ಸಂತೆಬೆನ್ನೂರು ಫೈಜ್ನಟ್ರಾಜ್  – ವಿವಿಧ ಕನ್ನಡ ಪತ್ರಿಕೆಗಳಲ್ಲಿ ಈ ಹೆಸರು ಓದಿದಾಗ ನನಗೆ ಕುತೂಹಲ ಮೂಡುತ್ತಿತ್ತು.‌ ಇದೆಂತಹ ಹೆಸರು? ಫೈಜ್ ಎಂಬ ಮುಸಲ್ಮಾನ ಹೆಸರು ಮತ್ತು ನಟರಾಜ್ ಎಂಬ ಹಿಂದೂ ಹೆಸರುಗಳು ಒಟ್ಟು ಸೇರಿದ್ದು ಹೇಗೆ? ಇದು ಹಿರಿಯರು ತಮ್ಮ ಮನೆಯ ಮಗುವಿಗೆ ಇಟ್ಟಿರಬಹುದಾದ ಹೆಸರೇ? ಅಥವಾ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಕ್ಕಳಿಗೆ ಈ  ರೀತಿಯ ಹೆಸರುಗಳನ್ನೇನಾದರೂ ಇಡುತ್ತಾರೆಯೇ?……ಹೀಗೆ ಕೆಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತಿದ್ದವು.

         ಈಚೆಗೆ ಒಂದು ದಿನ ಈ ಪ್ರಶ್ನೆಗೆ ಉತ್ತರ ದೊರಕುವ ಸಂದರ್ಭ ಬಂತು. ನನ್ನ ಆಪ್ತ ಸ್ನೇಹಿತೆ ವಸುಂಧರಾಳ ಜೀವನಸಂಗಾತಿ ಹಾಗೂ ನಿಡುಗಾಲದ  ನನ್ನ ಸಾಹಿತ್ಯ ಬಂಧುವಾದ ಸತ್ಯ ( ಶ್ರೀ  ಎಚ್.ಎಸ್.ಸತ್ಯನಾರಾಯಣ – ಪ್ರಸಿದ್ಧ ಲೇಖಕರು ) ಅವರು ಸುಮಾರು ಎರಡು ತಿಂಗಳ ಹಿಂದೆ ದೂರವಾಣಿ ಕರೆ ಮಾಡಿ, “ಮೀರಾ, ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಹೊಸ ಪ್ರಬಂಧ ಸಂಕಲನ ಬಿಡುಗಡೆಗೆ ತಯಾರಾಗಿದೆ, ಅದಕ್ಕೆ ಬೆನ್ನುಡಿ ಬರೀತೀರಾ?” ಎಂದು ಕೇಳಿದರು. “ಆಗಲಿ” ಎಂದ ನಾನು ಆ ಸಂದರ್ಭದಲ್ಲಿ ಈ ಕವಿಯ ಹೆಸರಿನ ಬಗೆಗೆ ನನ್ನಲ್ಲಿದ್ದ ಪ್ರಶ್ನೆಯನ್ನು ಸತ್ಯ ಅವರಲ್ಲಿ ಕೇಳಿದೆ. ” ಓಹ್, ಅದಾ? ತನ್ನ ಪರಮಾಪ್ತ ಸ್ನೇಹಿತ ತೀರಿಕೊಂಡಾಗ ಅವರ ಹೆಸರನ್ನು ಇವರು ತನ್ನ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ” ಅಂದರು. ಆ ಕ್ಷಣ ನನ್ನ ಮನಸ್ಸು ತುಂಬ ಆರ್ದ್ರವಾಯಿತು. ‘ಅಗಲಿದ ಸ್ನೇಹಿತನ ಬಗ್ಗೆ ಎಷ್ಟು ಪ್ರೀತಿ‌ ಇರಬೇಕು ಈ ಕವಿಗೆ! ಧರ್ಮ, ವಾಡಿಕೆಗಳ ಹಂಗನ್ನು ಮೀರಿ ತನ್ನ ಸ್ನೇಹಿತನ ಹೆಸರನ್ನು ಕಾವ್ಯನಾಮದ ಭಾಗವಾಗಿ ಮಾಡಿಕೊಂಡಿದ್ದಾರಲ್ಲ, ಇದಲ್ಲವೇ ಅಪ್ಪಟ ಸ್ನೇಹ ಅಂದರೆ!’ ಅನ್ನಿಸಿತು.‌ ಕನ್ನಡ ಅಕ್ಷರಲೋಕದಲ್ಲಿ ತನ್ನ ಪ್ರಿಯ ಸ್ನೇಹಿತನ ಹೆಸರನ್ನು ಅಮರಗೊಳಿಸಿಬಿಟ್ಟರಲ್ಲ ಈ ಕವಿ – ಎಂಬ ಚೇತೋಹಾರಿ, ಪ್ರಶಂಸಾ ಭಾವ ಮನಸ್ಸನ್ನು ಆವರಿಸಿತು. 

        ಬೆನ್ನುಡಿ ಬರೆದ ಸಂದರ್ಭದಿಂದ ಮೊದಲುಗೊಂಡು ಫೈಜ್ ಅವರ ಹತ್ತಿರ ಮಾತಾಡುತ್ತಾ ಹೋದಂತೆ, ಇವರು ಮನುಷ್ಯ ಸಂಬಂಧಗಳಿಗೆ ತುಂಬ ಬೆಲೆ ಕೊಡುವ ಅಪ್ಪಟ ಸ್ನೇಹಜೀವಿ ಎಂಬ ಭಾವನೆ ನನ್ನಲ್ಲಿ ಬಂತು.  ಪರಿಚಿತರಾದ ತಕ್ಷಣವೇ ನಿಡುಗಾಲದಿಂದ ತಮಗೆ ಗೊತ್ತಿರುವವರೇನೋ ಎಂಬಷ್ಟು ಆತ್ಮೀಯತೆಯಲ್ಲಿ, ಸರಳ, ಶುದ್ಧಾಂಗ ಆಪ್ತತೆಯಿಂದ ಮನುಷ್ಯರನ್ನು ಮಾತಾಡಿಸುವ, ಅವರೊಂದಿಗೆ ಅರ್ಥಪೂರ್ಣ ಸಂಪರ್ಕ ಇರಿಸಿಕೊಳ್ಳುವ ಫೈಜ್ ರ ಬಗ್ಗೆ ತುಂಬ ಸಂತೋಷ ಅನ್ನಿಸಿತು.‌ ನನ್ನ ಕುತೂಹಲ ಬುದ್ಧಿಯ ನಿಲ್ಲದ ಉಪಟಳದಿಂದಾಗಿ, ಹಳೆಯ ನೆನಪುಗಳನ್ನು ಕೆದರಿ ನೋಯಿಸುತ್ತೇನೇನೊ ಎಂದು ಅಳುಕುತ್ತಲೇ ಒಮ್ಮೆ ಅವರ ಹೆಸರಿನ ವೈಶಿಷ್ಟ್ಯದ ಬಗ್ಗೆ ಕೇಳಿದೆ.‌ ಆಗ ಅವರು, ‘”ನನ್ನ ಆಪ್ತ ಸ್ನೇಹಿತನಾಗಿದ್ದ ನಟರಾಜ.‌ ನಾನು ಬರೆದ ಕವಿತೆ, ಕಥೆಗಳನ್ನು ನಾನು ಸುಮ್ಮನೆ ಇಟ್ಟುಕೊಳ್ತಿದ್ರೆ ಅವನು ನನಗಿಂತ ಹೆಚ್ಚಾಗಿ ಅವುಗಳ ಬಗ್ಗೆ ಸಂಭ್ರಮ ಪಟ್ಟು ಬೇರೆ ಬೇರೆ ಪತ್ರಿಕೆಗಳಿಗೆ ಕಳಿಸ್ತಿದ್ದ.‌ ನಾನು ಕವಿಯಾಗಿ ಬೆಳೆಯುವಲ್ಲಿ ಅವನ ಪಾತ್ರ ತುಂಬ ಹೆಚ್ಚು. ‌ತನ್ನ ಇಪ್ಪತ್ತೈದನೇ ವಯಸ್ನಲ್ಲಿ ಅವ್ನು ಅಪಘಾತದಲ್ಲಿ ತೀರ್ಕೊಂಡ‌. ಅವನ ಮನೆಯೋರ ಜೊತೆಗೆ ಈಗ್ಲೂ ನಾನು ಸಂಪರ್ಕದಲ್ಲಿದೀನಿ” ಅಂದರು. 

       ಗೆಳೆಯರಿಬ್ಬರ ಪ್ರೀತಿ ಕಂಡು ನನ್ನ ಮನಸ್ಸು ಮೂಕವಾಯಿತು.‌ ಒಬ್ಬ ಗೆಳೆಯ ತನ್ನ ಗೆಳೆಯನೊಳಗಿರುವ ಕವಿಯ ಬಗ್ಗೆ ಅಭಿಮಾನ ತಳೆದು, ಆ ಕವಿಯನ್ನು ಹೊರಗೆ ಕರೆತಂದು ಲೋಕಕ್ಕೆ ಪರಿಚಯಿಸಿದ. ಪ್ರತಿಯಾಗಿ ಈ ಗೆಳೆಯ ವಿಧಿಯ ಕೈವಾಡದಿಂದಾಗಿ‌ ತನ್ನ ಮಿತ್ರನ‌ ಮೃಣ್ಮಯ ಶರೀರ ಮಣ್ಣಿಗೆ ಸೇರಿದರೂ ಅವನ‌ ಹೆಸರನ್ನು ತನ್ನ ಹೆಸರಿನ ಜೊತೆಗೆ ಸೇರಿಸಿ‌ ಅದನ್ನೇ ತನ್ನ  ಕಾವ್ಯನಾಮವಾಗಿಸಿ ತನ್ನ ಗೆಳೆಯನ ಹೆಸರನ್ನು ಅಮರವಾಗಿಸಿದ! ಇದಲ್ಲವೇ ಸ್ನೇಹವೆಂದರೆ!!?  ಇದಕ್ಕಾಗಿಯೇ ಅಲ್ಲವೇ ಕವಿ ಚೆನ್ನವೀರ ಕಣವಿಯವರು ಸ್ನೇಹ ಎಂಬುದು ‘ಉಪ್ಪಿಗಿಂತಲು ರುಚಿಯು, ತಾಯಿಗಿಂತಲು ಬಂಧು’ ಅಂದಿದ್ದು. ಧರ್ಮಗಳ ಹೆಸರು ಹೇಳಿಕೊಂಡು ಜನರನ್ನು ಒಡೆಯುವವರು ಎರಡು ಧರ್ಮಗಳ ಹೆಸರುಗಳು ಹೀಗೆ ಅವಿನಾಭಾವವಾಗಿ ಬೆರೆತಾಗ ಏನೆನ್ನುತ್ತಾರೆ? ನಿಜ ಹೇಳಬೇಕೆಂದರೆ ಹೀಗೇ ಅಲ್ಲವೇ ನಾವು ಮನುಷ್ಯರು ಬದುಕಬೇಕಾದದ್ದು? ಭೇದಗಳಳಿದು ಪ್ರೀತಿಯ ಭಾವಲೇಪನದಲ್ಲಿ ಅಖಂಡವಾಗಿ……

ಸಂತೆಬೆನ್ನೂರು ಪೈಜ್ನಟ್ರಾಜ್  … ನಿಜಕ್ಕೂ ನೀವು ಸ್ನೇಹಕ್ಕೊಂದು ದೀಪಸ್ತಂಭ.