ಅಧಿಚಕ್ರ – ಇದು ಒಂದು ಚಿಕ್ಕ ವೃತ್ತ/ಚಕ್ರ. ಇದರ ಕೇಂದ್ರವು ಒಂದು ಸ್ಥಳದಲ್ಲಿ ಸ್ಥಿರವಾಗಿಟ್ಟ ದೊಡ್ಡ ವೃತ್ತವೊಂದರ ಪರಿಧಿಯುದ್ದಕ್ಕೂ ಉರುಳುತ್ತದೆ.
ಎಪಿಸೆಂಟರ್ – ಭೂಕಂಪ ಅಧಿಕೇಂದ್ರ – ಒಂದು ಭೂಕಂಪಸ್ಥಳದ ಕೇಂದ್ರಗಮನ ಬಿಂದುವಿನ ರೇಖೆಯಲ್ಲೇ ಭೂಮಿಯ ಮೇಲ್ಮೈ ಮೇಲೆ ಇರುವ ಒಂದು ಬಿಂದು ಅಥವಾ ಅಣುಸ್ಫೋಟದ ಬಿಂದುವಿನ ರೇಖೆಯಲ್ಲೇ ಅದರ ಮೇಲೆ ಅಥವಾ ಕೆಳಗೆ ಇರುವ ಬಿಂದು.
ಎಫಿಮೆರಿಸ್ ಟೈಮ್ – ಖಗೋಳ ಪಂಚಾಂಗ ಸಮಯ – ಭೂಮಿ, ಚಂದ್ರ ಮತ್ತು ಗ್ರಹಗಳ ಕಕ್ಷಾ ಚಲನೆಯಿಂದ ಅಳೆಯುವಂತಹ ಸಮಯ.
ಎಮಿಸಿವ್ ಪವರ್ – ಒಂದು ಸೆಕೆಂಡಿಗೆ ವಸ್ತುವಿನ ಏಕಘಟಕ ವಿಸ್ತೀರ್ಣ ಅಳತೆಯ ಮೇಲ್ಮೈಯು ಹೊರಸೂಸುವ ಒಟ್ಟು ಶಕ್ತಿ.
ಎಮಿಷನ್ ಸ್ಪೆಕ್ಟ್ರಮ್ - ಹೊರಸೂಸುವಿಕೆಯ ವರ್ಣಪಟಲ – ಬೆಳಕಿನ ಆಕರವೊಂದರಿಂದ ಹೊರ ಬರುತ್ತಿರುವ ಬೆಳಕನ್ನು ಅದು ಬರುತ್ತಿದ್ದಂತೆಯೇ ವರ್ಣಪಟಲ ದರ್ಶಕ
( ಸ್ಪೆಕ್ಟ್ರೋಸ್ಕೋಪ್)ದಿಂದ ಪರಿಶೀಲಿಸಿದಾಗ ಕಂಡುಬರುವ ವರ್ಣಪಟಲ.
ಎಮೆನೇಷನ್ – ಜನ್ಮಿತ ಅಥವಾ ಜನಿತ – ರೇಡಾನ್ ನ ಕೆಲವು ಸಮರೂಪಿಗಳಿಗೆ ಮುಂಚೆ ಇಟ್ಟಿದ್ದ ಹೆಸರು. ಇವುಗಳ ಜನಕ ರೇಡಿಯಂ. ಈ ಮೂಲವಸ್ತುವಿನ ಆಲ್ಫಾ ವಿಘಟನೆಯಿಂದ ಈ ಸಮರೂಪಿಗಳು ಜನಿಸುತ್ತವೆ.
ಎಲಿಪ್ಟಿಕಲ್ ಪೋಲರೈಸೇಷನ್ – ಇದು ವಿದ್ಯುತ್ ಕಾಂತೀಯ ವಿಕಿರಣದ ಒಂದು ರೀತಿಯ ಧ್ರುವೀಕರಣ. ಒಟ್ಟಿಗೆ ಸಾಗುತ್ತಿರುವ ಆದರೆ 90 ಡಿಗ್ರಿಗಳ ಗತಿವ್ಯತ್ಯಾಸವುಳ್ಳ ಮತ್ತು ಸಮಾನವಲ್ಲದ ಅಲೆಯೆತ್ತರ ಹೊಂದಿರುವ ಎರಡು ಮೇಲ್ಮೈ ಧ್ರುವೀಕೃತ ವಿಕಿರಣಗಳನ್ನು ಒಳಗೊಂಡದ್ದು ಎಂದು ನಾವಿದನ್ನು ಪರಿಗಣಿಸಬಹುದು.
ಎಲಿಮೆಂಟ್ಸ್, ಮ್ಯಾಗ್ನೆಟಿಕ್ – ಕಾಂತೀಯ ಪರಿಮಾಣಗಳು – ಯಾವುದೇ ಒಂದು ಸ್ಥಳಬಿಂದುವಿನಲ್ಲಿ ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿರೂಪಿಸಿ ನಿರ್ಧರಿಸುವ ಮೂರು ಪರಿಮಾಣಗಳು. ಅವೆಂದರೆ, 1. ಕಾಂತೀಯ ಬಾಗು, 2. ಇಳಿಜಾರಿನ ಕೋನ, 3. ಅಡ್ಡರೇಖೆಯ ತೀಕ್ಷ್ಣತೆ.