ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನನ್ನಂತಹ ಅಧ್ಯಾಪಕರಿಗೆ ಭಾಷೆಯ ವಿಚಾರದಲ್ಲಿ ಆಗಾಗ ನೆನಪಿನಲ್ಲಿ ಉಳಿಯುವಂತಹ ಅನುಭವಗಳಾಗುತ್ತವೆ. ಈಗ ನಾನು ವಿವರಿಸಹೊರಟಿರುವುದು ಅಂತಹದೇ ಒಂದು ಅನುಭವ.
ಒಂದು ದಿನ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಭಾಗವಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು, ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದ ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನೊಂದಿಗೆ ಮಾತಾಡುತ್ತಾ, ” ಪರೀಕ್ಷೆ ಏನೋ ಸುಲಭಾನೇ ಇತ್ತು ಮ್ಯಾಮ್, ಆದ್ರೆ ನಂಗೆ entertainment ಅನ್ನೋ ಪದಕ್ಕೆ ಕನ್ನಡದಲ್ಲಿ ಏನ್ ಬರೀಬೇಕು ಅಂತ ಗೊತ್ತೇ ಆಗ್ಲಿಲ್ಲ ಮ್ಯಾಮ್” ಅಂದಳು. ಹಾಗೆನ್ನುವಾಗ ಅವಳ ಮುಖ ಆತಂಕದಿಂದ ಕೂಡಿತ್ತು. ಮಾತೃಭಾಷೆ ಕನ್ನಡವಾಗಿದ್ದು ಆಂಗ್ಲ ಮಾಧ್ಯಮದಲ್ಲಿ ಓದಿದ ಹಾಗೂ ಮೇಲ್ಮಧ್ಯಮ ವರ್ಗಕ್ಕೆ ಸೇರಿದ, ವಿದ್ಯಾವಂತ ತಂದೆತಾಯಿಗಳಿದ್ದ ಮನೆಯ ಹುಡುಗಿ ಅವಳು. ಕರ್ನಾಟಕದ ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬಹುಮಟ್ಟಿಗೆ ಇಂಗ್ಲಿಷ್ ಬೆರೆತ ಕನ್ನಡವುಳ್ಳ ಪರಿಸರದಲ್ಲಿ ಬೆಳೆದ ಹುಡುಗಿ. ಕನ್ನಡ ಮಾತಾಡುವಾಗ ಅನಿವಾರ್ಯವಲ್ಲದಿದ್ದರೂ ಇಂಗ್ಲಿಷ್ ಭಾಷೆಯ ಪದಗಳು, ಪದಗುಚ್ಛಗಳು, ವಾಕ್ಯಪೂರಕಗಳು, ವಾಕ್ಯಗಳನ್ನು ಬಳಸುವ ಜನರೇ ಬಹುಮಟ್ಟಿಗೆ ಅವಳ ಸುತ್ತಮುತ್ತ ಇರುವುದು. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ಬಹುಶಃ ಇಂಗ್ಲಿಷ್ನಲ್ಲಿ ಅಥವಾ ಕಂಗ್ಲಿಷ್ನಲ್ಲಿ ( ಬಹುಮಟ್ಟಿಗೆ ಇಂಗ್ಲಿಷ್ ಬೆರೆತ ಕನ್ನಡ ಭಾಷೆ) ಯೋಚಿಸುತ್ತಾರೇನೋ. ಹೀಗಾಗಿ ಈ ವಿದ್ಯಾರ್ಥಿನಿಗೆ ತನ್ನ ಪರೀಕ್ಷೆಯಲ್ಲಿ entertainment ಎಂಬ ಇಂಗ್ಲಿಷ್ ಪದಕ್ಕೆ ‘ಮನರಂಜನೆ’ ಎಂಬ ಕನ್ನಡದ ಪದ ಹೊಳೆದಿಲ್ಲ.
ಕನ್ನಡ ಉಳಿಯಬೇಕಾದರೆ ಅದನ್ನು ಅದರ ಎಲ್ಲ ಪದಗಳೊಂದಿಗೆ ಬಳಸುವುದು ಎಷ್ಟು ಮುಖ್ಯ ಎಂಬುದು ನನಗೆ ಇನ್ನಷ್ಟು ಮನದಟ್ಟಾಗುವಂತೆ ಮಾಡಿದ ಅನುಭವ ಇದು. ಮಕ್ಕಳಿಗೆ ಕನ್ನಡ ಕಲಿಸುವ ಹಿರಿಯರು ಅದರಲ್ಲೂ ಕನ್ನಡ ಅಧ್ಯಾಪಕರು ವಿಶೇಷವಾಗಿ ಗಮನಿಸಬೇಕಾದ ವಿಷಯ ಇದು ಎಂದು ನನಗನ್ನಿಸಿತು. ಮಕ್ಕಳ ಕಿವಿಯ ಮೇಲೆ ಎಷ್ಟು ಹೆಚ್ಚು ಹೆಚ್ಚು ಕನ್ನಡ ಪದಗಳು ಬೀಳುತ್ತವೋ ಅಷ್ಟು ಅಷ್ಟು ಅವರು ಕನ್ನಡ ಭಾಷೆಗೆ ತೆರೆದುಕೊಳ್ಳುತ್ತಾರೆ. ಕನ್ನಡ ಉಳಿಯುವುದು ಮತ್ತು ಬೆಳೆಯುವುದು ಅದನ್ನು ಬಳಸುವುದರಿಂದಲೇ ಅಲ್ಲವೇ?