ಅಂಕಿ ಪ್ರದರ್ಶಕ ವೋಲ್ಟ್ ಮೀಟರು – ತಾನು ಅಳೆದಂತಹ ಮೌಲ್ಯಗಳನ್ನು ಅಂಕಿಗಳಲ್ಲಿ ಪ್ರದರ್ಶಿಸುವ ವೋಲ್ಟ್ ಮೀಟರು(ವೋಲ್ಟ್ ಮೀಟರನ್ನು ವಿದ್ಯುತ್ ಚಾಲಕ ಬಲವನ್ನು ಅಳೆಯಲು ಬಳಸುತ್ತಾರೆ).
ಅಂಕರೂಪಿ ಅಥವಾ ನಿರ್ದಿಷ್ಟಾಂಕ ವಿದ್ಯುನ್ಮಂಡಲ – ನಿರ್ದಿಷ್ಟ ಮೌಲ್ಯದ ವಿದ್ಯುತ್ ಚಾಲಕ ಶಕ್ತಿಗೆ ಸ್ಪಂದಿಸುವ ವಿದ್ಯುನ್ಮಂಡಲ.
ಚೆಲ್ಲಾಪಿಲ್ಲಿ ಚಲನೆ – ಒಂದು ವಸ್ತುವಿನಲ್ಲಿನ ಅಣುಗಳು ತಾಪದ ಕಾರಣದಿಂದ ಚೆಲ್ಲಾಪಿಲ್ಲಿಯಾಗಿ ಚಲಿಸುವುದು.
ಬೆಳಕಿನಲೆಯ ಹಬ್ಬುವಿಕೆ – ಬೆಳಕಿನ ಕಿರಣ ಪುಂಜವೊಂದು ಕಿರಿದಾದ ಕಿಂಡಿಯೊಂದರ ಮೂಲಕ ಹಾಯ್ದು ಪರದೆಯೊಂದರ ಮೇಲೆ ಬೀಳುವಂತೆ ಮಾಡಿದಾಗ, ಉಜ್ವಲವಾಗಿ ಮತ್ತು ಮಸುಕಾದ ಪರ್ಯಾಯ ಪಟ್ಟಿಗಳಾಗಿ ಹಬ್ಬುವ ವಿದ್ಯಮಾನ.
ರಾಟೆ ವ್ಯವಸ್ಥೆ – ಎರಡು ರಾಟೆಗಳು ಮತ್ತು ಕೊನೆಯಿಲ್ಲದ ಸರಪಣಿಯನ್ನು ಬಳಸಿಕೊಂಡು ಕೆಲಸ ಮಾಡುವ ಒಂದು ಯಾಂತ್ರಿಕ ವ್ಯವಸ್ಥೆ.
ಅವಾಹಕ – ತನ್ನೊಳಗೆ ವಿದ್ಯುತ್ತನ್ನು ಹರಿಯಲು ಬಿಡದ ವಸ್ತು.
ದ್ವಿವರ್ಣತೆ – ಟೌರ್ಮಲೈನ್ ತರಹದ ಕೆಲವು ಹರಳುಗಳಲ್ಲಿ ಕಾಣುವಂತಹ ಒಂದು ಗುಣ, ಬೆಳಕಿನ ಕೆಲವು ಕಿರಣಗಳನ್ನು ಹೀರಿಕೊಂಡು, ಇನ್ನು ಕೆಲವನ್ನು ತಮ್ಮ ಮೂಲಕ ಸಾಗಿಹೋಗಲು ಬಿಡುವಂತಹ ಗುಣ. ಇದರಿಂದಾಗಿ ಒಂದೇ ಹರಳಿನಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣ ಕಾಣುತ್ತದೆ.