ಫಂಡಮೆಂಟಲ್ ಯೂನಿಟ್ಸ್ – ಮೂಲಭೂತ( ಮೂಲಾಧಾರ) ಮೂಲಮಾನಗಳು – ಉದ್ದ, ದ್ರವ್ಯರಾಶಿ ಮತ್ತು ಸಮಯದ ಮೂಲಮಾನಗಳು. ಇವು ಬಹುತೇಕ ಮೂಲಮಾನ ವ್ಯವಸ್ಥೆಗಳ ಆಧಾರಸ್ತಂಭಗಳಾಗಿವೆ. ಬಹು ಪ್ರಚಲಿತವಾಗಿರುವ ಎಸ್.ಐ. ಮೂಲಮಾನ ವ್ಯವಸ್ಥೆ ( ಸಿಸ್ಟಮೆ ಇಂಟರ್ ನ್ಯಾಷನಲ್) ಯಲ್ಲಿರುವ ಮೂಲಭೂತ ಮೂಲಮಾನಗಳೆಂದರೆ ಮೀಟರ್, ಕಿಲೋಗ್ರಾಂ ಮತ್ತು ಸೆಕೆಂಡ್.
ಫಂಡಮೆಂಟಲ್ ಪಾರ್ಟಿಕಲ್ಸ್ – ಮೂಲಭೂತ ಕಣಗಳು( ಮೂಲ ಕಣಗಳು) – ಕಣಭೌತಶಾಸ್ತ್ರದಲ್ಲಿ ನಿರೂಪಿಸುವ ಪ್ರಕಾರ ಮೂಲಭೂತ ಕಣಗಳು ಅಂದರೆ ಪರಮಾಣುಗಳ ಒಳಗಿರುವ, ಹಾಗೂ ಬೇರೆ ಯಾವುದೇ ಕಣಗಳ ಸಂಯೋಜನೆಯಿಂದ ಉಂಟಾಗಿರದ ಕಣಗಳು.
ಫಂಡಮೆಂಟಲ್ ಕಾನ್ಸ್ಟೆಂಟ್ಸ್ (ಯೂನಿವರ್ಸಲ್ ಕಾನ್ಸ್ಟೆಂಟ್ಸ್) – ಮೂಲಭೂತ ಸ್ಥಿರಾಂಕಗಳು ( ಸಾರ್ವತ್ರಿಕ ಸ್ಥಿರಾಂಕಗಳು) – ಯಾವುದೇ ಗೊತ್ತಾದ ಸನ್ನಿವೇಶದಲ್ಲಿಯಾದರೂ ಎಂದೂ ಬದಲಾಗದೆಯೇ ಉಳಿಯುವ ಪರಿಮಾಣಗಳು. ಉದಾಹರಣೆಗೆ ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗ ಮತ್ತು ಎಲೆಕ್ಟ್ರಾನಿನ ವಿದ್ಯುದಂಶ.
ಫಂಕ್ಷನ್ – ಗಣಿತ ಕ್ರಿಯೆ – ಒಂದು ಚರಾಂಕವನ್ನು ಇನ್ನೊಂದು ಚರಾಂಕ ಅಥವಾ ಇನ್ನು ಕೆಲವು ಬೇರೆ ಚರಾಂಕಗಳೊಂದಿಗೆ ಜೋಡಿಸುವ ಯಾವುದಾದರೂ ಗಣಿತ ಕ್ರಿಯೆ ಅಥವಾ ಕಾರ್ಯವಿಧಾನ.
ಫುಲ್ ವೇವ್ ರೆಕ್ಟಿಫೈಯರ್ – ಪೂರ್ಣ ಅಲೆ ಪರಿವರ್ತಕ – ಪರ್ಯಾಯ ವಿದ್ಯುತ್ತಿನ ಋಣಾತ್ಮಕ ಅರ್ಧ ಅಲೆಯನ್ನು ಧನಾತ್ಮಕ ಅರ್ಧ ಅಲೆಯಾಗಿ ಪರಿವರ್ತಿಸುವ ಒಂದು ಪರಿವರ್ತಕ. ಇದರಿಂದಾಗಿ ಆಂದೋಲನದ ಎರಡೂ ಅರ್ಧಗಳು ಕೂಡಿ ಏಕದಿಕ್ಕಿನ ವಿದ್ಯುತ್ತನ್ನು ನೀಡುವುದಕ್ಕೆ ಸಹಾಯವಾಗುತ್ತದೆ.
ಫ್ಯುಯೆಲ್ ಸೆಲ್ – ಇಂಧನ ಕೋಶ – ಇಂಧನವು ನೇರವಾಗಿ ವಿದ್ಯುಚ್ಛಕ್ತಿಯಾಗಿ ಪರಿವರ್ತನೆ ಗೊಳ್ಳುವ ಒಂದು ಕೋಶ.
ಫ್ಯುಯೆಲ್ – ಇಂಧನ – ಒಂದು ಕುಲುಮೆಯಲ್ಲಿ ಅಥವಾ ತಾಪಯಂತ್ರದಲ್ಲಿ ಉತ್ಕರ್ಷಣೆಗೆ ( oxidation) ಒಳಗಾಗಿ ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಪರಿವರ್ತನೆಗೊಂಡು ಉಪಯುಕ್ತವಾದ ತಾಪ ಅಥವಾ ಶಕ್ತಿಯನ್ನು ಬಿಡುಗಡೆ ಮಾಡುವ ವಸ್ತು.