ವಿದ್ಯುತ್ ವಿಭಜನೆ – ಒಂದು ವಿದ್ಯುತ್ವಾಹಕ ದ್ರಾವಕದ ಮೂಲಕ ವಿದ್ಯುತ್ತನ್ನು ಹರಿಸಿ ರಾಸಾಯನಿಕ ಕ್ರಿಯೆಯೊಂದನ್ನು ಅಲ್ಲಿ ತೊಡಗಿಸಿ, ಆ ಮೂಲಕ ಧನ ವಿದ್ಯುದಂಶ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಕ್ರಿಯೆ.
ವಿದ್ಯುತ್ ಪ್ರಕಾಶ – ಎಲೆಕ್ಟ್ರಾನುಗಳ ಹೊಡೆತದಿಂದ ತನ್ನ ಕಣಗಳು ಶಕ್ತಿಯನ್ನು ಹೀರಿಕೊಂಡು ಉದ್ರೇಕಿತ ಸ್ಥಿತಿಗೆ ಹೋದಾಗ ವಸ್ತುವೊಂದು ಹೊರಸೂಸುವ ಪ್ರಕಾಶ (ಬೆಳಕು).
ವಿದ್ಯುತ್ಮೂಲೀ ನಿರ್ಮಾಣ – ವಿದ್ಯುತ್ತನ್ನು ಬಳಸಿಕೊಂಡು ಲೋಹದ ಮೇಲೆ ಪದರ ಕಟ್ಟುವ, ತನ್ಮೂಲಕ ಸೂಕ್ಷ್ಮ ನಿರ್ಮಿತಿಗಳುಳ್ಳ ಲೋಹದ ವಸ್ತುಗಳನ್ನು ಅಥವಾ ವಸ್ತು ಭಾಗಗಳನ್ನು ನಿರ್ಮಿಸುವ ಒಂದು ವಿಧಾನ.
ಮೆದುಳುವಿದ್ಯುತ್ ನ ಜಾಡು ಹಿಡಿಯುವಿಕೆ ಅಥವಾ ಅದರ ಚಿತ್ರ – ಮೆದುಳಿನಲ್ಲಿ ನಡೆಯುವ ವಿದ್ಯುತ್ ಕ್ರಿಯೆಗಳ ಜಾಡು ಹಿಡಿಯುವ ಅಥವಾ ಅವುಗಳನ್ನು ಚಿತ್ರಿಸುವ ಕ್ರಿಯೆ.
ವಿದ್ಯುತ್ ಮಾಪಕ – ನೇರ ಮತ್ತು ಪರ್ಯಾಯ ಎರಡೂ ವಿದ್ಯುತ್ ಮಂಡಲಗಳಲ್ಲಿನ ವಿದ್ಯುತ್ ಅಂತಃಸಾಮರ್ಥ್ಯ ಅಥವಾ ವಿದ್ಯುತ್ ಬಲವನ್ನು ಅಳೆಯುವ ಒಂದು ಉಪಕರಣ.
ವಿದ್ಯುತ್ತೀಯ ಚಲನಶಾಸ್ತ್ರ – ಚಲನೆಯಲ್ಲಿರುವ ವಿದ್ಯುದಂಶಗಳು, ವಿದ್ಯುತ್ತೀಯ ಹಾಗೂ ಕಾಂತಕ್ಷೇತ್ರಗಳಿಂದ ಸೃಷ್ಟಿಯಾಗುವ ಬಲಗಳ ನಡುವಿನ ಸಂಬಂಧ ( ಮುಖ್ಯವಾಗಿ ವಿದ್ಯುಜ್ಜನಕ ಯಂತ್ರಗಳಿಗೆ ಸಂಬಂಧ ಪಟ್ಟಂತೆ) – ಈ ವಿಷಯಗಳ ಅಧ್ಯಯನ.
ವಿದ್ಯುದ್ವಾರದ ಅಂತಃಸಾಮರ್ಥ್ಯ – ಒಂದು ಲೋಹವು ತನ್ನನ್ನು ಸುತ್ತುವರೆದಿರುವ ದ್ರಾವಕಕ್ಕೆ ತನ್ನ ಎಲೆಕ್ಟ್ರಾನುಗಳನ್ನು ಕೊಟ್ಟುಬಿಡುವ ಪ್ರವೃತ್ತಿಯ ಅಳತೆ.
ವಿದ್ಯುತ್ತೀಯ ದ್ರವ ಶುದ್ಧೀಕರಣ – ನಿರ್ಲವಣೀಕರಣ ಅಥವಾ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸುವಂತೆ, ಉಪ್ಪಿರುವ ನೀರಿನಿಂದ ಶುದ್ಧ ನೀರನ್ನು ಪಡೆಯುವ ವಿಧಾನ.