ದಿನವೆಲ್ಲ ಪಾತ್ರೆ ತೊಳಿ, ಬಟ್ಟೆ ಒಗಿ ಕಸ ಗುಡಿಸು, ಮನೆ ಒರೆಸು ಎಂಬಿತ್ಯಾದಿ ಕೆಲಸದಲ್ಲಿ ಮುಳುಗಿರುವ ಯಲ್ಲಮ್ಮನಿಗೆ ಹೆಚ್ಚುಕಮ್ಮಿ ನನ್ನದೇ ವಯಸ್ಸು. ಅನೇಕ ವರ್ಷಗಳಿಂದ ನಮ್ಮ ಮನೆಯ ಗೃಹವಾಳ್ತೆ, ದೇಖರೇಖಿಗಳಲ್ಲಿ ಸಹಾಯ ಮಾಡುವ ಪರಿಶ್ರಮೀ ವ್ಯಕ್ತಿ ಅವರು. ಒಂದು ದಿನ (ಸುಮಾರು ಹದಿನೆಂಟು ವರ್ಷಗಳ ಹಿಂದೆ) ಹೀಗೇ ಸುಮ್ಮನೆ ಅವರನ್ನು ಕೇಳಿದೆ “ಯಲ್ಲಮ್ಮ, ನಿಮ್ಗೆ ಓದಕ್ಕೆ, ಬರಿಯಕ್ಕೆ ಬರುತ್ತಾ?”
“ಅಯ್ಯೋ, ಇಲ್ಲ. ಬರಲ್ಲಮ್ಮ ನಂಗೆ. ಚಿಕ್ಕುಡ್ಗಿ ಇದ್ದಾಗ ನಮ್ಮಮ್ಮ ಎರಡ್ನೇ ಕ್ಲಾಸ್ ತಂಕಾನೋ ಏನೋ ಇಸ್ಕೂಲಿಗ್ ಕಳ್ಸಿದ್ರು. ಆಮೇಲೆ, ಮನೆ ಕೆಲ್ಸ, ಹಸು ನೋಡ್ಕೋ, ಸೆಗಣಿ ಬಳಿ, ಹಾಲು ಹಾಕು ಇಂಥವು ಮಾಡ್ಕೊಂಡು ಶಾಲೆಗೆ ಹೋಗಕ್ಕೆ ಆಗ್ಲೇ ಇಲ್ಲ. ಆವಾಗೆಲ್ಲ ಹಳ್ಳಿ ಕಡೆ ಹಂಗೇ ಅಲ್ವರಾ?”
ಸದಾ ನಗುಮೊಗದಿಂದ ಛಕಛಕನೆ ಕೆಲಸ ಮಾಡುವ, ಹೇಳಿದ್ದನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಯಲ್ಲಮ್ಮನಿಗೆ ಓದಕ್ಕೆ ಬರಲ್ಲ ಅಂತ ನನಗೆ ಬೇಸರವಾಯಿತು. ಆದರೆ ಆಕೆ ತನ್ನ ಮೂವತ್ತೆಂಟನೇ ವಯಸ್ಸಿನಲ್ಲಿ ಓದು ಬರಹ ಕಲಿಯುವುದು ಸಾಧ್ಯವೇ? ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಅಂತಾರೆ. ನಾನೇ ಈಕೆಗೆ ಕನ್ನಡ ಕಲಿಸಿದರೆ ಹೇಗೆ? ಹೇಗೂ ನನಗೆ ಕಾಲೇಜಿನಲ್ಲಿ ಹದಿನೆಂಟು ಹತ್ತೊಂಬತ್ತು ವಯಸ್ಸಿನ ಪದವಿ ಮಕ್ಕಳಿಗೆ, ಅಂದರೆ ಸ್ವಲ್ಪ ದೊಡ್ಡವರಿಗೆ ಪಾಠ ಮಾಡಿ ಅಭ್ಯಾಸ ಇರುವುದರಿಂದ ಇವರಿಗೂ ಹೇಳಿಕೊಡಬಹುದು, ಅಆಇಈಯಿಂದ ಶುರು ಮಾಡ್ಬೇಕು ಅಷ್ಟೆ ಅಂತ ಅನ್ನಿಸ್ತು. ಕೇಳಿದೆ.
“ನಾನು ಕನ್ನಡ ಓದಕ್ಕೆ, ಬರಿಯಕ್ಕೆ ಹೇಳ್ಕೊಡ್ತೀನಿ. ಕಲೀತೀರಾ ಯಲ್ಲಮ್ಮ?”
ಸಾಮಾನ್ಯ ಯಾವುದಕ್ಕೂ ತಕ್ಷಣ ಇಲ್ಲ ಅನ್ನದ ಯಲ್ಲಮ್ಮ “ಆಯ್ತಮ್ಮ, ಕಲೀತೀನಿ” ಅಂದ್ರು.
*****
ನ್ನೂರು ಪುಟದ ಒಂದು ಬರೆಯುವ ಗೆರೆಯುತ(ರೂಲ್ಡ್ ಪದಕ್ಕೆ ನಾನು ಬಳಕೆ ಮಾಡಲು ಪ್ರಯತ್ನಿಸಿದ ಕನ್ನಡ ಪದ! ಹೀಗೆ ಇಂಗ್ಲಿಷ್ ಪದಗಳಿಗೆ ಏನೇನೋ ಕಸರತ್ತಿನ ಮೂಲಕ ಹುಡುಕಿದ ಕನ್ನಡ ಸಂವಾದಿ ಪದ ಬಳಸಿ ಮನೆಮಂದಿಯನ್ನು ಸಹೋದ್ಯೋಗಿಗಳನ್ನು `ಇದಾಗುತ್ತಾ ನೋಡಿ, ಬಳಸ್ಬಹುದಾ ನೋಡಿ’ ಎಂದು ಆಗಾಗ ತಲೆ ತಿನ್ನುವುದು ನನ್ನ ಅಭ್ಯಾಸ!) ಪುಸ್ತಕ, `ಮುದ್ದು ಕನ್ನಡ’ ಎಂಬ ಬಾಲಪಾಠದ ಕನ್ನಡ ಪುಸ್ತಕ ತಂದು ನಾನು ಯಲ್ಲಮ್ಮನಿಗೆ ಕೊಡುವುದರಿಂದ ಈ ಕಲಿಕಾ ಪ್ರಸಂಗ ಪ್ರಾರಂಭವಾಯಿತು. ಅ, ಆ, ಎಂದು ಒಂದು ಅಥವಾ ಎರಡು ಅಕ್ಷರ ಬರೆದು ತಿದ್ದಿಸಿ, ತಿದ್ದಿಸಿ ಪಾಠ ಪ್ರಾರಂಭಿಸಿದೆ. ಮೊದಮೊದಲು ಯಲ್ಲಮ್ಮ ಉತ್ಸಾಹದಿಂದಲೇ ಬರೆದರು. ಒಂದು ಹದಿನೈದು ಇಪ್ಪತ್ತು ಅಕ್ಷರ ಆಗುವ ತನಕ ಎಲ್ಲ ಚೆನ್ನಾಗಿ ನಡೆಯುತ್ತಿದೆ ಅನ್ನಿಸ್ತು. ಆದರೆ ಆಮೇಲೆ ಶುರುವಾಯಿತು ನೋಡಿ ಅಡ್ಡಿ, ಆತಂಕ, ವಿವಿಧ ವಿಘ್ನಗಳ ಸರಮಾಲೆ.
“ಅಮ್ಮ, ಉಗಾದಿ ಅಬ್ಬಕ್ಕೆ ಊರ್‌ಗೋಗ್ತೀನಿ. ಎರಡು ದಿನ ಬರಕ್ಕಾಗಲ್ಲಮ್ಮ”.
“ಅಮ್ಮ, ಅದೂ ……… ತುಂಬ ತಲೆ ನೋವು ಬಂದ್ಬಿಟ್ಟಿತ್ತು, ಅದಕ್ಕೇ ನೆನ್ನೆ ಬರ್‍ಲಿಲ್ಲ”.
“ಅಮ್ಮ, ನಮ್ ಚಿಕ್ಕಪ್ಪನ ತಂಗೀ ಮಗ್‌ಳ್ ನಾದ್ನೀ ಮದ್ವೆ ಇದೆ. ಚಾಮರಾಜನಗರದಲ್ಲಿ. ಹೋಗ್ಬೇಕು. ಮೂರು ದಿನ ಬಿಟ್ಟು ಬರ್‍ತೀನಿ”.
“ನಮ್ ತಾಯೀಗ್ ಉಷಾರಿಲ್ಲ. ಆಸ್ಪತ್ರೇಗೋಗ್ಬೇಕು. ನಾಡಿದ್ದ್ ಕೆಲ್ಸಕ್ಕ್ ಬರ್‍ತೀನಿ”.
ಓಹ್, ಇಂತಹ ಚಿಕ್ಕಪುಟ್ಟ(!) ಕಲಿಕಾವಿಘ್ನಗಳು ಸಾಲದು ಎಂಬಂತೆ, ಮಧ್ಯೆ ಮಧ್ಯೆ `ದೊಡ್ಡ ಮಗಳ ಬಾಣಂತನ”, `ಚಿಕ್ಕ ಮಗಳ ಮದ್ವೆ”, `ಅಣ್ಣನ ಸೊಸೆ ಬಾಣಂತನ’, `ಮನೆಯಲ್ಲಿ ಸುಣ್ಣಬಣ್ಣ ಆಗ್ತಿದೆ” – ಇಂತಹ ದೀರ್ಘಾವಧಿ ರಜೆಗಳೂ ಸೇರಿ ನಮ್ಮ ಕನ್ನಡ ಪಾಠದ ಕಥೆ ಶಟ್ಲು ಟ್ರೈನಿಗೂ ಕಡೆ ಅನ್ನಿಸಿಬಿಟ್ಟಿತು. ಏನು ಮಾಡುವುದು? ಹೀಗಾದರೆ ಹೇಗೆ? ಎರಡಕ್ಷರ ಕಲಿಯುವುದು, ನಾಲ್ಕು ದಿನ ರಜೆ ಮೇಲೆ ಹೋಗುವುದು, ಮತ್ತೆ ಒಂದು ಅಕ್ಷರ ಕಲಿ, ಮತ್ತೆ ನಿಲ್ಲಿಸು …… ಹೀಗೆ ಮಾಡುತ್ತಾ ಮಾಡುತ್ತಾ ಕಲಿತದ್ದು ಮರೆತಂತೆ ಬೇರೆ ಆಗುತ್ತಿತ್ತು. ನನಗಂತೂ ಯಾಕೋ ಈ ಪ್ರಯಾಣ ಸರಿಯಾಗಿ ಸಾಗಬಹುದು ಎಂಬ ಧೈರ್ಯವೇ ಬರಲಿಲ್ಲ. ಏನು ಮಾಡುವುದು ಎಂದು ಚಿಂತೆಯಾಯಿತು.
ಹೀಗೇ ತಲೆ ಕೆಡಿಸಿಕೊಂಡಿದ್ದಾಗ ಒಂದು ದಿನ ಒಂದು ವಿಚಾರ ಹೊಳೆಯಿತು. ಯಲ್ಲಮ್ಮನನ್ನು ಒಂದು ಕರಾರಿಗೆ ಸಿಕ್ಕಿಸಿದರೆ ಹೇಗೆ! ಎಂಬ ಯೋಚನೆ ಬಂತು. ಮಾರನೆಯ ದಿನ ವಿಜಯದಶಮಿ ಇತ್ತು.
ಸರಿ, ವಿಜಯ ದಶಮಿಯ ದಿನ ಯಲ್ಲಮ್ಮನನ್ನ ದೇವರ ಮನೆ ಮುಂದೆ ಕೂರಿಸಿಕೊಂಡು ಹೇಳಿದೆ – “ಯಲ್ಲಮ್ಮ, ಕಳೆದ ಒಂದೂವರೆ ವರ್ಷದಿಂದ ಕನ್ನಡ ಪಾಠ ಶುರು ಮಾಡೋದು, ನಿಲ್ಸೋದು, ಶುರು ಮಾಡೋದು, ನಿಲ್ಸೋದು ಆಗ್ತಾ ಇದೆ. ಹೀಗಾದ್ರೆ ನಾವು ಎಲ್ಲೂ ತಲುಪಲ್ಲ. ಇವತ್ತು ವಿಜಯದಶ್ಮಿ. ವಿದ್ಯಾರಂಭಕ್ಕೆ ಶುಭದಿನ, ಮುಹೂರ್ತ ನೋಡ್ಬೇಕಿಲ್ಲ ಅಂತಾರೆ. ಇವತ್ತಿನ್ ದಿನ ಮತ್ತೆ ಕನ್ನಡ ಪಾಠ ಶುರು ಮಾಡೋಣ. ಹ್ಂ ……. ಅಕ್ಟೋಬರ್ ಹದಿನೇಳು ಅಲ್ವಾ ಇವತ್ತು? ನೋಡಿ, ನಿಮಗೆ ಕನ್ನಡ ಕಲ್ತು ಮುಗಿಸಕ್ಕೆ ಡಿಸೆಂಬರ್ ಮೂವತ್ತೊಂದು ಕೊನೇ ದಿನ. ಜನವರಿ ಒಂದಕ್ಕೆ ಹೊಸ ವರ್ಷ. ಅವತ್ತು ಬೆಳಿಗ್ಗೆ ಬರೋ ಪ್ರಜಾವಾಣಿ ಪೇಪರ್‍ನ ನೀವು ಗಟ್ಟಿಯಾಗಿ ಓದ್ಬೇಕು. ನೀವು ಓದಿದ್ರೆ ನಾನು ನಿಮ್ಗೆ ಸಾವಿರ ರೂಪಾಯಿ ಬೆಲೇದು ಸೀರೆ ಕೊಡಿಸ್ತೀನಿ. ಓದದೇ ಇದ್ರೆ ನೀವು ನಂಗೆ ಸಾವಿರ ರೂಪಾಯಿ ಕೊಡ್ಬೇಕು, ಸರೀನಾ?”
ಯಲ್ಲಮ್ಮನ ಮುಖದಲ್ಲಿ ತುಸು ಆಶ್ಚರ್ಯ ಕಾಣಿಸಿತು. ಯಾಕೋ ವಿಷ್ಯ ಸ್ವಲ್ಪ ಗಂಭೀರ ಆಗ್ತಾ ಇದೆ ಅನ್ನಿಸ್ತೇನೋ ಅವರಿಗೆ. ಆದ್ರೆ ಆಕೆ `ಆಯ್ತಮ್ಮ’ ಎಂದು ಒಪ್ಪಿದ್ರು.
ಸರಿ. ಮತ್ತೆ ನಮ್ಮ ರೈಲು ಹೊರಡ್ತು. ಈ ಸಲ ಯಲ್ಲಮ್ಮನಲ್ಲಿ ಹೆಚ್ಚು ಬದ್ಧತೆ ಕಾಣಿಸ್ತು ಅಂತ ನನಗೆ ಅನ್ನಿಸ್ತು. ಪಾಠಪುಸ್ತಕ ಮನೆಗೂ ತಗೊಂಡು ಹೋಗಕ್ಕೆ ಶುರು ಮಾಡಿದ್ರು. ಇವರು ಅಕ್ಷರ ತಿದ್ದುತ್ತಾ ಕೂತರೆ `ನಮ್ಮ್ ಯಲ್ಲಮ್ಮ ಈ ವಯಸ್ಸಲ್ಲಿ ಬರಿಯಕ್ಕೆ, ಓದಕ್ಕೆ ಶುರು ಮಾಡ್ತು, ಮಕ್ಳು, ಮೊಮ್ಮಕ್ಳು ಎಲ್ಲ ಆದ್ಮೇಲೆ” ಎಂದು ಅವರ ಮನೆ ಮಂದಿ ನಗೆಯಾಡಿದರಂತೆ.
ಕಾಗುಣಿತ, ಎರಡು ಅಕ್ಷರದ ಪದ, ಮೂರು ಅಕ್ಷರದ ಪದ, ಚಿಕ್ಕ ಚಿಕ್ಕ ವಾಕ್ಯ ….. ಹೀಗೆ ಮುಂದುವರಿಯಿತು ಪಾಠ. ಈಗಲೂ ವಿಘ್ನಗಳು ಬರುತ್ತಿದ್ದವು. ಆದರೆ ಅದರ ನಡುವೆಯೂ ಯಲ್ಲಮ್ಮ ಒದು, ಬರಹ ಮುಂದುವರಿಸಿದರು. ಸಾವಿರ ರೂಪಾಯಿ ಕರಾರು ನನಗೂ ತುಸು ಧೈರ್ಯ ಕೊಡುತ್ತಿತ್ತು. ನಾನು ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತು, ದೀರ್ಘ, ಉಚ್ಚಾರ, ಉಕ್ತ ಲೇಖನ ಅಂತ ತಲೆ ತಿನ್ನುತ್ತಿದ್ದರೆ. “ಅಯ್ಯೋ, ಈ ಕನ್ನಡ ಮೇಡಂ ಹತ್ರ ಸಿಕ್ಕಿ ಬಿದ್ನಲ್ಲಪ್ಪಾ, ಬೇಕಿತ್ತ ನಂಗೆ ಇದು” ಅಂತ ಯಲ್ಲಮಂಗೆ ಅನ್ನಿಸ್ತಿತ್ತೋ ಏನೋ!
ಹಾಂ. ಬಂದುಬಿಡ್ತು ನಾವು ಕಾಯುತ್ತಿದ್ದ ದಿನ. ಜನವರಿ ೧. ಅವತ್ತು ಬೆಳಿಗ್ಗೆ ಯಲ್ಲಮ್ಮ ನಮ್ಮ ಮನೆಗೆ ಬಂದ ತಕ್ಷಣ ನಾನು ಅವರ ಕೈಲಿ ಪ್ರಜಾವಾಣಿ ಕೊಟ್ಟೆ. ಅಕ್ಷರ ಕೂಡಿಸಿಕೊಂಡು ಅವರು ಓದಿಬಿಟ್ಟರು.
ಹುರ್ರೇ. ನನಗೆ ನಿಜಕ್ಕೂ ಖುಷಿ ಆಯಿತು. ಅವತ್ತು ಸಂಜೆ ನಾನು ನಮ್ಮ ಮನೆ ಹತ್ತಿರದ ಬಾಲಾಜಿ ಅಂಗಡಿಗೆ ಹೋಗಿ ತಿಳಿಹಸಿರು ಒಡಲು, ನೀಲಿ ಬಣ್ಣದ ಅಂಚು-ಸೆರಗು ಇದ್ದ ಒಂದು ಗದ್ವಾಲ್ ಸೀರೆ (ಸಾವಿರದ ಹತ್ತಿರ ಬೆಲೆಯದು) ಕೊಡಿಸುವುದರೊಂದಿಗೆ ಈ ಪ್ರಸಂಗ ಸುಖಾಂತ್ಯಗೊಂಡಿತು.
ನಂತರದ ಮಾತು : ನಾನು ಬಯಸಿದ್ದಂತೆ ಗ್ರಂಥಾಲಯದಿಂದ ಕಥೆ, ಕಾದಂಬರಿ ಓದುವಷ್ಟರ ಮಟ್ಟಿಗೆ ಯಲ್ಲಮ್ಮ ಪ್ರವೀಣರಾಗಿಲ್ಲ ಎಂಬುದು ವಾಸ್ತವಾಂಶವಾದರೂ, ಓಡಾಡುವಾಗ ಬಸ್ಸುಗಳ ನಾಮಫಲಕ ಓದುವಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆ ಅನ್ನಿಸಿ ತುಸು ಸಂತೋಷ ಆಗುತ್ತೆ. ಬಿಡುವಾಗಿದ್ದಾಗ ನಮ್ಮ ಮನೆಯ ಮೆಟ್ಟಲಿನಲ್ಲೋ, ಅಂಗಳದ ಬೆಂಚಿನಲ್ಲೋ ಅವರು ಕುಳಿತು ಮಯೂರ, ತರಂಗ ತಿರುವಿ ಹಾಕುವುದನ್ನು ನೋಡಲು ಸಂತೋಷ ಆಗುತ್ತೆ. ಯಾವುದೇ ವಯಸ್ಸಿನಲ್ಲಾಗಲೀ, ಅನಕ್ಷರಸ್ಥ ಸ್ಥಿತಿಯಿಂದ ಅಕ್ಷರಸ್ಥ ಸ್ಥಿತಿಗೆ ಪರಿವರ್ತಿತವಾಗುವುದು ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಅನ್ನಬಹುದು.