು ಸದಾ ಹಾರೈಸುತ್ತದೆ.