ನಮ್ಮ ಚಿತ್ರನಾಟ್ಯ ಫೌಂಡೇಶನ್ ಭರತನಾಟ್ಯ ಶಾಲೆಯ ಪುಟ್ಟ ಚಾರ್ವಿ ಹೇಳಿದ ಮಾತು ಇದು. ಮನೆಯಲ್ಲಿ ‌ಮಾರ್ವಾಡಿ ಭಾಷೆ ಮಾತಾಡುವ, ಬೆಣ್ಣೆ ಬೊಂಬೆಯ ಹಾಗೆ ಮುದ್ದಾಗಿರುವ, ಐದು ವರ್ಷ ವಯಸ್ಸಿನ ಮಗು ಅದು. ಕಳೆದ ಏಳೆಂಟು ತಿಂಗಳಿಂದ ನಮ್ಮಲ್ಲಿ ನಾಟ್ಯ ಕಲಿಯುತ್ತಿದೆ. 

       ಭರತನಾಟ್ಯದ ಪ್ರಾರಂಭದ ಹಂತದಲ್ಲಿ ಬರೀ ಅಡವು(ಹೆಜ್ಜೆ)ಗಳನ್ನು ಹೇಳಿಕೊಟ್ಟರೆ ಮಕ್ಕಳಿಗೆ ಬೇಸರ ಆಗಬಹುದೆಂದು ಪ್ರತಿ ತರಗತಿಯಲ್ಲೂ ಯಾವುದಾದರೊಂದು ಶಿಶುಗೀತೆಗೆ ಅವರಿಗೆ ನೃತ್ಯ ಹೇಳಿಕೊಡುವ ಅಭ್ಯಾಸ ನಮ್ಮದು. ಇದೇ ರೀತಿಯಲ್ಲಿ, ‘ಕನ್ನಡದ ಮಕ್ಕಳ ಸಾಹಿತ್ಯದ ರಾಜ ಮತ್ತು ರತ್ನ ಎಂದು ಹೆಸರಾದ'( ಬೊಳುವಾರು ಮಹಮ್ಮದ್ ಕುಂಞ ಅವರ ಮಾತು ಇದು) ಶ್ರೀ ಜಿ.ಪಿ.ರಾಜರತ್ನಂ ಅವರ ‘ನಾಯಿಮರಿ ನಾಯಿಮರಿ ತಿಂಡಿ ಬೇಕೇ?’ ಹಾಡಿಗೆ, ಕೆಲವು ದಿನಗಳ ಹಿಂದೆ ನಾನು ನೃತ್ಯ ಹೇಳಿಕೊಟ್ಟೆ. ಇದನ್ನು ಕಲಿತ ನಂತರ ಚಾರ್ವಿ ಪುಟ್ಟಿ ನಗುನಗುತ್ತ ಹೇಳಿದ ಮುಗ್ಧ ಮಾತು ‘ಐ ಲವ್ ದ ನಾಯಿಮರಿ ಸಾಂಗ್ ಮ್ಯಾಮ್’!. ಕನ್ನಡ ಬಾರದ ಆ ಮಗು ಆ ಇಡೀ ಹಾಡನ್ನು ಬಾಯಿಪಾಠ ಮಾಡಿ, ಹಾಡುತ್ತಾ ನರ್ತಿಸುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು, ಸಂತೋಷವೂ ಆಯಿತು.

ಅಂದರೆ ಈ‌ ಶಿಶುಗೀತೆಗಳ ಮೂಲಕ ಮಕ್ಕಳಿಗೆ ಕನ್ನಡ ಕಲಿಸುವುದು ಸುಲಭವಾಗುತ್ತಲ್ಲ ಅನ್ನಿಸಿತು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಶ್ರೀ ಜಿ.ಪಿ.ರಾಜರತ್ನಂರ ಕೊಡುಗೆ ನಿಜಕ್ಕೂ ಬಹುಮುಖಿಯಾದದ್ದು‌‌. ಪರಭಾಷಾ ಮಕ್ಕಳಿಗೆ ಕನ್ನಡ ಕಲಿಸುವಲ್ಲಿ ಅವರ ಶಿಶುಗೀತೆಗಳನ್ನು ಬಳಸಬಹುದೆಂಬ ಸಂಗತಿಯು ಎಲ್ಲ ಕನ್ನಡ ಪ್ರಿಯರಿಗೂ ಖುಷಿ ತರಬಹುದಲ್ಲವೇ?