ಧೂಮಕೇತು – ಸೂರ್ಯನ ಆಕರ್ಷಣೆಗೊಳಪಟ್ಟು ಚಲಿಸುವ ಒಂದು ಆಕಾಶಕಾಯ. ಮಬ್ಬುಮಬ್ಬು ಅನಿಲದ ಮೋಡಗಳಿಂದ ಉಂಟಾಗಿರುವ ಇದರಲ್ಲಿ ಹೆಚ್ಚು ಪ್ರಕಾಶಮಾನವಾದ ಬೀಜಕೇಂದ್ರ ಮತ್ತು ಅಷ್ಟೇನೂ ಪ್ರಕಾಶಮಾನವಲ್ಲದ ಬಾಲ ಇರುತ್ತದೆ.
ಧೂಮಕೇತು ಬಿಂಬ – ಒಂದು ರೀತಿಯ ಬಿಂಬದೋಷ ಇದು. ಗೋಳಾಕಾರದ ಮಸೂರಗಳಲ್ಲಿ ಬೆಳಕು ಓರೆಯಾಗಿ ಬಿದ್ದಾಗ, ಬಿಂಬವು ಸಮಕಟ್ಟಿಲ್ಲದೆ ರೂಪುಗೊಳ್ಳುತ್ತದೆ. ಇಲ್ಲಿ ಒಂದು ಬಿಂದುವಿನ ಬಿಂಬವು ಧೂಮಕೇತುವಿನ ಆಕಾರದಲ್ಲಿರುವುದರಿಂದ ಇದನ್ನು ಧೂಮಕೇತು ಬಿಂಬ ಎನ್ನುತ್ತಾರೆ.
ಬಣ್ಣಯುತ ದೃಷ್ಟಿ – ಮನುಷ್ಯನ ಕಣ್ಣಿಗಿರುವ ಒಂದು ಸಾಮರ್ಥ್ಯ ಇದು. ಬೇರೆ ಬೇರೆ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಂತಹ ಸಾಮರ್ಥ್ಯ.
ಬಣ್ಣದ ದೂರದರ್ಶನ(ಟಿವಿ) – ಪರದೆಯೊಂದರ ಮೇಲೆ ಬಣ್ಣದ ಚಿತ್ರಗಳನ್ನು ಮೂಡಿಸುವ ವ್ಯವಸ್ಥೆ. ಕೆಂಪು, ಹಸುರು ಮತ್ತು ನೀಲಿ ಎಂಬ ಮೂಲಭೂತ ಬಣ್ಣಗಳನ್ನು ಹೊಂದಿರುವ ಬಿಂಬಗಳನ್ನು ಒಂದಾದ ಮೇಲೊಂದರಂತೆ ತುಂಬ ವೇಗದಲ್ಲಿ ಪ್ರಸಾರ ಮಾಡಿ ಎಲ್ಲ ಬಣ್ಣವುಳ್ಳ ಬಿಂಬವನ್ನು ರೂಪಿಸುವುದು.
ಬಣ್ಣಶಕ್ತಿ ಮಾಪಕ – ಯಾವುದೇ ಬಣ್ಣದ ತೀಕ್ಷ್ಣತೆಯನ್ನಾದರೂ ಮೂರು ಮೂಲಭೂತ ಬಣ್ಣಗಳ (ಕೆಂಪು, ಹಸುರು, ನೀಲಿ) ನೆಲೆಯಲ್ಲಿ(ಅಂದರೆ ಪ್ರತಿಯೊಂದರ ಪರಿಭಾಷೆಯಲ್ಲಿ) ನೀಡುವ ಒಂದು ಉಪಕರಣ.
ಕಲಿಲ – ಇದು ಒಂದು ರೀತಿಯ ಮಿಶ್ರಣ. ಒಂದು ವಸ್ತು ಮತ್ತು ಆ ವಸ್ತುವಿನೊಳಗೆ ಅದರ ಎಲ್ಲೆಡೆಗೂ ವ್ಯಾಪಿಸಿರುವ ಆದರೆ ಕರಗದ ಕಣಗಳ ರೂಪದಲ್ಲಿಯೇ ಉಳಿದಿರುವ ಇನ್ನೊಂದು ವಸ್ತು – ಇವುಗಳ ಮಿಶ್ರಣ ಇದು. ಉದಾಹರಣೆಗೆ ಹಾಲು. ಹಾಲಿನಲ್ಲಿ ಕೊಬ್ಬಿನ ಕಣಗಳು ಕರಗದ ಕಣಗಳಾಗಿಯೇ ಇರುತ್ತವೆ.
ಢಿಕ್ಕಿ(ಸಂಘರ್ಷ) – ಅಣುಗಳು, ಪರಮಾಣುಗಳು ಮುಂತಾದವು ಮುಖಾಮುಖಿಯಾದಾಗ ಅವುಗಳಲ್ಲಿ ಉಂಟಾಗುವ ಪರಸ್ಪರ ಕ್ರಿಯೆ.
ಬಣ್ಣ ಛಾಯಾಚಿತ್ರ ಕಲೆ – ಒಂದು ತೆಳುವಾದ ಪೊರೆ ಅಥವಾ ಕಾಗದದ ಮೇಲೆ ಬಣ್ಣವುಳ್ಲ ಬಿಂಬಗಳನ್ನು ಮೂಡಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು.
Like us!
Follow us!