ತಮ್ಮ ಮಕ್ಕಳನ್ನು `ಇಂಗ್ಲಿಷ್ ಮೀಡಿಯಂ’ ಶಾಲೆಗೆ ಸೇರಿಸುವುದು, ಆ ಮಕ್ಕಳು ಜನರ ಮುಂದೆ ಇಂಗ್ಲಿಷ್ ಮಾತಾಡುವಾಗ ಹಿರಿಹಿರಿ ಹಿಗ್ಗುವುದು, ಅಂಗಡಿಗಳಲ್ಲಿ, ಸಮಾರಂಭಗಳಲ್ಲಿ ತಾವು ಕೂಡ ತಮ್ಮ ಮಕ್ಕಳೊಂದಿಗೆ ಆಂಗ್ಲಭಾಷೆಯಲ್ಲಿ ಮಾತಾಡಿ ತಾವು ಎಷ್ಟು `ಫಾರ್ವರ್ಡ್, ಶ್ರೀಮಂತ ಜನಗಳು, ತಮ್ಮ ಮಕ್ಕಳನ್ನು ಹೇಗೆ ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಿದ್ದೇವೆ’ ಎಂಬುದನ್ನು ತೋರಿಸಿಕೊಳ್ಳುವುದು ಕನ್ನಡ ನಾಡಿನಲ್ಲಿನ ಸಾಕಷ್ಟು ತಂದೆತಾಯಿಯರ ಅಭ್ಯಾಸವಾಗಿದೆ. ಇದರ ಗಂಭೀರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಆಯಾಮಗಳನ್ನು ನಾನಿಲ್ಲಿ ಚರ್ಚಿಸಲು ಹೋಗುತ್ತಿಲ್ಲ. ಇದು ನಮ್ಮ ದೈನಂದಿನ ಜೀವನದ ಮೇಲೆ ಬೀರುವ ಪರಿಣಾಮವೊಂದರ ಉದಾಹರಣೆಯೊಂದನ್ನು ಮಾತ್ರ ಇಲ್ಲಿ ಮುಂದಿಡುತ್ತಿದ್ದೇನೆ.
ಕೆಲವು ವರ್ಷಗಳ ಹಿಂದೆ ನಾನು ನಮ್ಮ ಮನೆಯ ಹಿಂದಿನ ರಸ್ತೆಯೊಂದರಲ್ಲಿರುವ ತರಕಾರಿ ಅಂಗಡಿಯೊಂದಕ್ಕೆ ಹೋಗಿದ್ದೆ. ಹಳ್ಳಿಯ ಗೌಡನೊಬ್ಬನ ಅಂಗಡಿ ಇದು. ಅವನ ಮಾತು ಅಚ್ಚಗನ್ನಡ, ಇಂಗ್ಲೀಷಿನ ಗಂಧಗಾಳಿಯಿಲ್ಲದ ಅಪ್ಪಟ ದೇಸಿ ವ್ಯಕ್ತಿ ಆತ. ಆ ಬೆಳಿಗ್ಗೆ ಆ ಅಂಗಡಿಗೆ ಸುಮಾರು ಹತ್ತು ವರ್ಷ ವಯಸ್ಸಿನ ಒಬ್ಬ ಬಾಲಕಿ ಬಂದಳು. ಬಂದವಳೇ ತರಕಾರಿ ಮಾರುತ್ತಿದ್ದ ಗೌಡನನ್ನು ಉದ್ದೇಶಿಸಿ `ಫೋರ್ ಲೈಮ್ ಕೊಡಿ ಅಂಕಲ್’ ಎಂದಳು, ತನ್ನ ಕಾನ್ವೆಂಟ್ ಶೈಲಿಯ ಕನ್ನಡದಲ್ಲಿ! ನಮ್ಮ ಗೌಡನಿಗೆ ಅವಳು ಏನು ಅಂದಳು ಎಂದು ಅರ್ಥವಾಗಲಿಲ್ಲ. `ಆಂ, ಏನಮ್ಮ?’ ಅಂದ. ಮತ್ತೆ ಆ ಹುಡುಗಿ `ಫೋರ್ ಲೈಮ್ ಕೊಡಿ ಅಂಕಲ್’ ಎಂದಳು. ಈಗ ಗೌಡನಿಗೆ ಅವಳು ಇಂಗ್ಲೀಷಿನಲ್ಲಿ ಏನೋ ಹೇಳುತ್ತಿದ್ದಾಳೆ ಅನ್ನಿಸಿ `ಏ, ಕನ್ನಡದಲ್ಲಿ ಯೋಳಮ್ಮ. ಇಂಗ್ಲೀಸು ತಿಳಿಯಾಕಿಲ್ಲ ನಂಗೆ’ ಅಂದ. ಆ ಮಗುವಿಗೆ ಕನ್ನಡದಲ್ಲಿ ಅದನ್ನು ಹೇಳಲು ಬರಲಿಲ್ಲ. ಆಗ ಪಕ್ಕದಲ್ಲಿದ್ದವರು `ಅವ್ಳು ಕೇಳ್ತಿರೋದು ನಿಂಬೆ ಹಣ್ಣು ಕಣಪ್ಪ’ ಅಂದರು. `ಓ, ನಿಂಬೆ ಹಣ್ಣಾ? ಏನಮ್ಮ, ನಿಂಗೆ ಇದ್ನ ಕನ್ನಡದಲ್ಲಿ ಯೋಳಕ್ಕೆ ಬರಾಕಿಲ್ವಾ? ಬೆಂಗ್ಳೂರ್ ಪೇಟೆನಾಗೆ ಇಸ್ಕೂಲ್ಗೋಗೋ ಮಕ್ಳು ನೀವು. ಅಷ್ಟೂ ತಿಳಿಯಾಕಿಲ್ವಾ?’ ಅಂದ. ಆ ಮಗು ಕಕ್ಕಾಬಿಕ್ಕಿಯಾಗಿ ನೋಡುತ್ತಿತ್ತು. ಅಲ್ಲಿದ್ದವರೊಬ್ಬರು `ಸ್ಕೂಲ್ಗ್ಹೋಗೊದಕ್ಕೇನೆ ಕಣೋ ಗೌಡಾ, ಅವ್ಳಿಗೆ ಕನ್ನಡದಲ್ಲಿ ಹೇಳಕ್ಕೆ ರ್ತಾ ಇಲ್ಲ. ಈಗೆಲ್ಲಾ ಇಂಗ್ಲಿಷ್ ಮೀಡಿಯಂ ಅಲ್ವಾ?’’ ಅಂದರು. `ಅಯ್ಯೋ……’ ಅಂದ ಗೌಡ!
`ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಅಂದರೆ ಅವರನ್ನು ತಮ್ಮ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಿಂದ ದೂರ ಮಾಡುವುದು ಎಂದಾಗಬಾರದಲ್ಲವೇ?’ ಅನ್ನಿಸಿತು ನನಗೆ.