ದೈನಂದಿನ ಮಾತುಕತೆಗಳು ಕೆಲವು ಸಲ ನಮಗೆ ತಿಳಿದಿರದ ಹೊಸ ಪದಗಳ ಅಥವಾ ಕನ್ನಡ ಭಾಷೆಯ ಕೆಲವು ಹೊಸ ಆಯಾಮಗಳ ಪರಿಚಯ ಮಾಡಿಸುತ್ತವೆ. ಮೊನ್ನೆ ನಡೆದ ಒಂದು ಪ್ರಸಂಗವಿದು.

ನನಗೆ ಮನೆಯಲ್ಲಿ ಕೆಲಸದ ಒತ್ತಡ ಹೆಚ್ಚಿದ್ದಾಗ ಅಥವಾ ಪುಸ್ತಕಗಳನ್ನು ಜೋಡಿಸುವ ಅಗತ್ಯ ಇದ್ದಾಗ, ನನಗೆ ಈ ನಡುವೆ ಪರಿಚಿತರಾದ ಒಬ್ಬ ಮಹಿಳೆಯನ್ನು ಸಹಾಯಕ್ಕೆ ಕರೆಯುತ್ತೇನೆ ನಾನು. ಸುಮಾರು ಮೂವತ್ತೈದು-ಮೂವತ್ತಾರು ವಯಸ್ಸಿನ ನಗೆಮೊಗದ ಹೆಣ್ಣುಮಗಳು ಆಕೆ. ಚಾಮರಾಜನಗರದಲ್ಲಿ ಹುಟ್ಟಿ ಬೆಳೆದು ಈಗ ಬೆಂಗಳೂರಿನಲ್ಲಿ ತನ್ನ ಗಂಡ ಹಾಗೂ ಶಾಲೆಗೆ ಹೋಗುವ ಎರಡು ಮಕ್ಕಳ ಜೊತೆ ಬದುಕುತ್ತಾ, ಮನೆ ಖರ್ಚು ತೂಗಿಸಲು ನಾಲ್ಕಾರು ಮನೆಗಳಲ್ಲಿ ತೊಳೆಯುವ-ಬಳಿಯುವ ಕೆಲಸ ಮಾಡುವ ಪರಿಶ್ರಮೀ ವ್ಯಕ್ತಿ. ಪಾಪ ಅನಕ್ಷರಸ್ಥೆ, ಆದರೆ ಹೇಳಿದ ಕೆಲಸವನ್ನು ಅರ್ಥ ಮಾಡಿಕೊಂಡು ಅಚ್ಚುಕಟ್ಟಾಗಿ ಮಾಡುವ ಬುದ್ಧಿವಂತೆ. ಕಳೆದ ಭಾನುವಾರ ಒಂದಿಷ್ಟು ಪುಸ್ತಕ ಎತ್ತಿಟ್ಟುಕೊಳ್ಳುವ ಕೆಲಸ ಇತ್ತೆಂದು ಆಕೆಯನ್ನು ಬರಹೇಳಿದ್ದೆ. ತಾವು ಕೆಲಸ ಮಾಡುತ್ತಿದ್ದ ಬೇರೆ ಮನೆಗಳಲ್ಲಿ ಕೆಲಸ ಮಾಡಿ ಆಕೆ ಮಧ್ಯಾಹ್ನ ಸುಮಾರು ಒಂದೂವರೆಗೆ ಬಂದರು. ಊಟದ ಸಮಯವಾದ್ದರಿಂದ ಅವರಿಗೆ ಊಟ ಬಡಿಸಿದೆ.

ಊಟದಲ್ಲಿ ಸಾಂಬಾರನ್ನದ ನಂತರ ನಾನು ಆಕೆಗೆ ಅನ್ನ ಮೊಸರು ಬಡಿಸಿದಾಗ ಆಕೆ “ಸ್ವಲ್ಪ ರುಚಿ ಹಾಕ್ತೀರಾ ಅಮ್ಮ?’’ ಎಂದು ಕೇಳಿದರು. ಈ ವಾಕ್ಯಬಳಕೆಯನ್ನು ನಾನು ಮೊದಲ ಬಾರಿಗೆ ಕೇಳಿದ್ದರಿಂದ ತಕ್ಷಣ ನನಗೆ ತುಸು ಗಲಿಬಿಲಿಯಾದರೂ ಸಂದರ್ಭಾನುಸಾರವಾಗಿ ಅದನ್ನು ಅರ್ಥ ಮಾಡಿಕೊಂಡು “ರುಚಿ ಅಂದ್ರೆ ಉಪ್ಪಾ?’’ ಎಂಧು ಕೇಳಿದೆ. “ಹೌದಮ್ಮ, ಉಪ್ಪು. ನಮ್ಕಡೆ ಹೀಗೇ ಅನ್ನೋದು ಉಪ್ಪಿಗೆ’’ ಅಂದರು. ಓಹ್ ಅನ್ನಿಸಿತು ನನಗೆ.

ಭಾಷಾ ಶಾಸ್ತ್ರಜ್ಞರು ಭಾಷಿಕ ಸಮುದಾಯಗಳಲ್ಲಿನ ನಿಷೇಧಿತ ಪದಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಉದಾಹರಣೆಗೆ ಕನ್ನಡ ಭಾಷಿಕರಲ್ಲಿ “ಸಾವು, ಏಳು, ಹನ್ನೊಂದು, ನಾಗರಹಾವು ……… ಇಂಥ ಪದಗಳನ್ನು ಮಾತಿನಲ್ಲಿ ಬಳಸಬಾರದು, ಏಕೆಂದರೆ ಅವು ಅಶುಭ ಸೂಚಕ ಎಂಬ ಭಾವನೆ ಇದೆ’’ ಎಂದು ಗುರುತಿಸಲಾಗಿದೆ. ಎಲ್ಲ ಭಾಷಾ ಸಮುದಾಯಗಳಲ್ಲೂ ಹೀಗೆಯೇ ಕೆಲವು ನಿಷೇಧಿತ ಪದಗಳಿರುತ್ತವೆಯಂತೆ. ಕನ್ನಡ ಭಾಷೆಯಲ್ಲಿ ಉಪ್ಪು ಕೂಡ ಒಂದು ನಿಷೇಧಿತ ಪದ ಎಂದು ನನಗೆ ಗೊತ್ತಿತ್ತಾದರೂ ಅದಕ್ಕೆ ರುಚಿ ಎಂಬ ಸುಂದರ ಪರ್ಯಾಯ ಪದ ಇದೆ ಎಂಬುದು ಗೊತ್ತಿರಲಿಲ್ಲ. ನಮ್ಮ ಸೀದಾಸಾದಾ ಉಪ್ಪಿಗೆ ರುಚಿ ಎಂಬ ವಿಶೇಷ ನಾಮಧೇಯವೂ ಇದೆ ಎಂದು  `ಜಸ್ಟ್ ಮಾತ್‌ಮಾತಲ್ಲಿ’ ಗೊತ್ತಾಗುವುದು ಕನ್ನಡ ಪ್ರಿಯರ ಮಟ್ಟಿಗೆ ಒಂದು ಸ್ವರ‍್ಯಸ್ಯಕರ ಸಂಗತಿಯಲ್ಲವೇ?