“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ.
ಮಂಟೆಸ್ವಾಮಿ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ ಸಂವಹನ ಕಲೆಯು ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ. ಸ್ವಲ್ಪ ಮಾತು, ಸ್ವಲ್ಪ ಹಾಡು, ಸಹ ಗಾಯಕರೊಂದಿಗೆ ಪ್ರೇಕ್ಷಕರೊಂದಿಗೆ ಆತ್ಮೀಯ ಸಂವಾದ, ಅಹಹಾ, ಯಲಯಲಾ, ಅರೆರೇ ಎಂಬ ಉದ್ಗಾರಗಳು..ಹೌದಪ್ಪಾ, ಯಾಕಪ್ಪಾ…ಏನಪ್ಪಾ – ಈ ಮುಂತಾದ ಸಂವಾದ ಪೂರಕಗಳು …. ಇವೆಲ್ಲ ಸೇರಿದ ಒಂದು ಭಾವಭರಿತ, ರಸಭರಿತ ತುಂಬು ಅಭಿವ್ಯಕ್ತಿಯಿಂದಾಗಿ, ಕ್ಷಣಾರ್ಧದಲ್ಲಿ ಪ್ರೇಕ್ಷಕ ಸಮುದಾಯದೊಂದಿಗೆ ಒಂದು ಹೃದ್ಯ ಸಂಪರ್ಕವನ್ನು ಈ ಗಾಯಕರು ಏರ್ಪಡಿಸಿಕೊಂಡುಬಿಡುತ್ತಾರೆ. ಈ ಗಾಯಕರು ಗದ್ಯ ಮತ್ತು ಪದ್ಯವನ್ಬು ಬೆರೆಸುವ ರೀತಿ ಮಾತ್ರ ಅನನ್ಯವಾದುದು. ಇಷ್ಟೇ ಅಲ್ಲದೆ ಪರಂಪರಾನುಗತವಾಗಿ ಬಂದಿರುವ ಕಥಾವಸ್ತುವಿಗೆ ಸಮಕಾಲೀನ ಮತ್ತು ಅಂದಂದಿನ ದೇಶಕಾಲಗಳಿಗೆ ಸಂಬಂಧ ಪಟ್ಟ ಸಂಗತಿಗಳನ್ನು ಕೂಡ ಹೆಣೆದು, ಪುರಾಣವು ನಮ್ಮ ಸಮಕಾಲೀನ ಕಥೆಯೇನೋ, ಇಲ್ಲೇ ಈಗ ಜರುಗುತ್ತಿದೆಯೇನೋ ಎಂಬ ಭಾವನೆಯನ್ನು ಅವರು ಪ್ರೇಕ್ಷಕರಲ್ಲಿ ತರುತ್ತಾರೆ. ಈ ಅಭಿವ್ಯಕ್ತಿಯ ಕ್ರಮವು ಖಂಡಿತವಾಗಿಯೂ ಕನ್ನಡ ನಾಡಿನ ಒಂದು ಸಾಂಸ್ಕೃತಿಕ ಸಂಪತ್ತು. ಈ ಸಂವಾದವು ಜನಪದ ಸಂಸ್ಕೃತಿಯ ಸಿರಿಯನ್ನು ಮತ್ತು ಮಾನವ ಸಂಬಂಧಗಳನ್ನು ಬೆಳೆಸುವಲ್ಲಿ ಮತ್ತು ಕಾಪಾಡಿಕೊಳ್ಳುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುವಂಥದ್ದು.