ಮೇಡಂ, ನನ್ ಮಗಂಗೆ ಯಾರ ಹತ್ರ ಆದ್ರೂ ಹೇಳಿ ಪಿಯುಸಿ ಕನ್ನಡ ಪರೀಕ್ಷೆ ಪಾಸ್ ಮಾಡ್ಸೋಕೆ ಆಗುತ್ತಾ? ಬೇರೆಲ್ಲಾದ್ರಲ್ಲೂ ಪಾಸಾಗಿ ಕನ್ನಡದಲ್ಲಿ ಫೇಲಾಗಿಬಿಟ್ಟಿದಾನೆ. ಇದೊಂದರಿಂದ ಅವ್ನು ಡಿಗ್ರಿ ಓದೋಕೆ ಆಗ್ತಿಲ್ಲ. ಎಷ್ಟು ದುಡ್ಡು ಖರ್ಚಾದ್ರೂ ಪರವಾಗಿಲ್ಲ, ಏನಾದ್ರೂ ಮಾಡಿ ಮೇಡಂ, ಸುಮಾರು ಎರಡು ವರ್ಷಗಳ ಹಿಂದೆ ಒಂದು ಬೆಳಿಗ್ಗೆ, ತುಸು ಕೆಂಪಾಗಿದ್ದ ತಮ್ಮ ಕಣ್ಣುಗಳನ್ನು ಕಿರಿದುಗೊಳಿಸಿ ವಿನಂತಿಸಿದರು, ನಮ್ಮ ಕಾಲೇಜಿನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕೃಪಾನಿಧಿ(ಹೆಸರು ಬದಲಾಯಿಸಿದೆ). ಹಣೆಯ ಮೇಲೆ ಢಾಳಾಗಿ ವಿಭೂತಿ, ಕುಂಕುಮ ಇಟ್ಟುಕೊಂಡಿದ್ದು ಈಗಷ್ಟೇ ಪೂಜೆ ಮುಗಿಸಿ ಬಂದವರಂತೆ ಕಾಣುತ್ತಿದ್ದರು ಆತ. ತನ್ನ ತುಸು ಸ್ಥೂಲ ದೇಹ, ಹಿಂಜರಿಕೆಯುತ ನಡೆನುಡಿ ಹೊಂದಿದ್ದ ವಿನಯವಂತ ವ್ಯಕ್ತಿ ; ಒಳ್ಳೆ ಕೆಲಸಗಾರನೆಂದು ಹೆಸರು ಪಡೆದಿದ್ದರು ಆತ. ಪಾಪ, ಈಗ ಮಗನ ಭವಿಷ್ಯಕ್ಕಾಗಿ ಚಿಂತಿತರಾಗಿದ್ದರು.

“ಹಾಗೆ ಹೇಳಿಮಾಡಿ ಪಾಸು ಮಾಡ್ಸೋದು, ಶಿಫಾರಸು ಮಾಡೋದು ಇವೆಲ್ಲ ಸರಿಯಾದ ದಾರಿ ಅಲ್ಲಪ್ಪ. ಒಂದ್ಕೆಲ್ಸ ಮಾಡಿ, ನಿಮ್ ಮಗನ್ನ ನಾಳೆ ಕಾಲೇಜಿಗೆ ಕರ್‍ಕೊಂಡು ಬನ್ನಿ. ಯಾಕೆ ಕನ್ನಡದಲ್ಲಿ ನಪಾಸಾದ ಅಂತ ನೋಡೋಣ ಅಂದೆ. “ಆಯ್ತು ಮೇಡಂ, ನಾಳೆ ಕರ್‍ಕೊಂಬರ್‍ತೀನಿ ನಿಮ್ಮ ಹತ್ರ ಎಂದರು ಆತ.

`ನೋಡಿ ಮೇಡಂ, ಇವ್ನೇ ನನ್ನ ಮಗ ಮಾರನೇ ದಿನ ಕೃಪಾನಿಧಿ ಹೇಳಿದಾಗ ನೋಡಿದೆ. ನನ್ನೆದುರಿಗೆ ನಿಂತಿದ್ದ ಆ ಹುಡುಗ ದೀಪಕ್(ಹೆಸರು ಬದಲಾಯಿಸಿದೆ). ಎತ್ತರಕ್ಕೆ ಕರಿಮರದ ವಿಗ್ರಹದಂತೆ ಇದ್ದ. ಕುಸ್ತಿಪಟುವಿನ ಮೈಕಟ್ಟು. ಈಗ ತಾನೆ ಯೌವನಕ್ಕೆ ಕಾಲಿಟ್ಟಿದ್ದರಿಂದ ಮುಗ್ಧತೆ, ಹುರುಪು, ತುಸು ಪ್ರತಿಭಟನೆ ಎಲ್ಲವೂ ಕಾಣುತ್ತಿದ್ದವು ಆ ಕಣ್ಣುಗಳಲ್ಲಿ. ವಾಣಿಜ್ಯ ವ್ಯಾಸಂಗಧಾರೆಯನ್ನು ಆರಿಸಿಕೊಂಡು ಪಿಯುಸಿ ಮಾಡಿದ್ದ ಹುಡುಗ, ಕನ್ನಡದಲ್ಲಿ ಮಾತ್ರ ನಪಾಸಾಗಿದ್ದ. ಉಳಿದ ಎಲ್ಲ ವಿಷಯಗಳಲ್ಲೂ ಐವತ್ತು, ಅರವತ್ತು, ಎಪ್ಪತ್ತು ಹೀಗೆಲ್ಲ ಅಂಕ ಗಳಿಸಿದ್ದ. ಮುಂದೆ ತನ್ನದೇ ಆದ ಗರಡಿ ಮನೆ(ಈ ಕಾಲದ ಪದ ಜಿಮ್)ಯನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದ. ಅವನ ಮನೆ ಮಾತು ತಮಿಳು, ಸುತ್ತ ಮುತ್ತ ಹಿಂದಿ, ಉರ್ದು ಮಾತಾಡುತ್ತಿದ್ದ ಜನರ ಮನೆಗಳು, ಶಾಲೆ ಕಾಲೇಜಿನಲ್ಲಿ ಕನ್ನಡ ಭಾಷೆಯದು ಏನು ಪರಿಸ್ಥಿತಿ ಇತ್ತೋ ಏನೋ …… ಒಟ್ಟಿನಲ್ಲಿ ಪದವಿಪೂರ್ವ ಪರೀಕ್ಷೆಯಲ್ಲಿ ಕನ್ನಡದಲ್ಲಿ ೧೦೦ಕ್ಕೆ ೯ ಅಂಕ ತಗೊಂಡು ಈಗ ಪೆಚ್ಚು ಮುಖ ಹಾಕಿಕೊಂಡು ನಿಂತಿದ್ದ. ಮೂಲತಃ ಬುದ್ಧಿವಂತ ಹಾಗೂ ಜೀವನೋತ್ಸಾಹಿಯಂತೆ ಕಾಣುತ್ತಿದ್ದ ಈ ಹುಡುಗನ ಕನ್ನಡಕಷ್ಟ ನೋಡಿ ನನಗೆ ಬೇಸರವಾಯಿತು. ಏನಾದರೂ ಮಾಡಬೇಕಲ್ಲ ಅನ್ನಿಸಿತು.

ಸರಿ. `ತನ್ನ ಹೆಸರು, ತನ್ನ ಮನೆ ಎಲ್ಲಿದೆ, ತಾನು ಏನು ಓದುತ್ತಿದ್ದೇನೆ, ಈಗ ಯಾವ ಪರೀಕ್ಷೆ ಕಟ್ಟಿದ್ದೇನೆ … ಇಂತಹ ತೀರಾ ಪ್ರಾಥಮಿಕ ವಿವರಗಳನ್ನು ಬರಿ ಅಂತ ಅವನ ಕೈಗೆ ಒಂದು ಹಾಳೆ ಕೊಟ್ಟೆ. `ನನು, ಕಾನದ, ಮಾರನಿ, ಪರಿಕ್‌ಸ, ಬಗಲೂರು ……. ಹೀಗೆ ಪ್ರತಿ ಪದದಲ್ಲೂ ತಪ್ಪು ತಪ್ಪು ಅಕ್ಷರ ಬರೆದ ಅವನಿಗೆ ತನ್ನ ಹೆಸರನ್ನೇ ಕನ್ನಡದಲ್ಲಿ ಬರೆಯಲು ಬರಲಿಲ್ಲ! ಇಂತಹ ಶೋಚನೀಯ ಸ್ಥಿತಿ! ಒಂದು ಕ್ಷಣ ನನಗೂ ಏನು ಮಾಡುವುದೋ ತೋಚಲಿಲ್ಲ. ಇನ್ನು ಇಪ್ಪತ್ತು ದಿನದಲ್ಲಿ ಮತ್ತೆ ಪಿಯುಸಿ ಕನ್ನಡ ಪರೀಕ್ಷೆ ಇದೆ. ತನ್ನ ಹೆಸರನ್ನೇ ಬರೆಯಲು ಬರದ ಈ ಹುಡುಗ ಇಷ್ಟು ಕಡಿಮೆ ಸಮಯದಲ್ಲಿ ಓದಿ ಪದವಿಪೂರ್ವ ಹಂತದ ಪರೀಕ್ಷೆ ಪಾಸಾಗುವುದುಂಟೆ!? ಭಗವಂತಾ….! ಆದರೆ, ಒಬ್ಬ ಅಧ್ಯಾಪಕಿಯಾಗಿ ಮತ್ತು ಭಯಗೊಂಡಿದ್ದ ಅವನ ತಂದೆಗೆ ಏನಾದರೂ ಸಮಾಧಾನ ಹೇಳಬೇಕಿದ್ದವಳಾಗಿ ನಾನು ನನ್ನ ಆತಂಕ, ಅನುಮಾನಗಳನ್ನು ತೋರಿಸುವ ಹಾಗಿರಲಿಲ್ಲ. ಏನಾದರಾಗಲಿ, ಒಂದು ಪ್ರಯತ್ನ ಮಾಡಿಯೇಬಿಡುವುದೆಂದು ತೀರ್ಮಾನಿಸಿ, ಮಾರನೆಯ ದಿನ ತನ್ನ ಕನ್ನಡ ಪಠ್ಯಪುಸ್ತಕ, ಬರೆಯಲು ಒಂದು ಖಾಲಿ ಹಾಳೆಯ ಪುಸ್ತಕ, ಜೊತೆಗೆ ಅಕ್ಷರಗಳನ್ನು ಪರಿಚಯ ಮಾಡಿಸುವ ಮಗ್ಗಿಪುಸ್ತಕ ತರಲು ದೀಪಕ್‌ಗೆ ಹೇಳಿದೆ. ಅವನ ತಂದೆಗೆ “ಕೈಲಾದ್ದು ಮಾಡೋಣ, ಚಿಂತೆ ಮಾಡ್ಬೇಡಿ ಎಂದು ಹೇಳಿ, ಅವರಿಬ್ಬರನ್ನೂ ಬೀಳ್ಕೊಂಡೆ.

ನನಗೆ ಪರಿಚಯವಿದ್ದ ಲೇಖಕರು ಮತ್ತು ಪದವಿಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ಎಚ್.ಎಸ್.ಸತ್ಯನಾರಾಯಣ ಅವರಿಗೆ ದೂರವಾಣಿ ಕರೆ ಮಾಡಿ ಈ ಪರಿಸ್ಥಿತಿಯನ್ನು ವಿವರಿಸಿ, ಅವರ ಸಲಹೆ ಕೇಳಿದೆ. ಅವರು ಪರೀಕ್ಷಾ ತಯಾರಿಯ ಬಗ್ಗೆ ತಾವು ತಯಾರಿಸಿದ್ದ ದೃಶ್ಯಚಿತ್ರ ಕಳಿಸಿದರು, ಮತ್ತು, `ಒಂದು ಅಂಕ-ಎರಡು ಅಂಕಗಳ ಪ್ರಶ್ನೆಗಳು, ಪತ್ರ ಲೇಖನ, ಪ್ರಬಂಧ ಲೇಖನ ಮುಂತಾದ ಸುಲಭವಾಗಿ ಅಂಕ ಗಳಿಸಬಹುದಾದ ಪ್ರಶ್ನೆಗಳಿಗೆ ಉತ್ತರ ಬರೆಸಿರಿ ಎಂಬ ಸಲಹೆ ಕೊಟ್ಟರು. ಅದರಂತೆ ದೀಪಕನಿಗೆ ಪಾಠ ಶುರು ಮಾಡಿದೆ. ದಿನಾಲೂ ಒಂದು ಗಂಟೆ ಮಟ್ಟಿಗೆ ಅವನನ್ನು ನಮ್ಮ ವಿಭಾಗಕ್ಕೆ ಕರೆಸಿ ಅಕ್ಷರ ತಿದ್ದಲು ಕೊಡುವುದು, ಪಾಠ ಓದಿಸುವುದು ಇದನ್ನೆಲ್ಲ ಮಾಡಲಾರಂಭಿಸಿದೆ. ಆ ಹುಡುಗನೂ ಪಾಪ ನಿಯಮಿತವಾಗಿ ಬಂದು ಹೇಳಿದ್ದನ್ನು ಓದಿ ಬರೆದು ಮಾಡುತ್ತಿದ್ದ. ಆದರೆ ನನಗಿದ್ದ ಸಮಯದ ಅಭಾವ ಮತ್ತು ಧಾವಿಸಿ ಬರುತ್ತಿದ್ದ ಅವನ ಕನ್ನಡ ಪರೀಕ್ಷೆಗಳನ್ನು ನೆನೆದಾಗ ಇಷ್ಟು ಪ್ರಯತ್ನ ಸಾಲುವುದಿಲ್ಲ ಅನ್ನಿಸಿತು. ಜೊತೆಗೆ ತಾನಾಗಿ ತಾನು ಕನ್ನಡ ಬರೆಯುವುದರಲ್ಲಿ ದೀಪಕ್‌ನಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿರಲಿಲ್ಲ. ದೀರ್ಘಾಕ್ಷರ, ಒತ್ತಕ್ಷರಗಳ ಬರವಣಿಗೆಯು ಅವನಿಗೆ ವಿಪರೀತ ಕಷ್ಟ ಕೊಡುವಂತೆ ಕಾಣಿಸುತ್ತಿತ್ತು. ನಮ್ಮ ಪ್ರಯತ್ನಕ್ಕೆ ಇನ್ನಷ್ಟು ಇಂಬು ಸಿಗಲಿ ಎಂಬ ದೃಷ್ಟಿಯಿಂದ ದೀಪಕ್‌ನ ಮನೆಗೆ ಹತ್ತಿರವಿದ್ದ ಕನ್ನಡ ಅಧ್ಯಾಪಕರೊಬ್ಬರ ಬಳಿ ಅವನನ್ನು ಕಳಿಸಿ ಹೆಚ್ಚಿನ ಪಾಠ ಮಾಡಿಸಿದೆವು. ಇದಕ್ಕೆಲ್ಲ ಕೃಪಾನಿಧಿ ಸಹಕರಿಸಿದರು. ಅಂತೂ ಇಂತೂ ನಮ್ಮ ಕೈಲಾದಷ್ಟು ಓದಿಸಿ, ಬರೆಸಿ ಪರೀಕ್ಷೆ ಬರೆಯಲು ಅವನನ್ನು ಕಳಿಸಿದೆವು. `ಪರೀಕ್ಷೆಯಲ್ಲಿ ಹೇಗೆ ಮಾಡಿದೆ ದೀಪಕ್? ಅಂದಾಗ, `ಅದು ಬರೆದೆ ಮ್ಯಾಮ್, ಇದು ಬರೆದೆ ಮ್ಯಾಮ್ ಎಂದು ಉತ್ಸಾಹದಿಂದ ಹೇಳಿದ ಅವನ ಹುರುಪು ನೋಡುವಾಗ, ಗೆದ್ದುಬಿಡುತ್ತಾನೇನೋ ಎಂಬ ಭರವಸೆ ನನ್ನಲ್ಲಿ ಮೂಡಿತು. ಆದರೆ ಅಯ್ಯೋ…..ಫಲಿತಾಂಶ ಬಂದಾಗ ನಿರಾಸೆ ಕಾದಿತ್ತು. ದೀಪಕ್ ಕನ್ನಡದಲ್ಲಿ ೨೦ ಅಂಕ ಪಡೆದು ಮತ್ತೆ ನಪಾಸಾಗಿದ್ದ! ನನಗೆ ತೀರಾ ಬೇಸರವಾಯಿತು. ಏನೇನು ಸಾಹಸ ಮಾಡಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲವಲ್ಲ ಅನ್ನಿಸಿ ಮನಸ್ಸು ಕುಗ್ಗಿತು. ಪೆಚ್ಚುಮುಖದ ಕೃಪಾನಿಧಿಯನ್ನಂತೂ ನೋಡುವುದೇ ಕಷ್ಟವಾಯಿತು. ಒಂದು ಮೂರು ನಾಲ್ಕು ದಿನವಂತೂ ನನಗೆ ಏನು ಮಾಡುವುದು ಎಂದೇ ತೋಚಲಿಲ್ಲ.

`ಸೋಲು ಬಂದಾಗ ಹೆದರಿ ಕೂರಬಾರದಲ್ಲವೇ? ಮರಳಿ ಯತ್ನವ ಮಾಡು ಎಂದು ವಿದ್ಯಾರ್ಥಿಗಳಿಗೆ ಹೇಳುವ ನಾವು ಸಹ ಆ ಮಾತನ್ನು ಪಾಲಿಸಬೇಕಲ್ಲವೇ? ಅನ್ನಿಸಿ, ಕೃಪಾನಿಧಿಗೆ “ಚಿಂತೆ ಮಾಡ್ಬೇಡಿ. ನಿಮ್ಮ ಮಗ ಮುಂಚಿಗಿಂತ ಕನ್ನಡದಲ್ಲಿ ಈಗ ಉತ್ತಮ ಆಗಿದಾನೆ. ಮತ್ತೆ ಅವನನ್ನು ಪರೀಕ್ಷೆ ಕಟ್ಟಿಸೋಣ, ಈ ಸಲ ಖಂಡಿತ ಪಾಸಾಗ್ತಾನೆ ಎಂಬ ಭರವಸೆ ನಂಗಿದೆ ಅಂದೆ. ಸಮಾಧಾನದ ವಿಷಯವೆಂದರೆ ಆತ ಸ್ವಲ್ಪವೂ ಬೇಸರಿಸದೆ ತಕ್ಷಣ ಒಪ್ಪಿದರು. ಮತ್ತೆ ನಾವು ದೀಪಕನ ಕನ್ನಡಯಾತ್ರೆಯನ್ನು ಪ್ರಾರಂಭಿಸಿದೆವು. ಪರೀಕ್ಷೆಗೆ ಇನ್ನು ಮೂರು ತಿಂಗಳು ಸಮಯ ಇತ್ತು. ಈ ಸಲವಂತೂ ಒಬ್ಬ ಕನ್ನಡ ಅತಿಥಿ ಉಪನ್ಯಾಸಕರ ಸಹಾಯವನ್ನು ಸಹ ತೆಗೆದುಕೊಂಡು(ಅವರಿಗೆ ಸಂಭಾವನೆ ನೀಡಲು ಕೃಪಾನಿಧಿ ಸಂತೋಷದಿಂದ ಒಪ್ಪಿಕೊಂಡರು), ಇನ್ನಷ್ಟು ಹುಮ್ಮಸ್ಸಿನಿಂದ ದೀಪಕನಿಗೆ ಕನ್ನಡ ಕಲಿಸಲು ಪ್ರಾರಂಭಿಸಿದೆವು. ಈ ಸಲ ಹುಡುಗ ಉತ್ತೀರ್ಣನಾಗುತ್ತಾನೆ ಎಂಬ ಭರವಸೆ ನಮಗೆಲ್ಲರಿಗೂ ಇತ್ತು.

ಬದುಕಿನ ರೀತಿಯೇ ವಿಚಿತ್ರ ನೋಡಿ. ದೀಪಕ್‌ನ ಅದೃಷ್ಟ ಅನ್ನಬೇಕೋ ಏನೋ, ಆ ಸಲ ಮಧ್ಯಂತರದ ಪದವಿಪೂರ್ವ ಮರುಪರೀಕ್ಷೆ ಕಟ್ಟಿದ್ದ ಮಕ್ಕಳನ್ನೆಲ್ಲ, ಪರೀಕ್ಷೆ ಬರೆಯದೆಯೇ `ಕೊರೋನಾ ಪಾಸ್ ಮಾಡಿಬಿಟ್ಟರು! ಅಂತೂ ನಮ್ಮ ದೀಪಕಕುವರ ಪದವಿಪೂರ್ವ ಹಂತ ದಾಟಿಯೇಬಿಟ್ಟ!

ಮುಂದೆ ಅವನು ಸರ್ಕಾರಿ ಕಾಲೇಜೊಂದಕ್ಕೆ ಬಿ.ಕಾಂ. ಪದವಿ ಓದಲು ಸೇರಿದ್ದು ಮತ್ತು ಪದವಿಯಲ್ಲಿ ಕನ್ನಡ ಕಷ್ಟ ಅನ್ನಿಸಿಯೋ ಏನೋ ಹಿಂದಿ ಭಾಷೆ ತೆಗೆದುಕೊಂಡು ಓದುತ್ತಾ, ಒಟ್ಟಿನಲ್ಲಿ ಕಾಲೇಜಿನ ಉತ್ತಮ ವಿದ್ಯಾರ್ಥಿ ಅನ್ನಿಸಿಕೊಂಡದ್ದು ಈ ಪ್ರಸಂಗವು ಸುಖಾಂತ್ಯಗೊಂಡಿದ್ದನ್ನು ಸೂಚಿಸುತ್ತದೆ. ಕನ್ನಡ ಫಲ ಸಿಗದಿದ್ದರೂ ಕೊರೋನಾ ಬೆಂಬಲ ಸಿಕ್ಕಿ ಒಬ್ಬ ಹುಡುಗನ ವಿದ್ಯಾಭ್ಯಾಸದ ದಾರಿ ಸುಗಮಗೊಂಡ ಪ್ರಸಂಗವಿದು!