ಈಚೆಗೆ ಗೆಳತಿಯೊಬ್ಬಳ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುವುದೆಂದು ಯೋಚಿಸುತ್ತಿದ್ದಾಗ ಬಿದಿರಿ ಕಲಾಕೃತಿಯೊಂದನ್ನು ಕೊಡಬಹುದಲ್ಲ ಅನ್ನಿಸಿತು. ಸರಿ, ಅದು ನಮ್ಮ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ(ಜನಪ್ರಿಯವಾಗಿ ಕರೆಯುವಂತೆ ಎಂಜಿ ರೋಡ್) ಕಾವೇರಿ ಕರಕುಶಲ ಮಳಿಗೆಯಲ್ಲಿ ಸಿಗಬಹುದೆಂಬ ಭಾವನೆಯಿಂದ ಅಲ್ಲಿಗೆ ಹೋದೆ. ಗಂಧದ ಮರದ ವಸ್ತುಗಳು, ಮೈಸೂರು ವರ್ಣಚಿತ್ರಗಳು, ಲೋಹದ ವಿಗ್ರಹಗಳು, ಚೆನ್ನಪಟ್ಟಣದ ಗೊಂಬೆಗಳು ಮುಂತಾದ ಕರ್ನಾಟಕ ರಾಜ್ಯಮೂಲದ ಸುಂದರ ವಸ್ತುಗಳನ್ನು ಕೊಳ್ಳಬಹುದಾದ ಸ್ಥಳ ಅದು. ಕರ್ನಾಟಕ ಸರ್ಕಾರದ ಒಡೆತನವುಳ್ಳ ಈ ಮಳಿಗೆಯು, ಬೆಂಗಳೂರಿನ ಒಂದು ಮುಖ್ಯ ಕರಕುಶಲಕಲಾಕೃತಿಗಳ ಮಾರಾಟ ಮಳಿಗೆ. ೧೯೬೪ರಲ್ಲಿ ಸ್ಥಾಪಿತವಾಗಿ ಈವರೆಗೂ ಚೆನ್ನಾಗಿ ನಡೆಯುತ್ತಿರುವ ಈ ಮಳಿಗೆಯು ಕರ್ನಾಟಕದ ರಾಜಧಾನಿಯ ಕಲಾಪ್ರಿಯ ನಿವಾಸಿಗಳ ಹಾಗೂ ಪ್ರವಾಸಿಗಳ ಮೆಚ್ಚಿನ ಅಂಗಡಿಯಾಗಿದೆ.
ಸಾಕಷ್ಟು ವಿಶಾಲವಾಗಿರುವ ಆ ಇಡೀ ಮಳಿಗೆಯಲ್ಲಿ ಸುತ್ತಾಡಿ ನಾನೇ ಬಿದಿರಿ ಕಲಾಕೃತಿಯನ್ನು ಹುಡುಕಿ ತೆಗೆದುಕೊಳ್ಳಲು ಅಂದು ನನಗೆ ಸಮಯದ ಅಭಾವವಿತ್ತು. ಹೀಗಾಗಿ ನಾನು ಮಳಿಗೆಯನ್ನು ಪ್ರವೇಶಿಸಿದ ತಕ್ಷಣ ಎದುರಿಗೆ ಸಿಕ್ಕಿದ ಒಬ್ಬ ಮಾರಾಟ ಸಹಾಯಕನನ್ನು “ಏನಪ್ಪ, ಇಲ್ಲಿ ಬಿದಿರಿ ಕಲಾಕೃತಿಗಳನ್ನ ಎಲ್ಲಿಟ್ಟರ‍್ತೀರ?” ಎಂದು ಕೇಳಿದೆ. “ಆಂ, ಅಂಥದ್ದು ಇಲ್ಲಿಲ್ಲ ಮೇಡಂ’’ ಅಂದ. ನನಗೆ ಆಶ್ಚರ್ಯವಾಯಿತು. `ಬೆಳ್ಳಿ ಸೇರಿಸಿ ಮಾಡರ‍್ತಾರಲ್ಲ ಲೋಹದ ಹೂಜಿ, ಹೂದಾನಿ ಇಂಥವು, ಬೀದರ್ ಕಡೇದು … ಅದನ್ನಪ್ಪ ನಾನು ಕೇಳ್ತಿರೋದು” ಅಂದೆ. “ಅಯ್ಯೋ ಅಂಥ ಲೋಹದ್ದೆಲ್ಲ ಇಲ್ಲಿ ಇಲ್ಲ ಮೇಡಂ, ಮರದ್ದು ಇದೆ, ಅಷ್ಟೇ’’ ಅಂದ. ಆಗಲಿ, ನೋಡೋಣ, ಬಿದಿರಿ ಕಲಾಕೃತಿ ಸಿಗದಿದ್ದರೂ ಇನ್ನೇನಾದರೂ ಚಂದವಿರುವುದು ಸಿಗಬಹುದು ಅಂದುಕೊಳ್ಳುತ್ತಾ ನಾನೇ ಹುಡುಕಲು ಶುರು ಮಾಡಿದೆ. ಒಂದು ಐವತ್ತು ಅಡಿ ಹೋಗುವಷ್ಟರಲ್ಲಿ ….. ಅಗೋ!೧ ಅತಿ ಸುಂದರವಾಗಿ ಒಡವೆಗಳಂತೆ ಹೊಳೆಯುತ್ತಿದ್ದ ಬಿದಿರಿ ಕಲಾಕೃತಿಗಳು ನನ್ನನ್ನು ಎದುರುಗೊಂಡವು. ಕಪ್ಪು ಬಣ್ಣದ ಲೋಹದಲ್ಲಿ ಬೆಳ್ಳಿಯ ಕುಸುರಿ ಕಲೆಗಾರಿಕೆಯಿದ್ದ ಆ ಮನಮೋಹಕ ಆಕೃತಿಗಳು ಮಿರಿಮಿರಿ ಮಿಂಚುತ್ತಾ ನೋಡುಗರನ್ನು ಸೆಳೆಯುತ್ತಿದ್ದವು. ಅವುಗಳಲ್ಲಿ, ಗೇಣುದ್ದ ಇದ್ದ ಒಂದು ಹೂದಾನಿಯನ್ನು ಆರಿಸಿಕೊಂಡು ಅದರ ಬೆಲೆಯನ್ನು(ಮೂರು ಸಾವಿರ ರೂಪಾಯಿಗಳು – ತುಸು ದುಬಾರಿಯಾದ ಕಲಾಕೃತಿಗಳಿವು) ಪಾವತಿಸಿ ಉಡುಗೊರೆ ರೂಪದಲ್ಲೇ ಇದ್ದ ಅದರ ಡಬ್ಬಾದಲ್ಲಿ ಕಟ್ಟಿಸಿಕೊಂಡು ಮಳಿಗೆಯಿಂದ ಹೊರಬಂದೆ.
ಹೊರಬರುತ್ತಿರುವಾಗಲೂ ಕಾಡಿತು ಮತ್ತು ಯೋಚಿಸಿದಾಗೆಲ್ಲ ಈ ಯೋಚನೆ ಕಾಡುತ್ತೆ – ತಾನು ಕೆಲಸ ಮಾಡುತ್ತಿರುವ ಮಳಿಗೆಯಲ್ಲಿ ಇರುವಂತಹ, ಕರ್ನಾಟಕದ ಹೆಮ್ಮೆಯ ಕಲಾಕೃತಿಯ ಬಗ್ಗೆ ಆ ಮಾರಾಟ ಸಹಾಯಕನಿಗೆ ಏಕೆ ತಿಳಿದಿರಲಿಲ್ಲ? ಅವನಿಗೇ ಗೊತ್ತಿಲ್ಲವೆಂದರೆ ಮಳಿಗೆಗೆ ಬರುವ ಗ್ರಾಹಕರಿಗೆ ಆವನು ಹೇಗೆ ಮಾರ್ಗದರ್ಶನ ಮಾಡಬಲ್ಲ? ಅವನ (ಮತ್ತು ಬಹುಶಃ ಅವನಂತಹ ಇನ್ನೂ ಕೆಲವರ) ಈ ಕೊರತೆಯ ಬಗ್ಗೆ ಅವನಿಗಾಗಲೀ, ಅವನಿಗೆ ಕೆಲಸ ಕೊಟ್ಟವರಿಗಾಗಲೀ ಅರಿವಿದೆಯೇ?
ಸೌಂದರ್ಯದ ಸಂತೆಯಲ್ಲಿದ್ದೂ ಮನುಷ್ಯರು ಅದರ ಕಡೆಗೆ ಕುರುಡಾಗಿರುವುದು ಒಂದು ವಿಪರ್ಯಾಸವಲ್ಲವೇ? ಮತ್ತು ಇದು ಕೇವಲ ಕಾವೇರಿ ಮಳಿಗೆಗೆ ಅನ್ವಯಿಸುವ ಮಾತಲ್ಲ ಅನ್ನಿಸುತ್ತೆ.
**ಬಿದಿರಿ ಕಲೆ. ಈ ಪದವನ್ನು ಕೇಳಿದ ತಕ್ಷಣ ನೆನಪಾಗುವುದು ಕಪ್ಪುಬಣ್ಣದಲ್ಲಿದ್ದು ಬೆಳ್ಳಿಯ ಕುಸುರಿಕಲೆಯುಳ್ಳ ಅತ್ಯಂತ ಸುಂದರ ಹೂಜಿ, ನವಿಲು, ಹೂದಾನಿ ….. ಮುಂತಾದ ಅಲಂಕಾರ ವಸ್ತುಗಳು. ಒಡವೆಗಳಂತೆ ಶೋಭಿಸುವ ಕಲಾಕೃತಿಗಳಿವು. ಕರ್ನಾಟಕದ ವಿಶಿಷ್ಟ ಕರಕುಶಲ ಕಲೆಗಳಲ್ಲಿ ಬಿದಿರಿ ಕಲೆಯೂ ಒಂದು; ಬೀದರ್‌ನಲ್ಲಿ ಜನ್ಮಿಸಿದ್ದರಿಂದ ಇದರ ಹೆಸರು ಬಿದಿರಿ. ಬಿಳಿ ಹಿತ್ತಾಳೆಯನ್ನು ಕಪ್ಪಾಗಿಸಿ ಅದರ ಮೇಲೆ ಬೆಳ್ಳಿಯ ಕುಸುರಿಕಲೆಯನ್ನು ಮಾಡುವಂತಹ ಕಲೆ ಇದು. ಇಲ್ಲಿನ ಒಂದು ವಿಶೇಷ ಅಂಶವೆಂದರೆ ಬಿದಿರಿ ಕಲಾಕೃತಿಗಳನ್ನು ಕಪ್ಪಾಗಿಸಲು ಆ ಲೋಹಶಿಲ್ಪಿಗಳು ಬೀದರ್‌ನ ಕೋಟೆಯ ಮಣ್ಣನ್ನು ಬಳಸುತ್ತಾರಂತೆ, ಹಾಗೂ ಅಂತಹ ಮಣ್ಣನ್ನು ಹುಡುಕಿಕೊಂಡು ಹೋಗುವಾಗ ಅದರ ರುಚಿಯಿಂದ ಅದರ ಅಗತ್ಯ ಹದವನ್ನು ಗುರುತಿಸುತ್ತಾರಂತೆ! ಹದಿನಾಲ್ಕು-ಹದಿನೈದನೇ ಶತಮಾನದಲ್ಲಿ ಬೀದರಿನಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಬೆಳೆದಂತಹ, ಪರ್ಷಿಯಾ ಮೂಲದ ಸೌಂದರ್ಯಸಂಸ್ಕೃತಿ ಇದು; ಇದನ್ನು ಪಾತ್ರೆಗಳ ರೂಪದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಿದವರು ಗರೀಬ್ ನವಾಝ್ ಎಂದು ಬಿರುದು ಪಡೆದ ಪ್ರಖ್ಯಾತ ಸೂಫಿಸಂತರಾದ ಖ್ವಾಜಾ ಮೊಯ್ನುದ್ದೀನ್ ಹಸನ್ ಚಿಸ್ಟಿಯವರಂತೆ. ಬಿದಿರಿ ಕಲೆಗೆ ಪ್ರಪಂಚದ ಗುಣಮಟ್ಟದ ಪ್ರತಿಷ್ಠಿತ ಹೆಗ್ಗುರುತಾದ ಜಿಐ ಮಾನ್ಯತೆಯು ದೊರೆತಿದೆ. ಕರ್ನಾಟಕಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟ ಶ್ರೇಷ್ಠ ಸಂಗತಿಗಳಲ್ಲಿ ಇದೂ ಸಹ ಒಂದು.