ಫೋರ್ಸ್ಡ್ ಆಸ್ಸಿಲೇಷನ್ – ಬಲವಂತದ ಆಂದೋಲನ – ಒಂದು ವಸ್ತು ಅಥವಾ ವ್ಯವಸ್ಥೆಯ ಸಹಜ ಆವರ್ತನದ್ದಲ್ಲದ ಆಂದೋಲನ. ಬಲವಂತದ ಆಂದೋಲನವನ್ನು ನಿಯತವಾದ ಬಾಹ್ಯ ಬಲದಿಂದ ಪ್ರೇರಿಸಬೇಕಾಗುತ್ತದೆ.
ಫೋರ್ಸ್ಡ್ ಕನ್ವೆಕ್ಷನ್ – ಬಲವಂತದ ಉಷ್ಣವರ್ಗಾವಣೆ – ಬಿಸಿಯಾಗಿರುವ ದ್ರವವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ರೇಚಕ ( ಪಂಪು) ಅಥವಾ ಪಂಖಾದಿಂದ ತಳ್ಳಿ ಬಲವಂತವಾಗಿ ವರ್ಗಾಯಿಸುವ ಕ್ರಿಯೆ.
ಫೋರ್ಸ್ – ಬಲ – ನಿಷ್ಕ್ರಿಯ ವಸ್ತುವೊಂದರ ದ್ರವ್ಯವೇಗವನ್ನು ( ಮೊಮೆಂಟಮ್ ಅನ್ನು) ಬದಲಾಯಿಸುವ ಮಾಡುಗ ಇದು. ಬಲವು ದ್ರವ್ಯವೇಗದ ಹೆಚ್ಚುವಿಕೆಯ ಗತಿಗೆ ಸಮಾನುಪಾತದಲ್ಲಿರುತ್ತದೆ.
ಫೊರ್ಬಿಡನ್ ಬ್ಯಾಂಡ್ – ನಿಷಿದ್ಧ ಪಟ್ಟಿ – ಒಂದು ಘನವಸ್ತುವಿನ ಹರಳಿನಲ್ಲಿ ಯಾವ ಎಲೆಕ್ಟ್ರಾನು ಸಹ ಪ್ರವೇಶಿಸದ/ತನ್ನದಾಗಿಸದ ಶಕ್ತಿ ಪಟ್ಟಿ ಇದು. ಶಕ್ತಿಪಟ್ಟಿಗಳ ಚಿತ್ರಗಳಲ್ಲಿ ಇವು ಖಾಲಿಜಾಗಗಳಾಗಿ ಕಂಡು ಬರುತ್ತವೆ.
ಫುಟ್ – ಅಡಿ : ಫುಟ್- ಪೌಂಡ್- ಸೆಕೆಂಡ್ ( ಎಫ್. ಪಿ. ಎಸ್) ಮೂಲಮಾನ ವ್ಯವಸ್ಥೆಯಲ್ಲಿನ ಉದ್ದದ ಮೂಲಮಾನ. ಒಂದು ಗಜದ ( ಯಾರ್ಡ್ ) ಮೂರನೇ ಒಂದು ಭಾಗ.
ಫೋಕಲ್ ಪ್ಲೇನ್ – ಸಂಗಮ ಮೇಲ್ಮೈ – ಒಂದು ಮಸೂರ ಅಥವಾ ಕನ್ನಡಿಯ ಅಕ್ಷಕ್ಕೆ ಲಂಬವಾಗಿರುವ ಹಾಗೂ ಅದರ ಸಂಗಮ ಬಿಂದುವಿನ ಮೂಲಕ ಹಾಯ್ದುಹೋಗುವ ಮೇಲ್ಮೈ.
ಫೋಕಲ್ ಲೆಂಗ್ತ್ – ಸಂಗಮ ದೂರ – ಒಂದು ಮಸೂರ ಅಥವಾ ಕನ್ನಡಿಯು ಬೆಳಕಿನ ಸಮಾಂತರ ಪುಂಜವೊಂದನ್ನು ಒಂದೇ ಬಿಂದುವಿಗೆ ಸೇರಿಸಿ ತರುವುದರ ದೂರದ ಅಳತೆ ಇದು.
ಫ್ರೆಸ್ನೆಲ್ ಲೆನ್ಸ್ – ಫ್ರೆಸ್ನೆಲ್ ಮಸೂರ – ಒಂದು ರೀತಿಯ ಮಸೂರ ಇದು. ಇದರ ಒಂದು ಮೇಲ್ಮೈಯನ್ನು ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿರುತ್ತಾರೆ. ಇದರಿಂದಾಗಿ ಈ ಮಸೂರದಿಂದ ಇನ್ನೂ ದಪ್ಪ, ಭಾರ ಹಾಗೂ ದುಬಾರಿಯಾದ ಸಾಂಪ್ರದಾಯಿಕ ಮಸೂರದ ಮೂಲಕ ಆಗುವಂತಹ ಬೆಳಕಿನ ವಕ್ರೀಭವನ ಉಂಟಾಗುತ್ತದೆ.
ಫ್ರೆಸ್ನೆಲ್ಸ್ ಡಿಫ್ರ್ಯಾಕ್ಷನ್ – ಫ್ರಸ್ನೆಲ್ ಹಬ್ಬುವಿಕೆ – ಇದು ಒಂದು ರೀತಿಯ (ಬೆಳಕಿನಲೆಯ) ಹಬ್ಬುವಿಕೆ. ಇದರಲ್ಲಿನ ಅಲೆಮುಖವು ಸಮತಲವಾಗಿರುವುದಿಲ್ಲ, ಬಾಗಿರುತ್ತದೆ.