ಪದವಿ ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ, ಆಗಷ್ಟೇ ಪದವಿಪೂರ್ವ ಹಂತವನ್ನು ದಾಟಿ ಬಂದಿರುವ ಮೊದಲ ವರ್ಷದ ಹಲವು ಪದವಿ ವಿದ್ಯಾರ್ಥಿಗಳಲ್ಲಿ, ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಮೂಡಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ಇದಕ್ಕೆ ಕೇವಲ ವಿದ್ಯಾರ್ಥಿಗಳು ಕಾರಣರಲ್ಲ. ಹತ್ತನೇ ತರಗತಿಯವರೆಗೆ ಕನ್ನಡವನ್ನು ಅತ್ಯಂತ ಇಷ್ಟದಿಂದ ಓದುವ ಅನೇಕ ವಿದ್ಯಾರ್ಥಿಗಳಿರುತ್ತಾರೆ. ಆದರೆ ಪದವಿಪೂರ್ವ ಹಂತಕ್ಕೆ ಬಂದಾಗ ವಿಷಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯು ‘ಕೋರ್ಸ್ ಸಬ್ಜೆಕ್ಟ್ಸ್’ ಮತ್ತು ‘ಲ್ಯಾಂಗ್ವೇಜಸ್’ ಎಂದು ವಿಭಾಗಿಸುವುದನ್ನು ಮತ್ತು ಇವುಗಳಲ್ಲಿ ಮೊದಲನೆಯವು ‘ಮುಖ್ಯ’ ಹಾಗೂ ಎರಡನೆಯವು ‘ಅಮುಖ್ಯ’ ಎಂದು ಪರಿಗಣಿಸುವುದನ್ನು ಅವರು ನೋಡುತ್ತಾರೆ, ಅನುಭವಿಸುತ್ತಾರೆ ಮತ್ತು ತಮಗೇ ಅರಿವಿಲ್ಲದೆ ಈ ದೋಷಪೂರಿತ ಮನಃಸ್ಥಿತಿಯ ಧಾರಕರೂ ಆಗಿಬಿಡುತ್ತಾರೆ. ಹೀಗಾಗಿ, ಪದವಿಪೂರ್ವ ಹಂತದ ಎರಡು ವರ್ಷಗಳನ್ನು ಪೂರೈಸುವಷ್ಟರಲ್ಲಿ ಅವರ ಕನ್ನಡ ಭಾಷಾಭಿವ್ಯಕ್ತಿ ದುರ್ಬಲಗೊಂಡಿರುತ್ತದೆ. ಎರಡೇ ಎರಡು ವಾಕ್ಯಗಳನ್ನೂ ಕೂಡ ಅಚ್ಚುಕಟ್ಟಾದ ಕನ್ನಡದಲ್ಲಿ ಮಾತಾಡಲು ಸಾಧ್ಯವಿಲ್ಲದ ಸ್ಥಿತಿಗೆ ಅವರು ತಲುಪಿರುತ್ತಾರೆ. ತಮ್ಮ ಬಾಲ್ಯಕಾಲದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಮಕ್ಕಳ ಮಟ್ಟಿಗಂತೂ ಈ ಮಾತು ಹೆಚ್ಚು ನಿಜ.
ಮೇಲಿನ ಸಮಸ್ಯೆಗೆ ಮುಖ್ಯ ಕಾರಣವೆಂದರೆ ನಾವು ಭಾಷೆಯನ್ನು ಕೇವಲ ಒಂದು ಉಪಕರಣ ಎಂದು ನೋಡುವುದು(tool). ‘ ಅಯ್ಯೋ, ಕನ್ನಡಾನೋ, ಇಂಗ್ಲೀಷೋ, ಕಂಗ್ಲೀಷೋ ಯಾವ್ದೋ ಒಂದು. ನಾವ್ ಏನ್ ಹೇಳ್ಬೇಕೋ ಅದನ್ನ ಹೇಳಿದ್ರೆ ಆಯ್ತು, ಲ್ಯಾಂಗ್ವೇಜ್ ಬಗ್ಗೆ ಯಾಕೆ ಜಾಸ್ತಿ ತಲೆ ಕೆಡಿಸ್ಕೋಬೇಕು!?’ ಇಂತಹ ಮನಃಸ್ಥಿತಿ ವಿದ್ಯಾರ್ಥಿಗಳಲ್ಲಿದ್ದರೆ ಅವರಿಗೆ ಯಾವ ಭಾಷೆಯ ಮೇಲೂ ಹಿಡಿತ ಬರುವುದಿಲ್ಲ.
ಹಾಗಾದರೆ ಭಾಷೆಯನ್ನು ಹೇಗೆ ನೋಡಬೇಕು? ವಿದ್ಯಾರ್ಥಿಗಳಿಗೆ ಭಾಷೆಯ ಮೇಲೆ ಹಿಡಿತ ಬರಲು ಏನು ಮಾಡಬೇಕು ಎಂದು ಯೋಚಿಸುವಾಗ, ಬಹುಶಃ ಭಾಷೆಯನ್ನು ಕೇವಲ ಒಂದು ಉಪಕರಣ ಎಂದು ನೋಡದೆ ನಮ್ಮ ವ್ಯಕ್ತಿತ್ವದ ಶಕ್ತಿಮೂಲ, ನಮ್ಮ ಪ್ರತಿಬಿಂಬ ಎಂದು ನೋಡಬೇಕೇನೋ. ನಮ್ಮ ಭಾಷೆಯ ಮಿತಿಯು ನಮ್ಮ ಲೋಕದ ಮಿತಿ ಎಂಬುದು ವಿದ್ವಾಂಸರ ವಿವೇಕದ ಮಾತು. ಈ ದೃಷ್ಟಿಯಿಂದ ಪದವಿ ತರಗತಿಯ ಭಾಷಾ ಅಧ್ಯಾಪಕರು ಮತ್ತು ಅವರ ವಿದ್ಯಾರ್ಥಿಗಳು ಕ್ರಮಿಸಬೇಕಾದ ದಾರಿ ಬಹು ಉದ್ದವಿದೆ.
Like us!
Follow us!