ದಿನಬಳಕೆ ಮಾತಿನಲ್ಲಿ ಕನ್ನಡ ಪದಗಳನ್ನು ಬಳಸಬೇಕೆಂಬ ಇಚ್ಛೆಯುಳ್ಳವರಿಗೆ ಕಷ್ಟ ಕೊಡುವ ಪದಗಳಲ್ಲಿ ಇಂಜಿನಿಯರ್ ಎಂಬ ಪದ ಒಂದು. `ಅಭಿಯಂತರ’ ಎಂಬ ಪದವನ್ನು ಇಂಜಿನಿಯರ್ ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಬಳಸುತ್ತಾರೆ. ಸರ್ಕಾರಿ ಕಛೇರಿಗಳಲ್ಲೂ `ಕಾರ್ಯನಿರ್ವಾಹಕ ಆಭಿಯಂತರರು’ (ಎಕ್ಸಿಕ್ಯೂಟಿವ್ ಇಂಜಿನಿಯರ್) ಎಂಬ ಪದದ ಬಳಕೆಯನ್ನು ನಾವು ನೋಡಬಹುದು. ಆದರೆ ಸಾಮಾನ್ಯ ಮಾತುಗಳಲ್ಲಿ ಇಂಜಿನಿಯರ್, ಇಂಜಿನಿಯರಿಂಗ್ ಪದವೇ ಹೆಚ್ಚು ಚಾಲ್ತಿಯಲ್ಲಿರುವುದನ್ನು ನಾವು ಗಮನಿಸುತ್ತೇವೆ.

`ಅಭಿಯಂತರ’ ಪದದ ಅರ್ಥವೆಂದರೆ ಯಂತ್ರಕ್ಕೆ ಹತ್ತಿರವಾದವನು ಎಂದು ಅರ್ಥ. ಅಭಿ+ಯಂತರ( ಯಂತ್ರ) ಎಂದು ಇದನ್ನು ಬಿಡಿಸಬಹುದು. ಆದರೆ ಈ ಪದದ ಅರ್ಥ ಗೊತ್ತಿದ್ದು ಬಳಸುವವರು ತೀರಾ ಅಪರೂಪ, ಹೀಗಾಗಿ ಅಭಿಯಂತರ ಪದವು `ಅಯ್ಯೋ ನೋಡಿ, ಇಂಜಿನಿಯರ್ ಪದದ ಬದಲಾಗಿ ಕನ್ನಡ ಪದ ಬಳಸೋದು ಎಷ್ಟು ಕಷ್ಟ! ಅದಕ್ಕಿಂತ ಇಂಜಿನಿಯರ್ ಪದಾನೇ ಸುಲಭ ಅಲ್ವಾ?’ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ!

ಈ ಸನ್ನಿವೇಶದಲ್ಲಿ, ಯಂತ್ರಜ್ಞ ಎಂಬ ಪದ ಬಳಸಿದರೆ ಹೇಗೆ ಎಂಬ ಆಲೋಚನೆ ಬಂತು. ಈ ಪದದ ಅರ್ಥವೇನೆಂದರೆ ಯಂತ್ರಗಳ ಬಗ್ಗೆ ತಿಳಿದವನು ಎಂದು ಅರ್ಥ. ಇನ್ನು ಯಂತ್ರಕರ್ಮಿ ಎಂಬ ಪದವೊಂದಿದೆ. ಇದನ್ನು ಮೆಕ್ಯಾನಿಕ್ ಪದಕ್ಕೆ ಸಂವಾದಿಯಾಗಿ ಬಳಸುತ್ತಾರೆ.  

ಹೊಸಹೊಸ ಪದಗಳು ನಮ್ಮವು ಅನ್ನಿಸುವುದು ಜನ ಅವನ್ನು ವ್ಯಾಪಕವಾಗಿ ಬಳಸಿದಾಗ. ಕನ್ನಡಕ್ಕೆ ಹೊಸ ಹೊಸ ಪದಗಳು ಬರಲಿ, ಅದು ಇನ್ನಷ್ಟು ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದೇ ಎಲ್ಲ ಕನ್ನಡಾಭಿಮಾನಿಗಳ ಹಂಬಲ.