ನನ್ನ ಮಗಳು ಓದುತ್ತಿರುವ ಮಣಿಪಾಲ(ಉಡುಪಿ ಜಿಲ್ಲೆ)ದ ಹೋಟಲೊಂದರಲ್ಲಿ ಹಾಕಿದ್ದ ಪ್ರಕಟಣಾ ಫಲಕದಲ್ಲಿ ನನ್ನ ಕಣ್ಣಿಗೆ ಬಿದ್ದ ವಾಕ್ಯ ಇದು – “ಬಿಸಿ Jalebiಯ Crispy ಬೈಟನ್ನು ಸವಿಯಿರಿ”. ಐದು ಪದಗಳಿರುವ ಕನ್ನಡ ವಾಕ್ಯ ಇದು. ಇದರಲ್ಲಿ ’ಬಿಸಿ’ ಮತ್ತು ‘ಸವಿಯಿರಿ’ ಎರಡೂ ಅಚ್ಚ ಕನ್ನಡದ ಪದಗಳು. ಇನ್ನು ಮೂರು ಪದಗಳಲ್ಲಿ ಎರಡು ಇಂಗ್ಲಿಷ್ ಭಾಷೆಯಲ್ಲಿಯೇ ಬರೆದ ಪದಗಳಾದರೆ( Jalebi, Crispy), ಬೈಟನ್ನು ಪದ bite ಎಂಬ ಇಂಗ್ಲಿಷ್ ಕ್ರಿಯಾಪದವನ್ನು ಕನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯವಾದ ‘ಅನ್ನು’ವನ್ನು ಸೇರಿಸಿ – ಕನ್ನಡೀಕರಿಸಿ ಅನ್ನಬಹುದೇ- ಬರೆಯಲಾಗಿದೆ! ಕನ್ನಡದ ಹೊಸ ರೂಪವೇ ಇದು? ಅಥವಾ ಜಾಹೀರಾತಿಗಾಗಿ ಬಳಸಿಕೊಂಡ ವ್ಯಾಪಾರೀ ಭಾಷಾ ತಂತ್ರವೇ?
ಗಮನಿಸಬೇಕಾದ ಅಂಶವೆಂದರೆ, ಕನ್ನಡ ಬಾರದವರಿಗೂ ಅಲ್ಲಿ ಗರಿಗರಿಯಾದ ಜಿಲೇಬಿ ಸಿಗುತ್ತೆ ಅನ್ನುವುದು ಅರ್ಥವಾಗುತ್ತೆ! ಸ್ಥಳೀಯರಿಗಿಂತ ವಿದ್ಯಾರ್ಥಿಗಳೇ ಹೆಚ್ಚಾಗಿರುವ, ಅದರಲ್ಲೂ ಕನ್ನಡ ಬಾರದವರೇ ಗರಿಷ್ಠ ಸಂಖ್ಯೆಯಲ್ಲಿರುವ ಮಣಿಪಾಲದಲ್ಲಿ ‘ತನ್ನ ಹೋಟಲಿಗೆ ಜನ ಬರಲಿ, ಜಿಲೇಬಿ ಕೊಳ್ಳಲಿ’ ಎಂಬ ಆಸೆಯಿಂದ ಆ ಹೋಟಲಿನ ಮಾಲಿಕರು ಈ ಜಾಹೀರಾತನ್ನು ಹೀಗೆ ಬರೆಸಿರಬಹುದಲ್ಲವೇ? ಹಿಂದಿ ಮಾತಾಡುವವರು ಬಳಸುವ ‘ಜಲೇಬಿ’, (ಗಮನಿಸಿ, ಕನ್ನಡದ ಜಿಲೇಬಿ ಅಲ್ಲ) ಯನ್ನು ಇಲ್ಲಿ ಬಳಸಿರುವುದೂ ವ್ಯಾಪಾರೀ ಉದ್ದೇಶದಿಂದಲೇ ಎಂದು ನಾವು ಧಾರಾಳವಾಗಿ ತೀರ್ಮಾನಿಸಬಹುದು ಅನ್ನಿಸುತ್ತೆ.
ಕೇವಲ ಮುದ್ರಿತ ಜಾಹೀರಾತುಗಳಲ್ಲಿ ಮಾತ್ರವಲ್ಲ, ವಿದ್ಯುನ್ಮಾನ ಮಾಧ್ಯಮದ ಜಾಹೀರಾತುಗಳಲ್ಲೂ ಹೀಗೆಯೇ ದಿಕ್ಸೂಚಿ ಪದಗಳನ್ನು (key words ಎಂಬ ಅರ್ಥದಲ್ಲಿ) ಇಂಗ್ಲಿಷ್ ಭಾಷೆಯಲ್ಲಿಟ್ಟು ಕ್ರಿಯಾ ಪದಗಳನ್ನು ಮಾತ್ರ ಕನ್ನಡದಲ್ಲಿಡುವ ವಾಕ್ಯಗಳನ್ನು ನಾವು ಗಮನಿಸಬಹುದು.
ಈ ಬೆಳವಣಿಗೆಯನ್ನು ವ್ಯಾಪಾರ ಯುಗದ ಸಹಜ ಭಾಷಾ ಬೆಳವಣಿಗೆ ಎಂದು ನೋಡಬೇಕೋ, ಉದ್ದೇಶಪೂರ್ವಕವಾದ ನುಡಿ ಮಿಶ್ರಣ ಎನ್ನಬೇಕೋ ಯೋಚಿಸುವಂತಾಗುತ್ತೆ. ಅಲ್ಲವೇ?