`ಕನ್ನಡದ ಡಿಜಿಟಲ್ ನವೋದಯ’ ಎಂಬ ಪದಗುಚ್ಛವೇ ರೋಮಾಂಚ ಹುಟ್ಟಿಸುವಂಥದ್ದು. ಕನ್ನಡವನ್ನು ಪ್ರೀತಿಸುವ ಯಾರೇ ಆದರೂ ಅದು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಮತ್ತು ನವೀಕರಣಗೊಳ್ಳಬೇಕು ಎಂದು ಒಪ್ಪುತ್ತಾರೆ. ಎಲ್ಲ ಜೀವಂತ ಭಾಷೆಗಳಂತೆ ಕನ್ನಡವೂ ಕಾಲದ ಕರೆಗೆ ಓಗೊಟ್ಟು ಬದಲಾಗುತ್ತಾ, ಹೊಸದಾಗುತ್ತಾ ಬಂದಿದೆ. ಮಾಹಿತಿ ತಂತ್ರಜ್ಞಾನ ಯುಗದ ಅಂತರ್ಜಾಲ ಪ್ರಪಂಚದಲ್ಲಿ ಕನ್ನಡ ಪಡೆದಿರುವ ಹೊಸ ರೂಪ ಅಂದರೆ ಅದು ಡಿಜಿಟಲ್ ರೂಪ.

ಕನ್ನಡದ ಡಿಜಿಟಲ್ ನವೋದಯ ಎಂದರೆ ಏನು? ಮಾಹಿತಿ ತಂತ್ರಜ್ಞಾನದ ಸಲಕರಣೆಗಳು ಮತ್ತು ಅಂತರ್ಜಾಲ ಮುಖೇನ ನಡೆಯುವ ಸಂವಹನದಲ್ಲಿ ಕನ್ನಡದ ಉಪಸ್ಥಿತಿಯೇ ಡಿಜಿಟಲ್ ನವೋದಯ. ಅಂದರೆ ಇದು `ಸಾಫ್ಟ್ವೇರ್’ ಪ್ರಪಂಚದಲ್ಲಿ ಕನ್ನಡದ ಅರ್ಥಪೂರ್ಣ ಇರವನ್ನು ಸೂಚಿಸುತ್ತದೆ. ಜಾಲತಾಣಗಳು, ಗೂಗಲ್ ಮುಂತಾದ ಹುಡುಕುಯಂತ್ರಗಳು, ಜಾಲಪುಟಗಳು, ಗಣಕ ಯಂತ್ರ, ಕಿಂಡಲ್ ಹಾಗೂ ಸಂಚಾರಿ ದೂರವಾಣಿಗಳಲ್ಲಿ ಕನ್ನಡ ಲಿಪಿಯ ಬಳಕೆ, ಬಹುಮಾಧ್ಯಮ ಮಂಡನೆಯಲ್ಲಿ ಕನ್ನಡ ಬಳಕೆ, ಕನ್ನಡದ ಇ-ಪತ್ರಿಕೆಗಳು, ಜೊತೆಗೆ ಕನ್ನಡದ ಗ್ರಂಥಗಳು ಅಂತರ್ಜಾಲದಲ್ಲಿ ಲಭ್ಯವಾಗುವುದು ಇವೆಲ್ಲವೂ ಡಿಜಿಟಲ್ ನವೋದಯದಲ್ಲಿ ಸೇರುತ್ತವೆ(ನವೋದಯ ಅಂದರೆ ಹೊಸ ಉದಯ ಎಂದು ಅರ್ಥ. ಇಂಗ್ಲೀಷಿನ ರಿನೈಸಾನ್ಸ್ ಪದಕ್ಕೆ ಸಂವಾದಿಯಾಗಿ ಕಲವೊಮ್ಮೆ ಈ ಪದವನ್ನು ಬಳಸುತ್ತಾರೆ. ಬಿ.ಎಂ.ಶ್ರೀ, ಪಂಜೆ ಮಂಗೇಶರಾಯರು, ಗೋವಿಂದ ಪೈಗಳು ಮುಂತಾದವರಿಂದ ೧೯ನೇ ಶತಮಾನದ ಕೊನೆ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಹಳಗನ್ನಡದಿಂದ ಹೊಸಗನ್ನಡಕ್ಕೆ ಉಂಟಾದ ಒಂದು ಮಹಾ ಬದಲಾವಣೆಯನ್ನು ಸಾಮಾನ್ಯವಾಗಿ ನವೋದಯ ಎನ್ನುತ್ತಾರೆ. ಇಂದಿನ ಯಂತ್ರಯುಗದ್ದು ಗಣಕಯಂತ್ರದಲ್ಲಿ ಅಂಕಸಂಕೇತಗಳನ್ನು ಬಳಸುವ ಡಿಜಿಟಲ್ ನವೋದಯ).

ಇನ್ನೊಂದು ಮುಖ್ಯ ವಿಷಯವೆಂದರೆ ಅಂತರ್ಜಾಲದ ಮೂಲಕವೇ ಓದು ಬಳಗಗಳು, ಇ-ಸಮುದಾಯಗಳು ರೂಪುಗೊಳ್ಳುತ್ತಿದ್ದು ದೇಶ-ಕಾಲ, ದೂರ, ವಾಹನ ದಟ್ಟಣೆಗಳ ಮಿತಿಗಳನ್ನು ಮೀರಿ ವ್ಯಕ್ತಿಗಳ ಜ್ಞಾನಸಂಪರ್ಕಕ್ಕೆ ಕಾರಣವಾಗುತ್ತಿರುವುದು ಗಮನೀಯ ಹಾಗೂ ಸ್ವಾಗತಾರ್ಹ ವಿಷಯ.

ಕನ್ನಡ ನಾಡಿನ ನಮ್ಮ ಮಕ್ಕಳು ಮತ್ತು ಯುವಕ-ಯುವತಿಯರಲ್ಲಿ ಡಿಜಿಟಲ್ ಕನ್ನಡದ ಬಳಕೆಯು ಹೆಚ್ಚಾಗುತ್ತಾ ಹೋದಂತೆ ಕನ್ನಡ ಇಂದೀಕರಣಗೊಳ್ಳುತ್ತದೆ(ಅಪ್‌ಡೇಟ್ ಅನ್ನುತ್ತಾರಲ್ಲ ಅದು). ನಮ್ಮ ಮಹಾರಾಣಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರನ್ನು `ತಾವು ಸಂಚಾರಿ ದೂರವಾಣಿ ಬಳಸುವಾಗ ಕನ್ನಡ ಬಳಸುತ್ತಾರಾ’ ಎಂದು ವಿಚಾರಿಸಿದೆ. ಸಿಕ್ಕಿದ ಉತ್ತರ ತುಂಬ ಸ್ವಾರಸ್ಯಕರವಾಗಿತ್ತು. ತಮ್ಮಲ್ಲಿ ಬಹಳಷ್ಟು ಜನ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರೆಯುತ್ತೇವೆ, ಉದಾಹರಣೆಗೆ, “naanu ivaththu kaalejige bandilla, husharilla adke’’(ನಾನು ಇವತ್ತು ಕಾಲೇಜಿಗೆ ಬಂದಿಲ್ಲ, ಹುಷಾರಿಲ್ಲ ಅದ್ಕೆ). ಇನ್ನು ನಮ್ಮಲ್ಲಿ ಹತ್ತರಿಂದ ಹದಿನೈದು ಶೇಕಡ ಜನ ಕನ್ನಡದಲ್ಲೇ ಬರೆಯುತ್ತಾರೆ ಅಂದರು. ಅಂತೂ ಕನ್ನಡದ ಡಿಜಿಟಲ್ ನವೋದಯ ಒಂದು ರೀತಿಯಲ್ಲಂತೂ ಪ್ರಾರಂಭ ಆಗಿದೆ ಅನ್ನಿಸಿತು. ಭಾಷೆ ಕನ್ನಡ, ಲಿಪಿ ಇಂಗ್ಲಿಷ್! ಇದು ಒಂದು ಸಂಚಲನವOತೂ ಹೌದು. ಬಾಳಲಿ ಕನ್ನಡ, ಬೆಳೆಯಲಿ ಕನ್ನಡ, ಡಿಜಿಟಲ್ ಪ್ರಪಂಚದಲ್ಲಿ ದಾಂಗುಡಿಯಿಡಲಿ ಕನ್ನಡ.