ನಾವು ಕನ್ನಡ ಅಧ್ಯಾಪಕರು ತರಗತಿಗಳಲ್ಲಿ ಕೆಲವೊಮ್ಮೆ ಅನೂಹ್ಯವಾದ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತೇವೆ. ಈಗ ನಾನು ವಿವರಿಸಲಿರುವುದು ಅಂತಹ ಒಂದು ಸನ್ನಿವೇಶ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ ೮ರ ಸಂದರ್ಭದಲ್ಲಿ ಇದನ್ನು ಹಂಚಿಕೊಳ್ಳುವುದು ಸೂಕ್ತ ಅನ್ನಿಸಿತು.
ಒಂದು ದಿನ ಮಹಾರಾಣಿ ಕಾಲೇಜಿನಲ್ಲಿ ಎರಡನೆಯ ಬಿ.ಎಸ್ಸಿ. ವಿದ್ಯಾರ್ಥಿನಿಯರಿಗೆ ನಾನು ಮಹಿಳಾ ವಿಷಯದ ವಸ್ತುವಿದ್ದ ಪ್ರಬಂಧವೊಂದನ್ನು ಪಾಠ ಮಾಡುತ್ತಿದ್ದಾಗ, ಪುರುಷಪ್ರಧಾನ ವ್ಯವಸ್ಥೆಗಳಲ್ಲಿನ ಲಿಂಗಭೇದವನ್ನು ಕುರಿತು ಕೆಲವು ವಿಷಯಗಳನ್ನು ವಿವರಿಸುತ್ತಿದ್ದೆ. ಅದರ ಭಾಗವಾಗಿ, ತರಗತಿಯ ಕೊನೆಯಲ್ಲಿ ವಿದ್ಯಾರ್ಥಿನಿಯರನ್ನು ತಾವು ತಮ್ಮ ಜೀವನದಲ್ಲಿ ಸ್ವತಃ ಅನುಭವಿಸಿದ ಅಥವಾ ತಾವು ಸಾಕ್ಷಿಯಾಗಿದ್ದ ಲಿಂಗಭೇದದ ಸಂದರ್ಭವೊಂದನ್ನು ನೆನಪಿಸಿಕೊಂಡು ವಿವರಿಸುವಂತೆ ಹೇಳಿದೆ. (ಪಾಠವನ್ನು ಜೀವನಕ್ಕೆ ಮತ್ತು ಜೀವನವನ್ನು ಪಾಠಕ್ಕೆ ಅನ್ವಯಿಸುವ ಬೌದ್ಧಿಕ ಅಭ್ಯಾಸವು ಮಕ್ಕಳಿಗೆ ಆಗಲಿ ಮತ್ತು ಅವರು ತಮ್ಮೊಳಗಿನ ಭಾವಗಳನ್ನು ಕನ್ನಡ ಭಾಷೆಯಿಂದ ಮುಟ್ಟಲು ಸಮರ್ಥರಾಗಲಿ ಎಂಬ ದೃಷ್ಟಿಯಿಂದ, ವಿದ್ಯಾರ್ಥಿ ಅಭಿಪ್ರಾಯ ಮಂಡನೆಯ ಚಟುವಟಿಕೆಯನ್ನು ನಾನು ಸಾಧ್ಯವಾದಾಗಲೆಲ್ಲ ನನ್ನ ತರಗತಿಗಳಲ್ಲಿ ಮಾಡಿಸುತ್ತೇನೆ.)
“ಮ್ಯಾಮ್, ನಾನು ಹುಟ್ಟಿದ್ದು ಹೆಣ್ಣುಮಕ್ಕಳಿಗೆ ಸ್ವಾಗತ ಇಲ್ದೆ ಇದ್ದ ಒಂದು ಮನೆಯಲ್ಲಿ. ನಾನು ಹುಟ್ದಾಗ ಮಗು ಹೆಣ್ಣು ಅಂತ ಗೊತ್ತಾಗಿ ನನ್ನಪ್ಪ ಆರು ತಿಂಗಳಾದರೂ ನನ್ನ ನೋಡಕ್ಕೆ ಬಂದೇ ರ‍್ಲಿಲ್ವಂತೆ. ಹೆಣ್ಣು ಹೆತ್ತಿದೀಯ ಅಂತ ನನ್ನ ಅಮ್ಮನ್ನ ದಿನಾನೂ ಅವ್ರ ಅತ್ತೆ ಮನೆಯವರು ಬಯ್ತಿದ್ದರಂತೆ. ನನ್ನ ಐದನೇ ವಯಸ್ಸಿನಲ್ಲಿ ಒಂದ್ಸಲ ನಂಗೆ ತುಂಬ ಜ್ವರ ಬಂದಿತ್ತಂತೆ. ಜ್ವರ ತೀರಾ ಜಾಸ್ತಿಯಾಗಿ ಪ್ರಜ್ಞೆ ತಪ್ಪಿ ಹೋಗುವ ಸ್ಥಿತಿಯಲ್ಲಿದ್ನಂತೆ. ತುಂಬ ಹೊತ್ತು ನಾನು ಏಳ್ದೇ ಇದ್ದಾಗ ನಾನು ಸತ್ತಿದ್ದೆ ಅಂದ್ಕೊಂಡು ಅಂಗಳದಲ್ಲಿ ಚಾಪೆ ಮೇಲೆ ಮಲಗಿಸಿದ್ರಂತೆ ಮ್ಯಾಮ್. ಆಗ ಯಾರೋ ದಾರೀಲಿ ಹೋಗ್ತಿದ್ದೋರು ಮಗು ಕೈಕಾಲಾಡಿಸ್ತಿದೆ, ಸತ್ತಿಲ್ಲ, ಅಂಗಳದಲ್ಲಿ ಯಾಕೆ ಮಲಗ್ಸಿದೀರಿ, ಡಾಕ್ಟರ್ಗೆ ತರ‍್ಸಿ ಅಂದಾಗ ಅರೆ ಮನಸ್ಸಿಂದ ಡಾಕ್ಟರ್ಗೆ ತೋರಿಸಿದ್ರಂತೆ ಮ್ಯಾಮ್. ಹೇಗೋ ಬದುಕ್ಕೊಂಡೆ. ನನ್ನ ಅಮ್ಮ ಈಗ್ಲೂ ಇದನ್ನ ನೆನಸ್ಕೊಂಡು ತುಂಬ ಅಳ್ತಾರೆ ಮ್ಯಾಮ್. ಅದಕ್ಕೇ ನಾನು ಚೆನ್ನಾಗಿ ಓದಿ, ಕೆಲ್ಸಕ್ಕೆ ಸೇರಿ ನನ್ನ ಕಾಲ ಮೇಲೆ ನಿಂತು ನನ್ನ ಅಮ್ಮನ್ನ ಚೆನ್ನಾಗಿ ನೋಡ್ಕೋಬೇಕು ಅಂತ ನಿರ್ಧಾರ ಮಾಡಿದೀನಿ’’ ….. ಹೇಳುತ್ತಾ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಳು ಆ ನಿಷ್ಪಾಪಿ ಹುಡುಗಿ. ಬರೀ ಹೆಣ್ಣುಮಕ್ಕಳಿಂದ ಕೂಡಿದ್ದ ಇಡೀ ತರಗತಿ ಸೂಜಿ ಬಿದ್ದರೂ ಕೇಳುವಷ್ಟು ಮೌನವಾಗಿತ್ತು. ಅನೇಕ ವಿದ್ಯಾರ್ಥಿನಿಯರ ಕಣ್ಣು ಒದ್ದೆಯಾಗಿ ಒಂದು ನೋವು ಇಡೀ ವಾತಾವರಣವನ್ನು ಮಂಜುಮೋಡದಂತೆ ಆವರಿಸಿತ್ತು. ನನಗೂ ಭಾವನೆಗಳ ಆವೇಗವನ್ನು ತಡೆಯುವುದು ತುಂಬ ಕಷ್ಟವಾಯಿತು. ಹೇಗೋ ನನ್ನನ್ನು ನಾನು ಸಂಬಾಳಿಸಿಕೊoಡು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಅವರು ಆರ್ಥಿಕವಾಗಿ ಸಬಲರಾಗಬೇಕಾದ ಅಗತ್ಯದ ಬಗ್ಗೆ ಹೇಳಿ ಅಂದು ತರಗತಿಯನ್ನು ಮುಕ್ತಾಯಗೊಳಿಸಿದೆನೆಂದು ನೆನಪು. ತರಗತಿಯಲ್ಲಿ ಸದಾ ಚುರುಕಾಗಿರುತ್ತಿದ್ದ, ಪ್ರಶ್ನೆಗಳಿಗೆ ಪಟಪಟ ಎಂದು ಅರಳು ಹುರಿದಂತೆ ಉತ್ತರ ಹೇಳುತ್ತಿದ್ದ ಈ ವಿದ್ಯಾರ್ಥಿನಿಯ ಮನಸ್ಸಿನಲ್ಲಿ ಇಂತಹ ನೋವು ಮಡುಗಟ್ಟಿದೆ ಎಂದು ಯಾರು ಊಹಿಸಲು ಸಾಧ್ಯವಿತ್ತು?
ಕನ್ನಡ ಅಧ್ಯಾಪಕಿಯಾಗಿ ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ನೆನಪುಗಳಲ್ಲಿ ಈ ಅನುಭವವೂ ಸೇರಿದೆ. ನಮ್ಮ ಸಮಾಜದಲ್ಲಿನ ಲಿಂಗಭೇದ ಹಾಗೂ ಅದು ಹೆಣ್ಣುಮಕ್ಕಳಲ್ಲಿ ಉಂಟು ಮಾಡುವ ನೋವನ್ನು ಕಡಿಮೆ ಮಾಡುವಲ್ಲಿ ಅಧ್ಯಾಪಕರ ಪಾತ್ರದ ಬಗ್ಗೆ ನಾನು ಗಂಭೀರವಾಗಿ ಯೋಚಿಸುವಂತೆ ಮಾಡಿದ ಅನುಭವವಿದು.