ಈ ತಿಂಗಳು ಅಂದರೆ ನವೆಂಬರ್ 2023ರ ಕಸ್ತೂರಿ ಮಾಸಪತ್ರಿಕೆಯಲ್ಲಿ ಒಂದು ಉತ್ತಮ ಲೇಖನ ಬಂದಿದೆ. ಜಯತನಯ ಎಂಬವರು ಬರೆದ “ಕನ್ನಡ ಹಿತರಕ್ಷಣೆಗೆ ಏನು ಮಾಡಬೇಕು?” ಎಂಬ ಲೇಖನ ಅದು. ಆ ಲೇಖನದಲ್ಲಿನ ಒಂದು ವಿಷಯ ನನ್ನ ಗಮನ ಸೆಳೆಯಿತು. ಪೆಟ್ರೋಲನ್ನು ಉಳಿಸಬೇಕು ಅಂದರೆ ಅದನ್ನು ಬಳಸಬಾರದು, ಆದರೆ ಕನ್ನಡವನ್ನು ಉಳಿಸಬೇಕು ಅಂದರೆ ಅದನ್ನು ಬಳಸಬೇಕು ಎಂಬ ಮಾತು ಅದು. ಎಷ್ಟು ನಿಜ ಅಲ್ಲವೇ?
“ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ, ಭಾಷೆ ಬಳಸಿ ಬಳಸಿ ಮಾಡ್ಬೇಕ್ ನಾವೆ ಕನ್ನಡ ಸಿಂಗಾರ” ಎಂಬ ಹಾಡು ಕೂಡ ಇದನ್ನೇ ಹೇಳುತ್ತೆ( ಪಾರ್ವತೀಸುತ ಅವರ ರಚನೆ).
ಇದೆಲ್ಲದರ ತಾತ್ಪರ್ಯ ಏನೆಂದರೆ ನಾವು ಕನ್ನಡ ಭಾಷೆಯನ್ನು ಉಳಿಸಬೇಕು ಅನ್ನುವ ಆಸೆ ಹೊಂದಿದ್ದರೆ ಅದನ್ನು, ಅದರ ಗರಿಷ್ಠ ಪದಗಳೊಂದಿಗೆ ಹೆಚ್ಚು ಹೆಚ್ಚಾಗಿ ಬಳಸಬೇಕು. ಉದಾಹರಣೆಗೆ, ಜನರು ದೈನಂದಿನ ಮಾತುಗಳಲ್ಲಿ ಸಾಮಾನ್ಯವಾಗಿ ಬಳಸುವ ಎಷ್ಟೋ ಪದಗಳಿಗೆ ನಾವು ಕನ್ನಡ ಬಳಸಬಹುದು. ಕೆಳಗಿನ ಪಟ್ಟಿ ನೋಡಿ.
ನೈಟಲ್ಲಿ – ರಾತ್ರಿಯಲ್ಲಿ
ಟೈಯರ್ಡ್ ಆಗಿತ್ತು – ಸುಸ್ತಾಗಿತ್ತು
ಓಪನ್ ಇದೆಯಾ – ತೆರೆದಿದ್ಯಾ
ಕ್ಲೋಸ್ ಆಗಿದೆ – ಮುಚ್ಚಿದೆ
ಲೇಟ್ ಆಯ್ತು – ತಡ ಆಯ್ತು
ನ್ಯೂಸ್ ಪೇಪರ್ – ಸುದ್ದಿ ಪತ್ರಿಕೆ
ಕಾಸ್ಟ್ಲಿ – ದುಬಾರಿ
ಚೀಪ್ – ಅಗ್ಗ
ಟಿಫನ್ – ತಿಂಡಿ
ಕ್ಯೂಟ್ – ಮುದ್ದು
ಕೆಲವರು ಕೇಳಬಹುದು ” ಅಯ್ಯೋ, ಏನೀಗ? ನಮ್ಗೂ ಆ ಕನ್ನಡ ಪದಗಳು ಗೊತ್ತಿದಾವೆ. ಏನೋ ಒಂದು. ಅರ್ಥ ಆದರೆ ಸಾಕಲ್ವಾ? ಅಷ್ಟೊಂದು ಮಿಜಿಮಿಜಿ ಮಾಡಕ್ಕೆ ಏನಿದೆ?” ಎಂದು. ಆದರೆ, ಯೋಚಿಸಿ ನೋಡಿದರೆ ಇದರ ಮಹತ್ವ ಗೊತ್ತಾಗುತ್ತೆ. ನಾವು ಈ ಕನ್ನಡ ಪದಗಳನ್ನು ಬಳಸದಿದ್ದರೆ ನಮ್ಮೊಂದಿಗೆ ಮಾತಾಡುವ ಮಕ್ಕಳಿಗೆ, ಪರಭಾಷಿಕರಿಗೆ ಇವುಗಳ ಪರಿಚಯವೇ ಆಗುವುದಿಲ್ಲ. ಬಳಸದೆ ಬಳಸದೆ ಆ ಪದಗಳು ಬಳಕೆಯಿಂದ ಹೊರಟೇ ಹೋಗುತ್ತವೆ ಅಲ್ಲವೇ? ಕನ್ನಡ ಭಾಷೆಯು ಶ್ರೀಮಂತವಾಗುವುದು ಅದರ ಪದಗಳಿಂದ ತಾನೇ? ; ಅಂದರೆ ಕನ್ನಡ ಮಾತಾಡುವವರು ಆದಷ್ಟೂ ಹೆಚ್ಚಿನ ಸಂಖ್ಯೆಯ ಕನ್ನಡ ಪದಗಳನ್ನು ಬಳಸಿದಾಗ ತಾನೇ?