ಇಂಡೆಕ್ಸ್ ಎರರ್( ಝೀರೋ ಎರರ್) – ಸೂಚ್ಯಾಂಕ ದೋಷ ಅಥವಾ ಶೂನ್ಯ ದೋಷ – ಅಳೆಯುವ ಉಪಕರಣವೊಂದರಲ್ಲಿ ಕಂಡುಬರುವ ಒಂದು ಅಳತೆಮಾನದ ದೋಷ ಇದು. ಇದರಲ್ಲಿ ಏನಾಗುತ್ತದೆಂದರೆ ಉಪಕರಣವು ಸೊನ್ನೆ ನಮೂದನ್ನು ತೋರಿಸಬೇಕಾದ ಕಡೆ ಈ ನಮೂದನ್ನು ತೋರಿಸುತ್ತದೆ.
ಇನ್‌ಡೆಟರ್ಮಿನೆನ್ಸಿ ಪ್ರಿನ್ಸಿಪ್ಲ್( ಅನ್ಸರ್ಟೈನಿಟಿ ಪ್ರಿನ್ಸಿಪ್ಲ್) – ಅನಿರ್ದಿಷ್ಟತಾ ಸಿದ್ಧಾಂತ ( ಹೈಸನ್ ಬರ್ಗ್ ರ ಅನಿಶ್ಚಿತತೆಯ ಸಿದ್ಧಾಂತ ) – ಒಂದು ಕಣದ ಸ್ಥಾನಬಿಂದು ಹಾಗೂ ದ್ರವ್ಯವೇಗವನ್ನು ಏಕಕಾಲಕ್ಕೆ ನಿಖರವಾಗಿ ಅರಿಯಲು ಸಾಧ್ಯ ಇಲ್ಲ ಎಂದು ಹೇಳುವ ಸಿದ್ಧಾಂತ ಇದು. ಇದನ್ನು 1927 ರಲ್ಲಿ ಇದನ್ನು ವರ್ನರ್ ಹೈಸನ್ಬರ್ಗ್( 1901-1976) ರು ಕಂಡುಹಿಡಿದರು.
ಇಂಡೆಕ್ಸ್ – ಸೂಚ್ಯಂಕ – ಆಯಾಮರಹಿತವಾದ ಒಂದು ಅಂಕಿ ಪರಿಮಾಣ. ಇದನ್ನು ಭೌತಶಾಸ್ತ್ರೀಯ ಪರಿಣಾಮವೊಂದರ ಪರಿಮಾಣವನ್ನು ಸೂಚಿಸಲು ಬಳಸುತ್ತಾರೆ. ಉದಾಹರಣೆಗೆ ಒಂದು ವಸ್ತುವಿನ ವಕ್ರೀಭವನ ಸೂಚ್ಯಂಕ.
ಇನ್ಕ್ಯುಬೇಟರ್ – ಕಾವು ಪೆಟ್ಟಿಗೆ – ತಾಪಸ್ಥಾಪಕವನ್ನು ಉಪಯೋಗಿಸಿಕೊಂಡು ಸ್ಥಿರವಾದ ಆಂತರಿಕ ಉಷ್ಣತೆಯನ್ನು ಕಾಪಾಡಿಕೊಂಡು ಬರುವ ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸ ಮಾಡಿರುವ ಒಂದು ಪೆಟ್ಟಿಗೆ. ಕೋಳಿಮರಿಗಳನ್ನು ಬೆಳೆಸಲು, ಅವಧಿಗೆ ಮುನ್ನ ಹುಟ್ಟಿದ ಎಳೆಶಿಶುಗಳನ್ನು ಸುರಕ್ಷಿತವಾಗಿ ಬೆಳೆಸಲು ಮತ್ತು ಬ್ಯಾಕ್ಟೀರಿಯಾಶಾಸ್ತ್ರದಲ್ಲಿ ಇದನ್ಬು ಬಳಸುತ್ತಾರೆ.
ಇನ್ಕೋಹೆರೆಂಟ್ ಹೋಲೋಗ್ರಫಿ – ಸುಸಂಬದ್ಧವಲ್ಲದ ಪೂರ್ಣಚಿತ್ರಗ್ರಹಣ – ಪ್ರಾರಂಭದಲ್ಲಿ ತೆಗೆಯಲಾಗುತ್ತಿದ್ದ ಸುಸಂಬದ್ಧವಲ್ಲದ ಪೂರ್ಣಚಿತ್ರಗಳು. ಇವುಗಳನ್ನು ಸಾಂಪ್ರದಾಯಿಕ ಛಾಯಾಚಿತ್ರಗಳನ್ನು ಹಾಗೂ ಸುಸಂಬದ್ಧವಲ್ಲದ ದೃಶ್ಯವಿಜ್ಞಾನದ ವ್ಯವಸ್ಥೆಗಳನ್ನು ಬಳಸಿ ತೆಗೆಯುತ್ತಿದ್ದರು.
ಇನ್ಕ್ಲಿನೇಷನ್( ಆಂಗಲ್ ಆಫ್ ಡಿಪ್) – ಇಳಿಜಾರು ( ಇಳಿಜಾರು ಕೋನ) – ಭೂಮಿಯ ಕಾಂತಕ್ಷೇತ್ರಕ್ಕೂ ಮತ್ತು ಅದರ ಮೇಲ್ಮೈಯಲ್ಲಿನ ಅಡ್ಡರೇಖೆಗೂ, ಬಿಂದುವೊಂದರಲ್ಲಿ ಉಂಟಾಗುವ ಕೋನ. ಸಮಯದೊಂದಿಗೆ ಇದು ತುಸು ಬದಲಾಗುತ್ತದೆ.
ಇನ್ಕಾಂಡೆಸೆನ್ಸ್- ಪ್ರಜ್ವಲ ಬೆಳಕು – ತುಂಬ ಹೆಚ್ಚು ತಾಪಮಾನ ಹೊಂದಿರುವ ಮೇಲ್ಮೈಯಿಂದ ಸೂಸುವಂತಹ ಬೆಳಕು. ನಾವು ಮನೆಗಳಲ್ಲಿ ಬಳಸುವ, ಟಂಗ್ಸ್ಟನ್ ತಂತುವನ್ನು ಹೊಂದಿರುವ ವಿದ್ಯುತ್ ದೀಪವು ಇದಕ್ಕೆ ಉದಾಹರಣೆಯಾಗಿದೆ.
Like us!
Follow us!