ಸಂಪರ್ಕ ಅಂತಃ ಸಾಮರ್ಥ್ಯ-ಸಂಪರ್ಕದಲ್ಲಿರುವ ಎರಡು ಘನವಸ್ತುಗಳ ನಡುವೆ ಉಂಟಾಗುವ ಅಂತಃಸಾಮರ್ಥ್ಯ ವ್ಯತ್ಯಾಸ.
ಕಾನ್ಸ್ಟೆಂಟನ್ – ತಾಮ್ರ ಮತ್ತು ತವರಗಳ ಒಂದು ಮಿಶ್ರಲೋಹ. ಉಷ್ಣತೆಯು ಬದಲಾದಾಗ ಈ ಲೋಹದ ವಿದ್ಯುತ್ ನಿರೋಧಕತೆಯಲ್ಲಿ ತುಂಬ ಕಡಿಮೆ ವ್ಯತ್ಯಾಸ ಆಗುವುದರಿಂದ, ಇದನ್ನು ವಿದ್ಯುದುಷ್ಣತೆಯನ್ನು ಅಳೆಯುವ ಉಪಕರಣಗಳಲ್ಲಿ ಮತ್ತು ನಿಖರತಾ ರೆಸಿಸ್ಟರುಗಳಲ್ಲಿ ಬಳಸುತ್ತಾರೆ.
ಸ್ಥಿರಾಂಕ – ಬೇರೆ ಭೌತಿಕ ಸಂಗತಿಗಳು ಬದಲಾದರೂ ತಾನು ಬದಲಾಗದೆ ಉಳಿಯುವ ಒಂದು ಪರಿಮಾಣ ಅಥವಾ ಅಂಶ.
ನಿಯತ ಕ್ಷೇತ್ರ – ಶಕ್ತಿಯು ನಿಯತವಾಗಿರುವ ಭೌತಿಕ ವ್ಯವಸ್ಥೆಗಳ ಬಲಗಳನ್ನು ಸೂಚಿಸುವ ದಿಶಾಯುತ(ದಿಕ್ಕುಳ್ಳ) ಕ್ಷೇತ್ರಗಳು.
ದ್ರವ್ಯರಾಶಿ ಮತ್ತು ಶಕ್ತಿಯ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ವ್ಯವಸ್ಥೆಯಲ್ಲಿ ವಿಶ್ರಾಂತ ದ್ರವ್ಯರಾಶಿ ಶಕ್ತಿ+ಚಲನ ಶಕ್ತಿ+ಅಂತಃ ಸಾಮರ್ಥ್ಯಶಕ್ತಿ ಇವುಗಳ ಮೊತ್ತವು ಯಾವಾಗಲೂ ನಿಯತವಾಗಿರುತ್ತದೆ.
ಶಕ್ತಿಯ ನಿಯತತೆಯ ನಿಯಮ – ಈ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿ ಮಾಡಲೂ ಸಾಧ್ಯವಿಲ್ಲ, ನಾಶ ಮಾಡಲೂ ಸಾಧ್ಯವಿಲ್ಲ. ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅದನ್ನು ಪರಿವರ್ತಿಸಲು ಸಾಧ್ಯವಿದೆ.
ವಿದ್ಯುದಂಶದ ನಿಯತತೆ – ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿರುವ ಒಂದು ವ್ಯವಸ್ಥೆಯಲ್ಲಿರುವ ವಿದ್ಯುದಂಶವು ನಿಯತವಾಗಿರುತ್ತದೆ(ನಿಯತ = ಸ್ಥಿರ = ಎಂದೂ ಬದಲಾಗದ್ದು).