ಯಾವುದೇ ಹಂತದ ಕನ್ನಡ ಭಾಷಾ ತರಗತಿಗಳಲ್ಲಾದರೂ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳು ಅಕ್ಷರಗಳು, ಪದಗಳು, ವಾಕ್ಯಗಳನ್ನು ಸರಿಯಾಗಿ ಉಚ್ಚರಿಸಬೇಕು ಎಂಬ ನಿರೀಕೆ ಹೊಂದಿರುತ್ತಾರೆ, ಹೀಗಾಗಿ ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದುತ್ತಿರುತ್ತಾರೆ. ನಾನು ಕೂಡ ಇದಕ್ಕೆ ಹೊರತಲ್ಲ. ನಾನು ತೆಗೆದುಕೊಳ್ಳುವ ಪದವಿ ಹಂತದ ತರಗತಿಗಳಲ್ಲಿ ವಿದ್ಯಾರ್ಥಿನಿಯರನ್ನು ಆಗಾಗ ತಮ್ಮ ಸಹಪಾಠಿಗಳ ಎದುರಿಗೆ ಗಟ್ಟಯಾಗಿ ಓದಲು ಹೇಳುತ್ತಿರುತ್ತೇನೆ, ಮತ್ತು ಅವರು ಮಾಡುವ ಅಕಾರ-ಹಕಾರ, ಸಕಾರ-ಶಕಾರ, ಒತ್ತಕ್ಷರ, ದೀರ್ಘಾಕ್ಷರ ದೋಷ, ಲೇಖನ ಚಿಹ್ನೆಗಳನ್ನು ಬಳಸದೆ ಓದುವುದು ಇಂತಹ ತಪ್ಪುಗಳನ್ನು ತಿದ್ದುತ್ತಿರುತ್ತೇನೆ. ಗಮನೀಯ ವಿಷಯವೆಂದರೆ ಹಲವು ವಿದ್ಯಾರ್ಥಿಗಳು ಬರಹಕ್ಕಿಂತ ಉಚ್ಚಾರದಲ್ಲಿ ಹೆಚ್ಚು ತಪ್ಪು ಮಾಡುತ್ತಾರೆ!
ಒಬ್ಬ ವಿದ್ಯಾರ್ಥಿನಿ ನೆನಪಾಗುತ್ತಾಳೆ, ಮೊದಲನೇ ವರ್ಷದ ಬಿ.ಎಸ್ಸಿ. ತರಗತಿಯ ಯಮುನ. ಅವಳು ಕಲಿಯುವ ವಿಷಯದಲ್ಲಿ ಅಮಿತ ಉತ್ಸಾಹ ಹೊಂದಿದ್ದವಳು. ಅರಳುಗಣ್ಣು ಬಿಟ್ಟುಕೊಂಡು, ಮೈಯೆಲ್ಲಾ ಕಿವಿಯಾಗಿ ಪಾಠ ಕೇಳುವ ಆ ನಗೆಮೊಗದ ಮೃದು ನಡವಳಿಕೆಯ ವಿದ್ಯಾರ್ಥಿನಿಯನ್ನು ನೋಡುವುದೇ ನನಗೊಂದು ಖುಷಿಯ ವಿಷಯವಾಗಿತ್ತು. ತರಗತಿಯಲ್ಲಿ ಯಾವ ಪ್ರಶ್ನೆ ಕೇಳಿದರೂ, ಯಾವ ಕೆಲಸ ಹೇಳಿದರೂ ಮೊದಲು ಕೈ ಎತ್ತುತ್ತಿದ್ದ ಹುಡುಗಿ ಅವಳು. ಇಂತಹ ಯಮುನಳನ್ನು ಒಂದು ದಿನ (ಅವಳು ಹೊಸದಾಗಿ ಬಿ.ಎಸ್ಸಿ ಓದಲು ಪ್ರಾರಂಭಿಸಿದ್ದಾಗ) ನಾನು ತರಗತಿಯೆದುರಲ್ಲಿ ಓದಲು ಕರೆದೆ. ಓದಲು ಪ್ರಾರಂಭಿಸಿದ ಯಮುನ ಖುಷಿಯಿಂದ ಓದುತ್ತಿದ್ದಳಾದರೂ ನ-ಣ, ಲ-ಳ ಕಾರಗಳಲ್ಲಿ ತುಂಬ ತಪ್ಪು ಮಾಡುತ್ತಿದ್ದುದನ್ನು ನಾನು ಗಮನಿಸಿದೆ.
ಇದರ ಕಾರಣದ ಬಗ್ಗೆ ಯೋಚಿಸುತ್ತಾ ನಾನು ಅವಳನ್ನು ಪ್ರತ್ಯೇಕವಾಗಿ ಕರೆದು ಕೆಲವು ಪ್ರಶ್ನೆಗಳನ್ನು ಕೇಳಿದಾಗ ಅವಳ ಮನೆಮಾತು ತಮಿಳು ಎಂದು ಗೊತ್ತಾಯಿತು. `ನಾನು ಉಚ್ಚಾರ ತಿದ್ದಿಕೊಳ್ಳಕ್ಕೆ ಕೆಲವು ವಿಧಾನಗಳನ್ನ ಹೇಳಿಕೊಡ್ತೀನಿ, ಕಲೀತೀಯಾಮ್ಮ ಯಮುನ?’ ಎಂದು ಕೇಳಿದೆ. “ಖಂಡಿತ ಕಲೀತೀನಿ ಮ್ಯಾಮ್’’ ಎಂದು ತನ್ನ ಎಂದಿನ ಉತ್ಸಾಹದಿಂದ ಹೇಳಿತು ಆ ಮಗು(ಮನೆಯಲ್ಲಿ ತುಂಬ ಕಷ್ಟ, ಬಡತನ, ಕಾಯಿಲೆ-ಕಸಾಲೆಗಳಿಂದ ನೊಂದಿದ್ದ ಮಗು ಅವಳು ಎಂಬುದನ್ನು ನೆನೆದಾಗ ಅವಳ ಉತ್ಸಾಹದ ಬಗ್ಗೆ ಇನ್ನಷ್ಟು ಅಭಿಮಾನವುಂಟಾಯಿತು ನನಗೆ).
ಸರಿ. ಕನ್ನಡ ರತ್ನಕೋಶವನ್ನು ತೆಗೆದುಕೊಂಡು ನಮ್ಮ ವಿಭಾಗಕ್ಕೆ ಬರುವಂತೆ ಯಮುನಳಿಗೆ ಹೇಳಿದೆ. ಪಾಪ, ಅಣತಿಯನ್ನು ಶಿರಸಾವಹಿಸಿ ಎಂಬಂತೆ ಮಾರನೆಯ ದಿನವೇ ಬಂದಳವಳು. ಅವಳನ್ನು ಕೂರಿಸಿಕೊಂಡು ರತ್ನಕೋಶದಲ್ಲಿ ನ,ಣ,ಲ,ಳ ಅಕ್ಷರಗಳು ಇರುವ ಪದಗಳನ್ನು ತೋರಿಸಿ ಅವುಗಳ ಸರಿಯಾದ ಉಚ್ಚಾರ ಹೇಳಿಕೊಟ್ಟೆ. ನಿಧಾನವಾಗಿ ಮತ್ತೆ ಮತ್ತೆ ಉಚ್ಚಾರ ಮಾಢುವಂತೆ ಮಾಡಿ, ಇಂತಹ ಒಂದೊಂದು ಅಕ್ಷರ ಉಚ್ಚಾರ ಮಾಡುವಾಗಲೂ ಬಾಯಿಯಲ್ಲಿ ನಾಲಗೆಯ ಸ್ಥಾನ ಎಲ್ಲಿರುತ್ತದೆ ಎಂದು ತಿಳಿಸಿಕೊಟ್ಟೆ. `ದಿನಾಲೂ ಹತ್ತು ಹತ್ತು ಪದಗಳನ್ನು ಉಚ್ಚರಿಸಬೇಕು, ಇಪ್ಪತ್ತೊಂದು ದಿನ ಬಿಡದೆ, ನಿಯಮಿತವಾಗಿ ಈ ಕೆಲಸ ಮಾಡಬೇಕು (ಹೊಸ ಅಭ್ಯಾಸವೊಂದನ್ನು ಮಾಡಿಕೊಳ್ಳಲು ಇಪ್ಪತ್ತೊಂದು ದಿನ ಬೇಕು ಎಂದು ಮನಃಶಾಸ್ತ್ರ ಹೇಳುತ್ತದೆ), ಮತ್ತು ಕನ್ನಡಿಯ ಮುಂದೆ ಈ ಪದಗಳನ್ನು ಉಚ್ಚರಿಸಿ ಅಭ್ಯಾಸ ಮಾಡಬೇಕು’ ಎಂದು ಹೇಳಿದೆ. “ಆಯಿತು, ಮಾಡ್ತೀನಿ ಮ್ಯಾಮ್’’ ಎಂದು ವಿಧೇಯವಾಗಿ ತಲೆಯಲ್ಲಾಡಿಸಿದಳು ನನ್ನ ವಿದ್ಯಾರ್ಥಿನಿ.
ಹೀಗೆ ವಿದ್ಯಾರ್ಥಿಗಳನ್ನು ವಿಭಾಗಕ್ಕೆ ಕರೆಸಿ ಒಂದಷ್ಟು ಕಲಿಕಾ ಸೂಚನೆಗಳನ್ನು ಕೊಡುವುದು ನಾವು ಅಧ್ಯಾಪಕರು ನಿಯಮಿತವಾಗಿ ಮಾಡುವ ಕೆಲಸವಾದದ್ದರಿಂದ, ನಾನು ಇದನ್ನು ತೀರಾ ವಿಶೇಷ ಘಟನೆಯೆಂದೇನೂ ಭಾವಿಸಿರಲಿಲ್ಲ. ಇದರ ಜೊತೆಗೆ ಬೇರೆ ಬೇರೆ ಕೆಲಸಗಳ ಒತ್ತಡ, ಯಮುನಳ ತರಗತಿಯಲ್ಲಿ ಬೇರೆ ಕೆಲವು ವಿದ್ಯಾರ್ಥಿನಿಯರನ್ನು ನಾನು ಎದುರಿಗೆ ಕರೆದು ಓದಿಸುತ್ತಿದ್ದದ್ದು (ಎಲ್ಲರಿಗೂ ಅವಕಾಶವಾಗಲಿ ಎಂಬ ಉದ್ದೇಶದಿಂದ), ತನ್ನ ಮನೆಯ ಕೆಲವು ತೊಂದರೆಗಳಿಂದ ಯಮುನ ಕಾಲೇಜಿಗೆ ಕೆಲವು ದಿನ ಗೈರುಹಾಜರಾಗಿದ್ದು, ಚುನಾವಣಾ ಕೆಲಸಕ್ಕೆ ನಾನು ನಿಯೋಜಿತಳಾಗಿ ಹೋಗಿದ್ದು, ಪರೀಕ್ಷೆಗಳು, ಮೌಲ್ಯಮಾಪನ ರಜೆ ಮುಂತಾದ ಹಲವು ಹದಿನೆಂಟು ಕಾರಣಗಳಿಂದಾಗಿ ನಾನು ಯಮುನಳನ್ನು ತರಗತಿಯೆದುರಿಗೆ ನಿಲ್ಲಿಸಿ ಓದಿಸಿರಲಿಲ್ಲ. ಆದರೆ ಈಚೆಗೆ ಒಂದು ದಿನ ಅವಳನ್ನು ಓದಿಸಿದೆ. ತನ್ನ ತರಗತಿಗೆ ಪಠ್ಯವಾಗಿದ್ದ, ಡಾ.ಶಿವರಾಮ ಕಾರಂತರು ಬರೆದಿದ್ದ, ಶಿಕ್ಷಣ ವಿಷಯ ಸಂಬಂಧಿತ ಗಂಭೀರ ಪ್ರಬಂಧವೊಂದನ್ನು ಯಮುನಾ ಓದಿದಳು. ಅಬ್ಬಾ!! ಎಷ್ಟು ಚೆನ್ನಾಗಿ ಓದಿದಳೆಂದರೆ ಒಂದೇ ಒಂದು ಉಚ್ಚಾರದೋಷವನ್ನು ಸಹ ಮಾಡಲಿಲ್ಲ ಅವಳು! ನನಗೆ ತೀರಾ ಸಂತೋಷವಾಯಿತು. ಅವಳು ಓದಿದ ರೀತಿಯನ್ನು ಪ್ರಶಂಸಿಸಿ “ಇದು ಹೇಗೆ ಸಾಧ್ಯವಾಯಿತು ಯಮುನ?’’ ಅಂದೆ. “ಮ್ಯಾಮ್, ನೀವು ಹೇಳಿದ ಹಾಗೇ ಮಾಡ್ದೆ. ದಿನಾ ರತ್ನಕೋಶ ಇಟ್ಕೊಂಡು ಕನ್ನಡಿ ಮುಂದೆ ಗಟ್ಟಿಯಾಗಿ ಉಚ್ಚರಿಸ್ತಿದ್ದೆ, ನನ್ನ ತಂಗಿಯ ಮುಂದೆ ಕೂಡ ಉಚ್ಚರಿಸ್ತಿದ್ದೆ, ಹೀಗೇ ಮಾಡಿ ಮಾಡಿ ತಿದ್ದಿಕೊಂಡೆ ಮ್ಯಾಮ್’’ ಅಂದಳು. ನನಗೆ ಅವಳ ಶ್ರದ್ಧೆ ಮತ್ತು ಕಲಿಯುವ ಉತ್ಸಾಹಗಳನ್ನು ನೋಡಿ ಕಣ್ಣಲ್ಲಿ ನೀರು ಬರುವಷ್ಟು ಸಂತೋಷವಾಯಿತು. ಈಗಲೂ ನೆನೆದರೆ ಕಣ್ಣು ಒದ್ದೆಯಾಗುತ್ತದೆ. `ವಿದ್ಯಾರ್ಥಿಗಳು ಚೆನ್ನಾಗಿ ಕಲಿತರಲ್ಲ’ ಎಂಬ ಭಾವಕ್ಕಿಂತ ದೊಡ್ಡ ಸಂತೋಷ ಅಧ್ಯಾಪಕರಿಗೆ ಇನ್ನೇನಿದೆ! … `ಇದ್ದರೆ ನಿನ್ನಂತಹ ವಿದ್ಯಾರ್ಥಿಗಳಿರಬೇಕಮ್ಮ ಯಮುನ’ ಎಂದಿತು ನನ್ನ ಅಧ್ಯಾಪಕ ಮನಸ್ಸು.