ಪದವಿ ತರಗತಿಗಳಲ್ಲಿ ಕನ್ನಡ ಪಾಠ ಮಾಡುವಾಗ ಅಧ್ಯಾಪಕರಿಗೆ ಎದುರಾಗುವ ಅನುಭವಗಳಲ್ಲಿ ಕೆಲವು ಏಕಕಾಕ್ಕೆ ಶೋಚನೀಯವಾಗಿಯೂ, ತಮಾಷೆಯಾಗಿಯೂ ಇರುತ್ತವೆ. ಇಂತಹ ಒಂದು ಅನುಭವ ಇಲ್ಲಿದೆ.

ಎಲ್ಲ ಅಧ್ಯಾಪಕರಂತೆ ನನಗೂ ಸಹ ವಿದ್ಯಾರ್ಥಿಗಳು ತರಗತಿಗೆ ತಡವಾಗಿ ಬಂದಾಗ ತುಂಬ ಇರುಸುಮುರುಸಾಗುತ್ತದೆ. ತಡವಾಗಿ ಬರುವ ಮಕ್ಕಳಿಗೆ ಅವರು ಸಮಯ ಪ್ರಜ್ಞೆ ಕಲಿಯಲಿ ಎಂಬ ಉದ್ದೇಶದಿಂದ ನಾನು, ಅವರು ಎಷ್ಟು ನಿಮಿಷ ತಡ ಮಾಡಿದರೋ ಅಷ್ಟು ಗಾದೆಮಾತು ಅಥವಾ ಹೊಸ ಪದ ಮತ್ತು ಅದರ ಅರ್ಥ ಬರೆಯಬೇಕು ಎಂಬ ನಿಯಮವನ್ನು ಇರಿಸಿರುತ್ತೇನೆ. ಹೀಗಾಗಿ ನನ್ನ ತರಗತಿಗಳಿಗೆ ತಡವಾಗಿ ಬರುವವರ ಸಂಖ್ಯೆ ಸ್ಪಲ್ಪ ಕಡಿಮೆಯಾಗುತ್ತಿದೆ ಎಂದು ಹೇಳಬಹುದು. ಆದರೂ ಈ ಸಮಸ್ಯೆ ಸಂಪೂರ್ಣ ಪರಿಹಾರವಾಗಿದೆ ಎಂದು ಹೇಳುವಂತಿಲ್ಲ. ವಿವಿಧ ಕಾರಣಗಳಿಗಾಗಿ ತಡವಾಗಿ ಬರುವ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ.

ಒಮ್ಮೆ ಮೊದಲನೆ ವರ್ಷದ ಬಿ.ಎಸ್ಸಿ. ತರಗತಿಯೊಂದಕ್ಕೆ ಇಬ್ಬರು ವಿದ್ಯಾರ್ಥಿನಿಯರು ಇಪ್ಪತ್ತು ನಿಮಿಷ ತಡವಾಗಿ ಬಂದರು! ನನಗೆ ಕಿರಿಕಿರಿ ಅನ್ನಿಸಿ ತಡವಾಗಿ ಬಂದದ್ದರ ಕಾರಣ ಕೇಳಿದೆ. `ತರಗತಿ ಕೊಠಡಿ ಬದಲಾದದ್ದು ಗೊತ್ತಾಗಲಿಲ್ಲ, ಹುಡುಕಿದೆವು, ಜೊತೆಗೆ ಕಾಲೇಜು ಕಛೇರಿಗೆ ಏನೋ ಕೊಡುವುದಿತ್ತು ಎಂದು ಕಾರಣ ಹೇಳಿದವು ಆ ಮಕ್ಕಳು. “ಸರಿ, ಇಪ್ಪತ್ತು ಗಾದೆ ಮಾತು ಬರೆಯಬೇಕು ಎಂಬ ಷರತ್ತಿನೊಂದಿಗೆ ಅವರನ್ನು ತರಗತಿಯೊಳಗೆ ಬಿಟ್ಟೆ. ಒಳಗೆ ಬಂದು ಹಿಂದಿನ ಸಾಲಿನಲ್ಲಿ ಕೂತವರು ಕನ್ನಡ ಪಠ್ಯಪುಸ್ತಕ, ಟಿಪ್ಪಣಿ ಪುಸ್ತಕ ಏನೂ ಹೊರತೆಗೆಯದೆ ಸುಮ್ಮನೆ ಕುಳಿತುಕೊಂಡಿದ್ದರು. ನನಗೆ ಅಸಮಾಧಾನವಾಗಿ `ಏನಮ್ಮ, ಎಲ್ಲಿ ನಿಮ್ಮ ಪಠ್ಯಪುಸ್ತಕ? ಅಂತ ಕೇಳಿದೆ. ಅವರಲ್ಲಿ ಒಬ್ಬಳು ತೀರಾ ಗಾಬರಿ ಬಿದ್ದು ತನ್ನ ಪಕ್ಕದವಳನ್ನು ಕೇಳಿದಳು “ಏ … ಶ್‌ಶ್ ……….. ಪಠ್ಯಪುಸ್ತಕ ಅಂದ್ರೆ ಏನೇ?! ಅವಳು ತುಂಬ ಮೆಲುದನಿಯಲ್ಲಿ ಕೇಳಿದ್ದಳಾದರೂ ತರಗತಿಯಲ್ಲಿ ಮೌನವಿದ್ದುದರಿಂದ ನನಗೆ ಅವಳ ಮಾತು ಕೇಳಿಸಿತು. ಬೇರೆ ಕೆಲವು ಮಕ್ಕಳಿಗೂ ಕೇಳಿಸಿರಬೇಕು, ಅವುಗಳಲ್ಲಿ ಕೆಲವು ಕುಲುಕುಲು ನಕ್ಕವು, ಇನ್ನು ಕೆಲವು “ಟೆಕ್ಸ್ಟ್ ಬುಕ್ಕು ಕಣೇ. ಪಠ್ಯಪುಸ್ತಕ ಅಂದ್ರೆ ಅದೇ ಎಂದು ವಿವರಣೆಯನ್ನು ತಮ್ಮತಮ್ಮೊಳಗೆ ಕೊಟ್ಟುಕೊಂಡವು. ನನಗೋ ನಗಬೇಕೋ, ಸಿಟ್ಟು ಮಾಡಿಕೊಳ್ಳಬೇಕೋ ತಿಳಿಯಲಿಲ್ಲ. ಮನೆಯಲ್ಲಿ ನಾನು ಈ ಅನುಭವವನ್ನು ಹಂಚಿಕೊಂಡಾಗ ನನ್ನ ಚಿಕ್ಕ ಮಗಳು `ಅಮ್ಮ, ನೀನು ಪೂರ್ತಿ ಕನ್ನಡದಲ್ಲಿ ಮಾತಾಡಿದ್ರೆ ಹಾಗೇ ಅಗೋದು ಅಂದಳು!!

ಅಯ್ಯೋ ……. !