ನಾವು ಕಾಲೇಜಿನಲ್ಲಿ ಹೊಸ ಶೈಕ್ಷಣಿಕ ವರ್ಷ ಅಥವಾ ಹೊಸ ಅರ್ಧವರ್ಷ(ಸೆಮೆಸ್ಟರ್) ಶುರುವಾದಾಗ ಮೊದಲ ದಿನ, ಮಕ್ಕಳಿಗೆ ಒಂದು ಹಾಜರಿ ಹಾಳೆ ಕೊಟ್ಟು, ಅದರಲ್ಲಿ ಅವರ ಹೆಸರು ಬರೆಯಲು ಹೇಳುವುದು ವಾಡಿಕೆ. ಏಕೆಂದರೆ ವಿದ್ಯಾರ್ಥಿಗಳ ಅಧಿಕೃತ ಪ್ರವೇಶಾತಿ ಮಾಹಿತಿಯು ಕಾಲೇಜಿನ ಕಛೇರಿಯಿಂದ ನಮಗೆ ಸಿಗಲು ಕೆಲವು ಸಲ, ಸ್ವಲ್ಪ ಸಮಯ ಹಿಡಿಯುತ್ತದೆ, ಕಾರಣವೇನು ಗೊತ್ತೇ? ಆ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿರುತ್ತದೆ. ಆದರೆ ತರಗತಿಗಳ ಹಾಜರಾತಿಗಾಗಿ ನಮಗೆ ವಿದ್ಯಾರ್ಥಿಗಳ ಹೆಸರುಗಳ ಪಟ್ಟಿ ಅಗತ್ಯವಾಗಿ ಬೇಕಾಗಿರುತ್ತದೆ. ಅದಕ್ಕಾಗಿ ಈ ಹಾಳೆ ಹೆಸರಿನ ವಿಧಾನ!

ಮೇಲೆ ವಿವರಿಸಿದ ಸನ್ನಿವೇಶದ ಹಿನ್ನೆಲೆಯಲ್ಲಿ ಒಂದು ತರಗತಿಯ ಮೊದಲ ದಿನ ಒಬ್ಬಳು ವಿದ್ಯಾರ್ಥಿನಿ ತನ್ನ ಹೆಸರನ್ನು `ಅಲ್ಲು ಆರ್ಥಿದೇವಿ ಮಹಿಮಾ ಎಂದು ಬರೆದಿದ್ದಳು. ಈ ಹೆಸರಿನ `ಆರ್ಥಿ ಪದ ನನ್ನನ್ನು ತಡೆದು ನಿಲ್ಲಿಸಿತು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಆರತಿ ಎಂದು ಹೆಸರಿಡುತ್ತಾರಲ್ಲವೇ? ನಿಘಂಟಿನ ಪ್ರಕಾರ ಆರತಿ ಒಂದು ನಾಮಪದ. ಇದಕ್ಕೆ ೧. ಅರಿಸಿನ, ಕುಂಕುಮ ಬೆರೆಸಿದ ನೀರು ಅಥವಾ ದೀಪಗಳಿಂದ ಎತ್ತುವ ನೀರಾಜನ, ೨. ಆರತಿಯನ್ನು ಮಾಡುವ ಉಪಕರಣ, ೩. ಆರತಿಯನ್ನು ಮಾಡುವಾಗ ಹಾಡುವ ಹಾಡು ಎಂಬ ಆರ್ಥಗಳಿವೆ. `ಆರತಿಗೊಬ್ಬಳು ಕೀರ್ತಿಗೊಬ್ಬ ಎಂಬ ಜನಪ್ರಿಯ ನಾಣ್ಣುಡಿಯನ್ನು ಮನೆಗೆರಡು ಮಕ್ಕಳಿರಬೇಕೆಂಬ ಆಶಯದ ಘೋಷಣೆಗಾಗಿ, ಕರ್ನಾಟಕ ಸರ್ಕಾರದ ಕುಟುಂಬ ಕಲ್ಯಾಣ ಇಲಾಖೆಯು ಚಾಲ್ತಿಗೆ ತಂದಿತ್ತು. ೧೯೭೦ರ ದಶಕದ ವರ್ಷಗಳಲ್ಲಿ ಪ್ರಖ್ಯಾತರಾಗಿದ್ದ ಕನ್ನಡ ಚಿತ್ರರಂಗದ ನಟಿಯೊಬ್ಬರ ಚಿತ್ರರಂಗದ ಹೆಸರು ಆರತಿ(ಅವರ ನಿಜವಾದ ಹೆಸರು ಭಾರತಿ, ಪುಟ್ಟಣ್ಣ ಕಣಗಾಲ್ ಅವರ ರಂಗನಾಯಕಿ ಸಿನಿಮಾಗಳಿಂದ ಈಕೆ ತುಂಬ ಪ್ರಸಿದ್ಧರಾದರು). ತನ್ನ ಹೆಸರನ್ನು `ಅಲ್ಲು ಆರ್ಥಿದೇವಿ ಮಹಿಮಾ ಎಂದು ಬರೆದ ಹುಡುಗಿ ನನ್ನಲ್ಲಿ ಇಷ್ಸೆಲ್ಲ ವಿಚಾರಗಳನ್ನು ಮೂಡಿಸಿದಳು. ಅವಳು ಯಾಕಾಗಿ ಹೀಗೆ ಬರೆದಿರಬಹುದು? ಅವಳ ಹೆಸರು ಅರ್ತಿ ಅಥವಾ ಅರ್ಥಿ ಇರಬಹುದೇ? ಅರ್ತಿ ಅಂದರೆ ಪ್ರೀತಿ. ಅರ್ಥಿ ಎಂದರೆ ಯಾಚಕ, ಬೇಡುವವನು ಎಂದು ಅರ್ಥವಿದೆ. ಹೀಗೆ ಹೆಸರಿಡುತ್ತಾರೆಯೇ? ಈ ಎಲ್ಲ ಅನುಮಾನಗಳನ್ನು ಪರಿಹಾರ ಮಾಡಿಕೊಳ್ಳಲು ಆ ಹುಡುಗಿಯನ್ನೇ ನಮ್ಮ ವಿಭಾಗಕ್ಕೆ ಕರೆಸಿದೆ. `ನೀನು ಯಾವ ಕಡೆಯವಳು? ನಿನ್ನ ಹೆಸರನ್ನು ಆರ್ಥಿ ಎಂದು ಯಾಕೆ ಬರೆಯೋದು? ಎಂದು ವಿಚಾರಿಸಿದೆ. ತಾನು ಮನೆಯಲ್ಲಿ ತೆಲುಗು ಮಾತಾಡುವುದೆಂದು ಆಕೆ ಹೇಳಿದಾಗ `ತೆಲುಗಿನಲ್ಲಿ ಈ ಪದ ಇದೆಯೇ? ಅಥವಾ ಇದು ಯಾವುದಾದರೂ ದೇವಿಯ ಹೆಸರೇ? ಎಂದು ಕೇಳಿದೆ. `ತನಗೆ ಗೊತ್ತಿಲ್ಲ, ತನ್ನ ತಂದೆ ತಾಯಿಯನ್ನು ವಿಚಾರಿಸಬೇಕು ಅಂದಳು. ಅವರ ತಂದೆಗೆ ಕರೆ ಮಾಡಲಾಗಿ ಅವರಿಗೂ ಈ ಬಗ್ಗೆ ಹೆಚ್ಚು ಗೊತ್ತಿದ್ದಂತೆ ತೋರಲಿಲ್ಲ. `ಆರತಿ ಎಂದೇ ಅವಳ ಹೆಸರು ಅಂದರು. ಅನುಮಾನ ಪರಿಹಾರವಾಗದೆ ತೆಲುಗು ಮನೆಮಾತಿನ ನನ್ನ ಸಹೋದ್ಯೋಗಿಗಳನ್ನು `ಆರ್ಥಿ ಎಂಬ ಪದ ತೆಲುಗಿನಲ್ಲಿದೆಯೇ ಎಂದು ವಿಚಾರಿಸಿದೆ. ಅವರು ಇಲ್ಲ ಆರತಿ ಎಂಬ ಪದವೇ ತೆಲುಗಿನಲ್ಲೂ ಇರುವುದು ಅಂದರು.

ಕೊನೆಗೆ ಆ ಹುಡುಗಿಯನ್ನು `ಹೇಳಮ್ಮಾ ಹೀಗೆ ನೀನು ಬರೆದಿದ್ದು ಯಾಕೆ? ಯೋಚನೆ ಮಾಡಿ ಹೇಳು ಎಂದು ಕೇಳಿದೆ. ತುಸು ಯೋಚಿಸಿ `ಇಂಗ್ಲಿಷ್‌ನಲ್ಲಿ’ Arathi ಎಂದು ಬರೆಯುವುದರಿಂದ ಟಿಎಚ್‌ಐ ಯನ್ನು ತಾನು ಥಿ ಎಂದು ಬರೆಯುವುದಾಗಿ ಹೇಳಿದಳು! ಅಯ್ಯೋ ….. ಕನ್ನಡದ ಹೆಸರನ್ನು ಇಂಗ್ಲೀಷಿಗೆ ಬರೆದು ಅಲ್ಲಿಂದ ಮರಳಿ ಕನ್ನಡಕ್ಕೆ ಲಿಪ್ಯಂತರ ಮಾಡಿದ್ದಳು! `ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು ಅನ್ನುತ್ತಾರಲ್ಲವೇ ಹಾಗೆ. `ನೀನು ಬರೆದದ್ದು ಸರಿಯಾಗಿಲ್ಲಮ್ಮ, ಹೀಗೆ ಬರೆಯಬೇಕು ಎಂದು ನಾನು ತೋರಿಸಿಕೊಟ್ಟಾಗ, ತಾನು ಬರೆದಿದ್ದು ಸರಿಯಾಗಿಯೇ ಇದೆ ಎಂದುಕೊಂಡು ಮುಗ್ಧವಾಗಿ ಹಠ ಮಾಡುತ್ತಿದ್ದ ಆ ಸುಂದರ ಮುಖದ ಮಗುವನ್ನು ನೋಡಿ ಅಯ್ಯೋ ಅನ್ನಿಸಿತು. ಅವಳ ಹೆಸರನ್ನು ಕನ್ನಡದಲ್ಲಿ ಆರತಿ ಎಂದೇ ಎಂದು ಯಾಕೆ ಬರೆಯಬೇಕು ಎಂದು ಶಬ್ದಕೋಶ ತೋರಿಸಿ ಹೇಳಿಕೊಟ್ಟೆ. ಆಗ `ಸರಿ ಮೇಡಂ, ಇನ್ನು ಮುಂದೆ ತಿದ್ದಿಕೊಳ್ಳುತ್ತೇನೆ ಎಂದಳು.

ಹೀಗೆ ತರಗತಿಯಲ್ಲಿ ಮೊದಲ ದಿನ ಹೆಸರು ಬರೆಸುವಾಗಲೇ ಕೆಲವು ಸಲ ನಮಗೆ ನಮ್ಮ ವಿದ್ಯಾರ್ಥಿನಿಯರ ಕನ್ನಡ ಲಿಪಿಯ ಜ್ಞಾನದ (ಅಥವಾ ಅಜ್ಞಾನದ?!) ಮಟ್ಟ ಗೊತ್ತಾಗುತ್ತದೆ!