ವಿದ್ಯುತೀಕೃತ – ಶಾಶ್ವತವಾಗಿ ವಿದ್ಯುತೀಕೃತಗೊಂಡ ಒಂದು ವಸ್ತು. ಇದರ ಒಂದು ತುದಿಯಲ್ಲಿ ಧನ ವಿದ್ಯುದಂಶ ಹಾಗೂ ಇನ್ನೊಂದು ತುದಿಯಲ್ಲಿ ಋಣ ವಿದ್ಯುದಂಶ ಇರುತ್ತದೆ.
ಸ್ಥಿತಿ ಸ್ಥಾಪಕತ್ವ – ಆಕಾರವನ್ನು ಕೆಡಿಸುವ/ಬದಲಾಯಿಸುವ ಪೀಡನೆಯನ್ನು ತೆಗೆದು ಹಾಕಿದಾಗ ತನ್ನ ಮೂಲ ಆಯಾಮಗಳನ್ನು ಮರಳಿ ಪಡೆಯುವ ಗುಣವೇ ಸ್ಥಿತಿ ಸ್ಥಾಪಕತ್ವ.
ವಿದ್ಯುತ್ ಸಾಮರ್ಥ್ಯ ವಿಲೋಮ – ವಿದ್ಯುತ್ ಸಾಮರ್ಥ್ಯದ ವಿಲೋಮ ಇದು. ಇದನ್ನು ವಿಲೋಮ ಫ್ಯಾರಡ್ ಗಳಲ್ಲಿ ಅಳೆಯುತ್ತಾರೆ.
ಹೊರ ಹರಿಯುವಿಕೆ – ಒಂದು ಸಣ್ಣ ಕಿಂಡಿಯ ಮೂಲಕ ಅನಿಲವೊಂದರ ಹೊರ ಹರಿಯುವಿಕೆ, ಹೊರ ಚೆಲ್ಲುವಿಕೆ.
ಸುಳಿರೂಪೀ ವಿದ್ಯುತ್ಪ್ರವಾಹ- ಕಾಂತಕ್ಷೇತ್ರಗಳು ಬದಲಾಗುತ್ತಿದ್ದಾಗ ವಿದ್ಯುತ್ ವಾಹಕಗಳಲ್ಲಿ ಪ್ರಚೋದನೆಗೊಳ್ಳುವ ವಿದ್ಯುತ್ಪ್ರವಾಹಗಳು. ಇವುಗಳಿಂದಾಗಿ ಆ ವಾಹಕಗಳ ತಾಪಮಾನ ಏರಿ ಉಪಯುಕ್ತ ಶಕ್ತಿಯು ನಷ್ಟವಾಗುತ್ತದೆ.
ಗ್ರಹಣ – ಒಂದು ಆಕಾಶಕಾಯದ ನೆರಳು ಇನ್ನೊಂದರ ಮೇಲೆ ಬೀಳುವುದು ಅಥವಾ ಒಂದು ಆಕಾಶಕಾಯದ ನೆರಳು ಇನ್ನೊಂದನ್ನು ಕಾಂತಿಗುಂದಿಸುವುದು.
ಪ್ರತಿಧ್ವನಿ – ಒಂದು ಗಟ್ಟಿ ಮೇಲ್ಮೈಯು ಶಬ್ಧದ ಅಲೆಗಳನ್ನು ಪ್ರತಿಫಲಿಸಿದಾಗ ಉಂಟಾಗುವ ಪರಿಣಾಮ.