ಗೆಳತಿಯೊಬ್ಬರು ಒಂದು ದಿನ ಹೀಗೇ ವಾಟ್ಯಾಪ್ಪಿನಲ್ಲಿ `ಹಳ್ಳಿ ಗಡಿಯಾರ ಒಳ್ಳೆ ಆಹಾರ ಎಂಬ ವಾಕ್ಯ ಕಳಿಸಿ `ಈ ಒಗಟು ಬಿಡಿಸುತ್ತೀರಾ? ಎಂದು ಕೇಳಿದರು. `ತಮಾಷೆಗೆ ಎಂದು ಕೂಡ ಪಾಪ ಸೇರಿಸಿದ್ದರು. ಸರಿ, ತಲೆಗೆ ಹುಳ ಬಿಟ್ಟಂತೆ ಆಗಿ ದಿನವೆಲ್ಲ ಯೋಚನೆ. ಏನಿರಬಹುದು, ಏನಿರಬಹುದು, ಎಂದು ಯೋಚಿಸುತ್ತಲೇ ಇದ್ದೆ. ಗಡಿಯಾರ ಅಂದರೆ ಕಾಲಕಾಲಕ್ಕೆ ಹೂವೋ, ಹಣ್ಣೋ ಬಿಡುವ ಗಿಡ ಇರಬೇಕು. ಅಣಬೆ, ಬಿದಿರು, ಸೂರ್ಯಕಾಂತಿ, ಎಂದೆಲ್ಲ ಊಹಿಸಿದೆ. ಬರೆದು ಕಳಿಸಿದೆ. ಅವರು `ಅಲ್ಲ, `ಅಲ್ಲ ಎನ್ನುತ್ತಿದ್ದರು. ಅಯ್ಯೋ, ನನ್ನ ಜ್ಞಾನ ಈ ವಿಷಯದಲ್ಲಿ ತೀರಾ ಕಡಿಮೆ ಇದೆಯಲ್ಲ ಅಂತ ನನಗೆ ಅನ್ನಿಸುತ್ತಿತ್ತು. ಅದೂ ಇದೂ ಗಿಡದ ಹೆಸರು ಕಳಿಸಿ ಪರದಾಡುತ್ತಿದ್ದ ನನ್ನನ್ನು ನೋಡಿ ಅವರಿಗೆ ಒಂದು ಅನುಮಾನ ಬಂದಿರಬೇಕು. `ನೀವು ಇದನ್ನು ಬಳಸಲ್ಲ ಅನ್ಸುತ್ತೆ ಅಂದರು. ಛಕ್ಕನೆ ಹೊಳೆಯತು. ಕೋಳಿ! ಬೆಳಿಗ್ಗೆ ಅದು ತಾನೇ ಕೊಕ್ಕೋಕ್ಕೋ ಎಂದು ಎಚ್ಚರಗಂಟೆ(ಅಲಾರ್‍ಮ್) ಹೊಡೆದಂತೆ ಕೂಗುವುದು! `ಕೋಳಿ ಎಂದು ಬರೆದು ಕಳಿಸಿದೆ. ಗೆಳತಿ `ಹೌದು, ಇದು ಸರಿಯುತ್ತರ ಅಂದರು. `ನೀವು ಊಹಿಸಿದ್ದು ಸರಿ, ನಾನೊಂದು ಪುಳಿಚಾರು ಪಾರ್ಟಿ ಎಂದು ನಕ್ಕೆ, ಅವರೂ ನಕ್ಕರು. ನಮಗೆ ಬೇಗ ಹೊಳೆಯುವ ಪದಗಳು ಕೂಡ ನಮ್ಮ ಜೀವನಶೈಲಿಯನ್ನು ಆಧರಿಸಿರುತ್ತವಲ್ಲ ಅನ್ನಿಸಿ ಆಶ್ಚರ್ಯವಾಯಿತು.