ಮೊನ್ನೆ ನಮ್ಮ ನಾಟ್ಯ ತರಗತಿಯಲ್ಲಿ ಐದು-ಆರು ವರ್ಷ ವಯಸ್ಸಿನ ಕೆಲವು ಪುಟ್ಟ ಮಕ್ಕಳಿಗೆ ಒಂದು ಶಿಶುನೃತ್ಯ ಹೇಳಿಕೊಡುತ್ತಿದ್ದೆ.
‘ಜಿಂಕೆ ಹೇಗೆ ಜಿಗಿಯುವುದು ಜಿಂಜಿಂಜಿಂಜಿಂ,
ನವಿಲು ಹೇಗೆ ನಲಿಯುವುದು ನಂನಂನಂನಂ
ಆನೆ ಹೇಗೆ ನಡೆಯುವುದು ಓ…ಓ….
ನಾನು ಮಾತ್ರ ನಗುತಲಿರುವೆ ಹ ಹ ಹ ಹ”
ಈ ನೃತ್ಯ ಸರಳ. ಆದರೆ ಈ ಅನುಕರಣ ಶಬ್ದಗಳಲ್ಲಿನ ನಾದ, ಮಾಧುರ್ಯ, ಸಂಗೀತ ಗುಣ ಮಕ್ಕಳಿಗೆ ತುಂಬ ಇಷ್ಟವಾದ ಹಾಗೆ ಕಂಡಿತು. ಜಿಂಜಿಂ, ನಂನಂ, ಓ ಓ, ಹಹ…ಮುಂತಾದ ಪದಗಳಿಗೆ ಅರ್ಥ ಇಲ್ಲದಿದ್ದರೂ ಅವುಗಳನ್ನು ರಾಗವಾಗಿ ಹೇಳಿದರೆ ಕಿವಿಗೆ, ಮನಸ್ಸಿಗೆ ಮುದ ಕೊಡುತ್ತವೆ. ಬೇಂದ್ರೆಯವರ “ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ, ಮಾತು ಮಾತು ಮಥಿಸಿ ಬಂತು ನಾದದ ನವನೀತ” ಸಾಲುಗಳು ನೆನಪಾದವು. ಈಗ ಈ ಪ್ರಾಣಿಶಬ್ದಗಳ ನೃತ್ಯ ನಮ್ಮ ಪುಟ್ಟ ನಾಟ್ಯ ವಿದ್ಯಾರ್ಥಿಗಳ ಮನ್ಪಸಂದ್ ನೃತ್ಯವಾಗಿಬಿಟ್ಟಿದೆ!
ಕನ್ನಡದ ಸೂಕ್ಷ್ಮತೆಗಳನ್ನು ಬೇಂದ್ರೆ ಅಜ್ಜ ಎಷ್ಟು ಚೆನ್ನಾಗಿ ಗ್ರಹಿಸಿದ್ದಾರಲ್ಲ ಅನ್ನಿಸಿತು.